
ಬೆಂಗಳೂರು, ನವೆಂಬರ್ 3: ಬಂಗಾಳ ಕೊಲ್ಲಿಯಲ್ಲಿ ಮುರಸು ಚಂಡಮಾರುತ ತೀವ್ರಗೊಂಡಿದ್ದು, ಆಂಧ್ರಪ್ರದೇಶದತ್ತ ಮುನ್ನುಗ್ಗುತ್ತಿದೆ. ಇದರ ಪರಿಣಾಮ ಆಂಧ್ರಪ್ರದೇಶ ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು (ನವೆಂಬರ್ 3) ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈಗಾಗಲೇ ಆಂಧ್ರಪ್ರದೇಶ ಮತ್ತು ಒಡಿಶಾ ಭಾಗಗಳಲ್ಲಿ ಅರ್ನಾಬ್ ಚಂಡಮಾರುತದ ಪರಿಣಾಮ ತೀವ್ರ ಹಾನಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಮುರಸು ಚಂಡಮಾರುತದ ಆತಂಕ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಂಡಿರುವ ಚಂಡಮಾರುತ ಆಂಧ್ರಪ್ರದೇಶದತ್ತ ಸಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ನೆಲ್ಲೂರು ಮತ್ತು ನರಸಾಪುರ ನಡುವಿನ ಕರಾವಳಿ ಭಾಗದಲ್ಲಿ ಚಂಡಮಾರುತ ಪ್ರವೇಶಿಸುವ ಸಾಧ್ಯತೆಯಿದೆ. ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಆಂಧ್ರಪ್ರದೇಶ, ತಮಿಳುನಾಡು, ರಾಯಲಸೀಮಾ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ವಾಯುಭಾರ ಕುಸಿತದ ಪರಿಣಾಮ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹಲವು ಪ್ರದೇಶಗಳಲ್ಲಿ ಮಳೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕೆಲವೆಡೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಜೊತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮುಖ್ಯವಾಗಿ ಒಣ ಹವೆ ಇರಲಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆ ಗಂಟೆಗೆ 30ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಕಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ನವೆಂಬರ್ 2ರಿಂದ 5ರವರೆಗೆ ಕರ್ನಾಟಕದ ಒಳನಾಡಿನ ಹಲವು ಭಾಗಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ನವೆಂಬರ್ 1ರಿಂದ 5ರವರೆಗೆ ಕರಾವಳಿ ಭಾಗದ ಪ್ರತ್ಯೇಕ ಸ್ಥಳಗಳಲ್ಲಿ ಸಿಡಿಲು ಸಹಿತ ಗುಡುಗು ಉಂಟಾಗುವ ಮುನ್ಸೂಚನೆ ಇದೆ.
ಇದನ್ನೂ ಓದಿ: ಮುರಸು ಚಂಡಮಾರುತದ ಅಬ್ಬರ; ಚೆನ್ನೈನಲ್ಲಿ 20ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದು, ಸಮುದ್ರ ತೀರದಲ್ಲಿ ಹೈ ಅಲರ್ಟ್
ಸೋಮವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಕೆಲವೆಡೆ ಹಾಗೂ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ 2 ಸೆಂ.ಮೀ, ಬಂಟ್ವಾಳ, ಸುಬ್ರಹ್ಮಣ್ಯ ಮತ್ತು ಪುತ್ತೂರು ಎಚ್‌ಎಂಎಸ್‌ನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಇನ್ನು ರಾಜ್ಯದ ಬಯಲುಸೀಮೆಯಲ್ಲಿ ಮಂಡ್ಯ ಎಡಬ್ಲ್ಯೂಎಸ್‌ನಲ್ಲಿ ಕನಿಷ್ಠ 18.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 am, Tue, 3 November 26