ಕೊಡಗು: ಸ್ಪೀಡ್ ಬೋಟ್ ದುರಂತದಲ್ಲಿ ಗುಜರಾತ್ ದಂಪತಿ ಸಾವು ಬೆನ್ನಲ್ಲೇ ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಸ್ಥಗಿತ

ಕೊಡಗಿನ ಹಾರಂಗಿ ಹಿನ್ನೀರಿನಲ್ಲಿ ಸ್ಪೀಡ್ ಬೋಟ್ ಮಗುಚಿ ಗುಜರಾತ್ ಮೂಲದ ದಂಪತಿ ಮೃತಪಟ್ಟ ಬೆನ್ನಲ್ಲೇ ಜಲಸಾಹಸ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಜಲಕ್ರೀಡೆ ನಡೆಸದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸುವುದಾಗಿ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದ್ದಾರೆ.

ಕೊಡಗು: ಸ್ಪೀಡ್ ಬೋಟ್ ದುರಂತದಲ್ಲಿ ಗುಜರಾತ್ ದಂಪತಿ ಸಾವು ಬೆನ್ನಲ್ಲೇ ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಸ್ಥಗಿತ
ಹಾರಂಗಿ ಜಲಾಶಯದ ನೀರು
Edited By:

Updated on: Nov 16, 2026 | 12:24 PM

ಮುಖ್ಯಾಂಶಗಳು

  • ಹಾರಂಗಿ ಹಿನ್ನೀರಿನಲ್ಲಿ ಜಲಕ್ರೀಡೆ ಚಟುವಟಿಕೆ ತಾತ್ಕಾಲಿಕ ಸ್ಥಗಿತ
  • ಸ್ಪೀಡ್ ಬೋಟ್ ಮಗುಚಿ ಗುಜರಾತ್ ದಂಪತಿ ಸಾವು ಬೆನ್ನಲ್ಲೇ ಕ್ರಮ
  • ಅಪಘಾತದ ನಿಖರ ಕಾರಣ ಪತ್ತೆಗೆ ಸಮಗ್ರ ತನಿಖೆ

ಮಡಿಕೇರಿ, ನವೆಂಬರ್ 16: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಹಿನ್ನೀರಿನಲ್ಲಿ ಸ್ಪೀಡ್ ಬೋಟ್ ದುರಂತದಲ್ಲಿ ಗುಜರಾತ್ ಮೂಲದ ದಂಪತಿ ಮೃತಪಟ್ಟ ಬೆನ್ನಲ್ಲೇ ಜಲಸಾಹಸ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಹಾರಂಗಿ ಹಿನ್ನೀರಿನಲ್ಲಿ ಯಾವುದೇ ಜಲಕ್ರೀಡೆ ಚಟುವಟಿಕೆ ನಡೆಸದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನವೆಂಬರ್ 13ರಂದು ಸ್ಪೀಡ್ ಬೋಟ್ ಅಪಘಾತ ಸಂಭವಿಸಿ ದಂಪತಿ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಶನಿವಾರವೇ (ನವೆಂಬರ್ 14) ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಜಲಸಾಹಸ ಕ್ರೀಡೆ ನಡೆಸುತ್ತಿದ್ದ ಖಾಸಗಿ ಕಂಪನಿ ಮೃತದೇಹಗಳನ್ನು ಬೆಂಗಳೂರಿನಿಂದ ವಿಮಾನದ ಮೂಲಕ ಗುಜರಾತ್‌ಗೆ ಕಳುಹಿಸಲು ವ್ಯವಸ್ಥೆ ಮಾಡಿತ್ತು.

ಘಟನೆ ಹಿನ್ನೆಲೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮೃತ ದಂಪತಿಯ ಮಕ್ಕಳಿಗೆ ಸಾಂತ್ವನ ಹೇಳಿದ್ದರು. ಈ ದುರಂತಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಅಲ್ಲದೆ, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಸಮಗ್ರ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು.

Loading...

2023ರಿಂದ ಜಲಸಾಹಸ ಕ್ರೀಡೆ ನಡೆಸುತ್ತಿದ್ದ ಖಾಸಗಿ ಕಂಪನಿ

ಹಾರಂಗಿ ಹಿನ್ನೀರಿನಲ್ಲಿ 2023ರಿಂದ ಖಾಸಗಿ ಕಂಪನಿಯೊಂದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅನುಮತಿಯೊಂದಿಗೆ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿತ್ತು. ಇದೇ ಕಂಪನಿಯ ಸ್ಪೀಡ್ ಬೋಟ್‌ನಲ್ಲಿ ದಂಪತಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಂಪನಿಯ ಉದ್ಯೋಗಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಸ್ಪೀಡ್ ಬೋಟ್ ತಿರುವಿನಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತಾದರೂ, ಬೋಟ್ ಅಡಿಯಲ್ಲಿ ಸಿಲುಕಿದ್ದ ದಂಪತಿಯನ್ನು ರಕ್ಷಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಉದ್ಯೋಗಿ ತಿಳಿಸಿದ್ದಾರೆ.

ಸುರಕ್ಷತಾ ಕ್ರಮ ಕೈಗೊಂಡಿದ್ದೆವು ಎಂದ ಪೊಲೀಸ್ ವರಿಷ್ಠಾಧಿಕಾರಿ

ಅಪಘಾತದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಆರ್. ಎನ್. ಬಿಂದುಮಣಿ, ಜಲಕ್ರೀಡೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಲೈಫ್ ಜಾಕೆಟ್‌ಗಳನ್ನು ಒದಗಿಸಲಾಗಿತ್ತು ಹಾಗೂ ಬೋಟ್‌ನಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾರಂಗಿ ಜಲಕ್ರೀಡಾ ಕೇಂದ್ರದಲ್ಲಿ ದುರಂತ: ಬೋಟ್ ಪಲ್ಟಿಯಾಗಿ ದಂಪತಿ ಸಾವು; ಇಬ್ಬರು ಮಕ್ಕಳ ರಕ್ಷಣೆ

ಇನ್ನು, ಕಂಪನಿಯು ವಿಮೆ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ ಮಗುಚಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ ಘಟನೆಗೆ ಕಾರಣ ಪತ್ತೆಹಚ್ಚುವ ಭರವಸೆಯನ್ನು ಶಾಸಕ ಮಂತರ್ ಗೌಡ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Mon, 16 November 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us