AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ತೂಕದಲ್ಲಿ ಮೋಸ: ಮೈಸೂರು ಎಪಿಎಂಸಿಯಲ್ಲಿ ತೂಕದ ಯಂತ್ರಗಳನ್ನೇ ಸೀಜ್ ಮಾಡಿಸಿದ ಸಚಿವ ರಿಜ್ವಾನ್ ಅರ್ಷದ್

ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್, ರೈತರಿಗೆ ತೂಕದಲ್ಲಿ ಮೋಸ ಮಾಡುತ್ತಿದ್ದ ತೂಕದ ಯಂತ್ರಗಳನ್ನು ಸೀಜ್ ಮಾಡಿಸಿದ್ದಾರೆ. ಮಳಿಗೆಗಳಿಗೆ ತೆರಳಿ ಯಂತ್ರಗಳನ್ನು ಪರಿಶೀಲಿಸಿದ ಸಚಿವರು, ಅಕ್ರಮ ಕಂಡುಬಂದ ಯಂತ್ರಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ರೈತರಿಗೆ ತೂಕದಲ್ಲಿ ಮೋಸ: ಮೈಸೂರು ಎಪಿಎಂಸಿಯಲ್ಲಿ ತೂಕದ ಯಂತ್ರಗಳನ್ನೇ ಸೀಜ್ ಮಾಡಿಸಿದ ಸಚಿವ ರಿಜ್ವಾನ್ ಅರ್ಷದ್
ಎಪಿಎಂಸಿ ಮಾರುಕಟ್ಟೆಗೆ ರಿಜ್ವಾನ್ ಅರ್ಷದ್ ಭೇಟಿ ಹಾಗೂ ಸೀಜ್ ಮಾಡಲಾದ ತೂಕದ ಯಂತ್ರಗಳು
ರಾಮ್​, ಮೈಸೂರು
| Edited By: |

Updated on: Nov 16, 2026 | 11:42 AM

Share

ಮೈಸೂರು, ನವೆಂಬರ್ 16: ರೈತರಿಗೆ ತೂಕದಲ್ಲಿ ಮೋಸ ಮಾಡುತ್ತಿದ್ದ ತೂಕದ ಯಂತ್ರಗಳ ವಿರುದ್ಧ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಕಾರ್ಯಾಚರಣೆ ನಡೆಸಿದ್ದಾರೆ. ಮೈಸೂರಿನ ಬಂಡಿಪಾಳ್ಯದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಸಚಿವರು, ಪ್ರತಿಯೊಂದು ಮಳಿಗೆಗೂ ತೆರಳಿ ತೂಕದ ಯಂತ್ರಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ರೈತರಿಗೆ ವಂಚನೆ ಮಾಡುತ್ತಿದ್ದ ತೂಕದ ಯಂತ್ರಗಳನ್ನು ಸೀಜ್ ಮಾಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ರೈತರು ಮಾರಾಟ ಮಾಡುವ ಕೃಷಿ ಉತ್ಪನ್ನಗಳ ತೂಕದಲ್ಲಿ ಯಾವುದೇ ವಂಚನೆ ನಡೆಯಬಾರದು ಎಂಬ ನಿಟ್ಟಿನಲ್ಲಿ ಸಚಿವರು ಪರಿಶೀಲನೆ ನಡೆಸಿದರು. ಪ್ರತಿ ಮಳಿಗೆಯಲ್ಲಿನ ತೂಕದ ಯಂತ್ರಗಳನ್ನು ಪರಿಶೀಲಿಸಿ, ಅಕ್ರಮ ಕಂಡುಬಂದ ಯಂತ್ರಗಳನ್ನು ವಶಕ್ಕೆ ಪಡೆಯುವಂತೆ ಕ್ರಮ ಕೈಗೊಂಡಿದ್ದಾರೆ. ಸಚಿವರ ಈ ದಿಢೀರ್ ಭೇಟಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

ಅನ್ನಸೇವಾ ಆ್ಯಪ್ ಮೂಲಕ ಇ-ಕೆವೈಸಿ: ರಾಜ್ಯದ ಹೊರಗೂ ಸೌಲಭ್ಯ ವಿಸ್ತರಣೆ

ಪಡಿತರ ಚೀಟಿಗಳ ಇ-ಕೆವೈಸಿಗಾಗಿ ಅನ್ನಸೇವಾ ಆ್ಯಪ್ ಬಳಕೆ ವಿಚಾರವಾಗಿಯೂ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿದ್ದಾರೆ. ಆ್ಯಪ್‌ನಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ. ವಿಶೇಷವಾಗಿ ಉದ್ಯೋಗ ಹಾಗೂ ಕೆಲಸದ ನಿಮಿತ್ತ ತಮ್ಮ ಊರುಗಳನ್ನು ಬಿಟ್ಟು ಬೇರೆಡೆ ವಾಸಿಸುತ್ತಿರುವವರಿಗೆ ಇದರಿಂದ ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ. ಮೊದಲು ಆ್ಯಪ್ ಬಳಕೆಯ ವ್ಯಾಪ್ತಿ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ದೇಶಾದ್ಯಂತ ವಿಸ್ತರಿಸಲಾಗಿದೆ. ಇದರಿಂದ ಹೊರರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೂ ಇ-ಕೆವೈಸಿ ಮಾಡಿಸಿಕೊಳ್ಳಲು ಅನುಕೂಲವಾಗಿದೆ ಎಂದಿದ್ದಾರೆ. ಇ-ಕೆವೈಸಿ ಮಾಡಲು ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಕೇಳಿರುವುದು ಸತ್ಯ. ಈ ರೀತಿ ಹಣ ಕೇಳಿದ ಸುಮಾರು 12 ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಲೋಪವಾಗದಂತೆ ಇಲಾಖೆ ಗಮನಹರಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಲಿನ ದರ ಏರಿಕೆಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಸಂಬಂಧವಿಲ್ಲ: ರಿಜ್ವಾನ್

ಹಾಲಿನ ದರ ಏರಿಕೆಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಲು ಮತ್ತು ಬಸ್ ಟಿಕೆಟ್ ದರ ಏರಿಕೆಗೂ ಸುಮಾರು ಒಂದು ತಿಂಗಳ ಮುಂಚೆಯೇ ಸಂಬಂಧಿತ ವರದಿಗಳು ಬಂದಿದ್ದವು. ತಾವು ಎಲ್ಲ ವರದಿಗಳನ್ನೂ ತರಿಸಿಕೊಂಡು ಪರಿಶೀಲಿಸಿದ್ದು, ವರದಿಯಲ್ಲಿನ ಸತ್ಯಾಂಶ ತಿಳಿದ ಬಳಿಕ ಬಹಿರಂಗಪಡಿಸಿದ್ದೇನೆ ಎಂದು ಮೈಸೂರಿನಲ್ಲಿ ಹೇಳಿದ್ದಾರೆ.

ಪೆಟ್ರೋಲ್‌ನಲ್ಲಿ ಶೇ 30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಆರೋಪ: ಕೇಂದ್ರಕ್ಕೆ ವರದಿ

ಪೆಟ್ರೋಲ್‌ನಲ್ಲಿ ಶೇ 30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣವಾಗುತ್ತಿದೆ ಎಂಬ ಆರೋಪದ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ರಾಜ್ಯದ ಆರು ಟರ್ಮಿನಲ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವಾಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ತಾಂತ್ರಿಕ ಹಾಗೂ ಪ್ರಯೋಗಾಲಯ ವರದಿಗಳನ್ನು ನಾಳೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದಿದ್ದಾರೆ.

ರಾಜ್ಯ ಸರ್ಕಾರ ಸಲ್ಲಿಸುವ ವರದಿಯ ಆಧಾರದಲ್ಲಿ ಕೇಂದ್ರ ಕ್ರಮ ಕೈಗೊಳ್ಳಬೇಕು. ಕೇಂದ್ರದಿಂದ ಕ್ರಮವಾಗದಿದ್ದರೆ ರಾಜ್ಯದ ವ್ಯಾಪ್ತಿಯಲ್ಲಿ ಸಾಧ್ಯವಿರುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದು ಪೆಟ್ರೋಲ್ ಬಂಕ್‌ಗಳ ಸಮಸ್ಯೆಯಲ್ಲ. ಬಂಕ್‌ಗಳಿಗೆ ಪೆಟ್ರೋಲ್ ಪೂರೈಸುವ ಟರ್ಮಿನಲ್‌ಗಳಲ್ಲೇ ಎಥೆನಾಲ್ ಮಿಶ್ರಣವಾಗುತ್ತದೆ. ಹೆಚ್ಚಿನ ಪ್ರಮಾಣದ ಮಿಶ್ರಣದಿಂದ ಜನಸಾಮಾನ್ಯರು ಮಾತ್ರವಲ್ಲದೆ ಪೆಟ್ರೋಲ್ ಬಂಕ್‌ಗಳಿಗೂ ಸಮಸ್ಯೆಯಾಗುತ್ತಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ಅಕ್ಕಿ ಕಾಳಸಂತೆ ದಾಸ್ತಾನು ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

ಭೀಕರ ಬರಗಾಲದಿಂದ ಭತ್ತದ ಬೆಳೆ ಕುಂಠಿತವಾಗಿದ್ದು, ಅಕ್ಕಿ ದಾಸ್ತಾನಿನ ಮೇಲೂ ಪರಿಣಾಮ ಬೀರಿದೆ ಎಂದು ಸಚಿವರು ಹೇಳಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆದು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎರಡು ತಿಂಗಳಲ್ಲಿ 18 ಲಕ್ಷ ಕೆಜಿಗೂ ಹೆಚ್ಚು ಅಕ್ಕಿ ಸೀಜ್: ಕಳ್ಳಸಾಗಣೆ, ಅಕ್ರಮ ಸಂಗ್ರಹಣೆ ವಿರುದ್ಧ ಆಹಾರ ಇಲಾಖೆ ಕಠಿಣ ಕ್ರಮ

ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್‌ಗಳನ್ನು ಸೀಜ್ ಮಾಡಲಾಗಿದೆ. ಈ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಕ್ಕಿ ದಾಸ್ತಾನುಗಳ ಮೇಲೆ ದಾಳಿ ನಡೆಸಲಾಗಿದೆ. ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More