
ಕೊಡಗು, ಆಗಸ್ಟ್ 22: ಪ್ರಕೃತಿ ಸೌಂದರ್ಯವನ್ನು ಸವಿಯಲೆಂದು ಕೊಡಗಿಗೆ (Kodagu) ಆಗಮಿಸಿದ್ದ ಪ್ರವಾಸಿಗರೊಬ್ಬರು ಕಾಡಾನೆ ದಾಳಿಗೆ ಸಿಲುಕಿ ದುರಂತ ಅಂತ್ಯ (death) ಕಂಡಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ ಮುರಳಿಕೃಷ್ಣ (43) ಮೃತ ದುರ್ದೈವಿ. ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಜೆಯ ಮಜಾ ಕಳೆಯಲು ಬೆಂಗಳೂರಿನಿಂದ ಆಗಮಿಸಿದ್ದ ಮುರಳಿಕೃಷ್ಣ ತೆರಾಲು ಗ್ರಾಮದ ಹೋಂಸ್ಟೇ ಒಂದರಲ್ಲಿ ಉಳಿದುಕೊಂಡಿದ್ದರು. ಮುಂಜಾನೆ ನಿಸರ್ಗದ ಸವಿಯನ್ನು ಆಸ್ವಾದಿಸುತ್ತಾ ವಾಯುವಿಹಾರಕ್ಕೆ (ವಾಕಿಂಗ್) ತೆರಳಿದ್ದ ವೇಳೆ, ಎದುರಾದ ಒಂಟಿ ಸಲಗ ಏಕಾಏಕಿ ಇವರ ಮೇಲೆ ದಾಳಿ ಮಾಡಿದೆ. ಕಾಡಾನೆ ದಾಳಿಗೆ ಸಿಲುಕಿದ ಮುರಳಿಕೃಷ್ಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷ: 8 ತಿಂಗಳಲ್ಲಿ ಐವರು ಸಾವು; ಮೆಗಾ ಆಪರೇಷನ್ ಶುರು
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು ಪರಿಶೀಲನೆ ಮಾಡಿದರು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಲಾರಿ ಹರಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಡಿಕೇರಿ ನಗರದ ಶಾಹಿಲ್ (24) ಮೃತ ಯುವಕ. ಈ ಸಂಬಂಧ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕರೆಯಲ್ಲಿ ಸಿಲುಕಿದ್ದ ಕಾಡಾನೆ ಬಚಾವ್, 2 ದಿನ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮುಂಜಾನೆಯ ದಟ್ಟ ಮಂಜು ಹಾಗೂ ವೃತ್ತದಲ್ಲಿನ ಹೈಮಾಸ್ಟ್ ಸೇರಿದಂತೆ ಯಾವುದೇ ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದೆ ಕತ್ತಲು ಆವರಿಸಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣವೆನ್ನಲಾಗಿದ್ದು, ಸ್ಥಳೀಯ ಆಡಳಿತದ ಇಂತಹ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.