ಹಿಂಗಾರು ಸಮೃದ್ದಿ, ಸಾವು-ನೋವು ಹೆಚ್ಚಾಗಲಿವೆ: ಇಲ್ಲಿದೆ ಕೋಡಿಶ್ರೀ ಭವಿಷ್ಯವಾಣಿಯ ವಿವರ
ಹಾಸನದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ (ಕೋಡಿ ಶ್ರೀ) ಈ ವರ್ಷದ ಮಳೆ ಮತ್ತು ಬೆಳೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಂಗಾರು ಮಳೆ ಮತ್ತು ಹಿಂಗಾರು ಮಳೆ ಬಗ್ಗೆ ಮಾತನಾಡಿದ್ದು, ಶುಭವಾಗುವ ಲಕ್ಷಣ ಇದೆ ಎಂದಿದ್ದಾರೆ. ಜೊತೆಗೆ ನೇಪಾಳ ರೀತಿಯಲ್ಲಿ ದಕ್ಷಿಣ ಭಾರತದಲ್ಲೂ ಸಂಭವಿಸಲಿದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಹಾಗಾದ್ರೆ, ಈ ವರ್ಷದ ಶ್ರಾವಣ ಮಾಸದ ಭವಿಷ್ಯದಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಹಾಸನ, (ಸೆಪ್ಟೆಂಬರ್ 10): ಕೋಡಿಮಠದ ಶ್ರೀಗಳು ನೇಪಾಳದಂತೆ ದಕ್ಷಿಣ ಭಾರತದಲ್ಲೂ ಪ್ರವಾಹದಂತಹ ಭೀಕರ ಘಟನೆಗಳು ನಡೆಯುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಮುದ್ರಗಳು ನುಗ್ಗಿ ಊರುಗಳು ಮುಳುಗುವ ಎಚ್ಚರಿಕೆ ನೀಡಿದ ಅವರು, ಹಿಂಗಾರು ಮಳೆ ಸಮೃದ್ಧವಾಗಿ ರೈತರಿಗೆ ಪರಿಹಾರ ಸಿಗಲಿದೆ ಎಂದೂ ತಿಳಿಸಿದ್ದಾರೆ. ಹಾಸನದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ (ಕೋಡಿಶ್ರೀ), ಈ ವರ್ಷದ ಭವಿಷ್ಯವನ್ನು ನಾನು ಮೊದಲೇ ಹೇಳಿದ್ದೆ.ಮುಂಗಾರು ಮಳೆ ವಿರಳ, ಹಿಂಗಾರು ಮಳೆ ಆಗುತ್ತದೆ. ಜನ ಜಂಗುಳಿಯಾಗುತ್ತದೆ, ಅನ್ನ, ಆಹಾರ, ನೀರಿಗೆ ಕೊರತೆಯಾಗುತ್ತದೆ. ಸಾವು-ನೋವುಗಳು ಹೆಚ್ಚಾಗುತ್ತದೆ. ವಿಪರೀತವಾದ ಪ್ರವಾಹ ಆಗುತ್ತೆ ಅಂಥ ಹೇಳಿದ್ದೆ, ಈಗ ಅದು ನಡೆಯುತ್ತಿದೆ. ಈಗ ಇಲ್ಲಿಂದ ಕಷ್ಟ ಮುಂದುವರೆಯುತ್ತೆ. ಆದರೂ ಹಿಂಗಾರು ಮಳೆ ಶುಭವಾಗುವ ಲಕ್ಷಣ ಇದೆ ಎಂದಿದ್ದಾರೆ.
ಹಿಂಗಾರು ಮಳೆ ಸಮೃದ್ದಿಯಾಗುತ್ತೆ
ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ ಇದೀಗ ಹಿಂಗಾರು ಸಮೃದ್ದಿಯಾಗುತ್ತದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ. ಹಿಂಗಾರು ಮಳೆ ಶುಭವಾಗುವ ಲಕ್ಷಣ ಇದೆ. ಕೆರೆ, ಕಟ್ಟೆಗಳು ತುಂಬುತ್ತವೆ, ಅದರ ಬಗ್ಗೆ ತೊಂದರೆಯಿಲ್ಲ. ಹಿಂಗಾರು ಮಳೆ ಸಮೃದ್ದಿಯಾಗುತ್ತದೆ. ಹಿಂಗಾರು ಮಳೆ ಆಗುತ್ತೆ, ಶೇಕಡಾ 90 ಜನರಿಗೆ ಪರಿಹಾರ ಸಿಗುತ್ತೆ ಎಂದು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿಗೆ ಸಿಎಂ ಯೋಗ: ನಿಜವಾಯ್ತು ಕೋಡಿಶ್ರೀ ಭವಿಷ್ಯ, ಸಿದ್ದರಾಮಯ್ಯ ಬಗ್ಗೆ ಅಂದು ಸ್ವಾಮೀಜಿ ಹೇಳಿದ್ದೇನು?
ದಕ್ಷಿಣ ಭಾತರದಲ್ಲಿ ಪ್ರಕೃತಿ ವಿಕೋಪದ ಎಚ್ಚರಿಕೆ
ಉತ್ತರ ಭಾರತದ ನೇಪಾಳದಲ್ಲಿ ನಡೆದ ಘಟನೆಯಂತೆ ದಕ್ಷಿಣ ಭಾತರದಲ್ಲೂ ಆಗುವ ಲಕ್ಷಣ ಇದೆ. ಸಾವು-ನೋವು, ದುಃಖ, ಊರುಗಳು ಕೊಚ್ಚಿ ಹೋಗುವ ಘಟನೆಗಳು ಇವೆ. ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ನಾನು ಎರಡ್ಮೂರು ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ದೇಶಗಳು ಮುಳುಗುತ್ತವೆ, ವಿಪರೀತವಾದ ನೀರು, ಜನಜಂಗುಳಿ, ಯುದ್ಧವಾಗುತ್ತದೆ. ಜನನಿಯಂತ್ರಣ ತಪ್ತಾರೆ. ಆಳುವವರು ಅತೃಪ್ತರಾಗುತ್ತಾರೆ.ದಿನ ಕ್ರಮೇಣ ಪ್ರಕೃತಿ ವಿರೋಧವಾಗಿದ್ದರಿಂದ ನೀರು ಸಿಗಲಿಲ್ಲ. ಜಗತ್ತಿನಾದ್ಯಾಂತ ಮಿಲಿಯನ್‌ಗಟ್ಟಲೆ ಬೋರ್‌ವೆಲ್‌ಗಳನ್ನು ಕೊರೆದರು. ಬಂಡೆ ಮೇಲೆ ಭೂಮಿ ನಿಂತಿರುವುದು. ಅದರಿಂದ ಬೇಸ್‌ಮೆಂಟ್ ಲೂಸ್ ಆಯಿತು. ಇದರಿಂದ ಪ್ರವಾಹ, ಭೂಮಿ ಕಂಪನ ಜಾಸ್ತಿಯಾಯಿತು ಎಂದಿದ್ದಾರೆ.
ಭೂಮಿ ಕೊರೆದಿದ್ದರಿಂದ ಗಟ್ಟಿ ಭೂಮಿ ಬಟಾಬಯಲಾಯ್ತು
ಯಾವುದೇ ವಿಚಾರ ಮಾಡಬೇಕಾದರೂ ನೈಜ ಕಾರಣ ಬೇಕು. ಯಾವುದೇ ಮನೆ ಕಟ್ಟುವಾಗ ಭೂಮಿ ನಿಲ್ಲಬೇಕಾದರೆ ತಳಪಾಯ ಮುಖ್ಯ. ಕಾಲಜ್ಞಾನದಲ್ಲಿ ಒಂದು ಮಾತಿದೆ,ಕಟ್ಟೆ ಇಲ್ಲದ ಬಾವಿ ಹುಟ್ಟಿ, ನೆಟ್ಟ ನೀ ಸುರಂಗವ ಕೊರೆದು, ಗಟ್ಟಿ ಭೂಮಿ ಬಟ್ಟ ಬಯಲಾಯಿತು. ಹಿಂದಿನ ಕಾಲದಲ್ಲಿ ನಲವತ್ತು, ಐವತ್ತು ಅಡಿ ಬಾವಿ ತೆಗೆಯುತ್ತಿದ್ದರು.ಆ ನೀರು ತಂದು ಕುಡಿದರೆ ಮನುಷ್ಯನಿಗೆ ಆರೋಗ್ಯವಿತ್ತು. ಈಗ ಸಾವಿರಾರು ಅಡಿ ಕೊರೆದು ಗಡಸು ನೀರು. ಮನುಷ್ಯನಿಗೆ ಆರೋಗ್ಯ ಇಲ್ಲ, ನರಗಳ ಕೊರತೆ, ಹಲ್ಲುಗಳು ಬಿದ್ದು ಹೋದವು, ಜ್ಞಾನ ಇಲ್ಲ, ಊಟ ಮಾಡಲು ಆಗಲ್ಲ, ಬಾರಿ ಹೊಡೆತ ಬಿದ್ದಿತು. ಭೂಮಿ ಕೊರೆದಿದ್ದರಿಂದ ಗಟ್ಟಿ ಭೂಮಿ ಬಟಾಬಯಲಾಯಿತು.
‘ನಾವು ನಂಬಿರುವ ಭಗವಂತನನ್ನು ಪ್ರಾರ್ಥನೆ ಮಾಡಬೇಕು’
ಭೂಮಿ ಕೊರೆದಿದ್ದರಿಂದ ಗಟ್ಟಿ ಭೂಮಿ ಬಯಲಾಯಿತು. ನೀರು ಸ್ಥಿರವಾಗಲಿಲ್ಲ. ಅದು ಎಲ್ಲಿ ಬೇಕು ಹರಿದುಬಂತು. ಹಾಗಾಗಿ ಸಾವು-ನೋವುಗಳಾದವು. ಇದಕ್ಕೆ ಪರಿಹಾರ ಎಂದರೆ ನಾವು ನಂಬಿರುವ ಭಗವಂತನನ್ನು ಪ್ರಾರ್ಥನೆ ಮಾಡುವುದು. ಆ ಭಗವಂತನ ಪ್ರಾರ್ಥನೆಯಿಂದ ಮುಂದೆ ಆಗುವುದು ತಪ್ಪಲಿ. ದಕ್ಷಿಣ ಭಾರತ, ಇಲ್ಲಿಯೂ ಅಪಾಯ ಆಗುವ ಲಕ್ಷಣ ಇದೆ. ಸಮುದ್ರಗಳು ನುಗ್ಗ್ಯಾವು, ಊರುಗಳು ಮುಳುಗ್ಯಾವು, ಅದೇ ರೀತಿ ಆಗುತ್ತೆ. ಇಲ್ಲಿಯೂ ಜನ ಜಂಗುಳಿ ಆಗುತ್ತದೆ. ಅದೆಲ್ಲಾ ಅಳಿಯಲಿ ಎಂದು ಭಗವಂತನ ಪ್ರಾರ್ಥನೆ ಮಾಡಬೇಕು.
‘ಮುಖ್ಯಮಂತ್ರಿ ಆಗ್ತೀಯಾ ಎಂದು ಹೇಳಿದ್ದೆ’
ನಮ್ಮ ಬಳಿ ಬಂದಾಗ ಮುಖ್ಯಮಂತ್ರಿ ಆಗ್ತೀಯಾ ಎಂದು ಹೇಳಿದ್ದೆ. ಹಾಗಾಗಿ ಅವರಿಗೆ ಆಶೀರ್ವಾದ ಕೊಡೋಣ, ಅಶುಭ ಹೇಳುವುದು ಬೇಡ. ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಆಗಿರುವುದು ಒಳ್ಳೆಯದು, ಪ್ರೋತ್ಸಾಹ ಕೊಡಬೇಕು. ಯುವಕರು, ಅನುಭವಿಗಳಿಗೆ, ಅಧಿಕಾರ ಸಿಕ್ಕಿದೆ. ಅದು ಯಾವ ಜನ್ಮದ ಪುಣ್ಯ. ಅದಕ್ಕೆ ನಾವು ಹೆಚ್ಚು ಪ್ರೋತ್ಸಾಹ ಕೊಡಬೇಕು. ಆಶೀರ್ವಾದ ಮಾಡಬೇಕು. ಇವರು ಮುಖ್ಯಮಂತ್ರಿ ಆದಮೇಲೆ ಬದಲಾವಣೆ ಕಾಣುತ್ತಿದೆ. ಸರಳವಾಗಿದ್ದಾರೆ, ಸಜ್ಜನರಾಗಿದ್ದಾರೆ, ಬಡವರ ನೋಡುವ ಶಕ್ತಿ ಮೊದಲಿಗು ಇತ್ತು. ಮುಂದುವರೆಯಲಿ ಎಂದು ಹಾರೈಸುತ್ತೇವೆ ಎಂದು ಡಿಕೆ ಶಿವಕುಮಾರ್ಗೆ ಆಶೀರ್ವಾದ ಮಾಡಿದ್ದಾರೆ.
ಈ ಹಿಂದೆ ಕೋಡಿಶ್ರೀ ನುಡಿದ ಭವಿಷ್ಯ
ಹಾಲು ಕೆಟ್ಟರೂ, ಹಾಲುಮತ ಕೆಡುವುದಿಲ್ಲ ಎನ್ನುವ ಮಾತು ನಮ್ಮಲ್ಲಿದೆ. ಹಾಲುಮತದವರ ಬಳಿ ಅಧಿಕಾರ ಇದ್ದರೆ, ಅದನ್ನು ವಾಪಸ್ ತೆಗೆದುಕೊಳ್ಳುವುದು ಕಷ್ಟ. ಅವರಾಗಿಯೇ, ಕೊಟ್ಟರೆ, ಬದಲಾಗಬಹುದೇ ಹೊರತು ಇಲ್ಲದಿದ್ದರೆ ಸಾಧ್ಯವಿಲ್ಲ ಎಂದು ಕೋಡಿಮಠದ ಶ್ರೀಗಳು ಹೇಳಿದ್ದರು. ಅದರಂತೆ ಇದೀಗ ಸಿದ್ದರಾಮಯ್ಯನವರು ಸ್ವಯಂ ಪ್ರೇರಿತರಾಗಿ ಸಿಎಂ ಕುರ್ಚಿಯನ್ನು ಬಿಟ್ಟುಕೊಟ್ಟಿದ್ದರಿಂದ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕಾಯ್ತು. ಈ ಮೂಲಕ ಕೋಡಿಶ್ರೀ ಅಂದು ನುಡಿದಿದ್ದ ಭವಿಷ್ಯ ನಿಜವಾಗಿದೆ.




