ಕೋಲಾರದಲ್ಲಿ ಮತ್ತೆ ಭ್ರೂಣ ಲಿಂಗ ಪತ್ತೆ: ನರ್ಸಿಂಗ್ ಹೋಮ್ ಮೇಲೆ ಆರೋಗ್ಯ ಇಲಾಖೆ ದಾಳಿ
ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಹಿನ್ನೆಲೆ ಕೋಲಾರ ಜಿಲ್ಲೆ ಬಂಗಾರಪೇಟೆ-KGF ರಸ್ತೆಯಲ್ಲಿರುವ ದೀಪಕ್ ನರ್ಸಿಂಗ್ ಹೋಮ್ ಮೇಲೆ ರಾಜ್ಯ & ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವೈದ್ಯೆ ಡಾ.ಸರಸ್ವತಿ ವಿರುದ್ಧ ಭ್ರೂಣ ಲಿಂಗ ಪತ್ತೆ ಹಚ್ಚುತ್ತಿದ್ದ ಆರೋಪ ಕೇಳಿಬಂದಿದೆ. ಸ್ಕ್ಯಾನಿಂಗ್ ಮಷೀನ್ ಜಪ್ತಿ ಮಾಡಲಾಗಿದೆ.
ಕೋಲಾರ, ಅಕ್ಟೋಬರ್ 29: ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ನರ್ಸಿಂಗ್ ಹೋಮ್ ಮೇಲೆ ರಾಜ್ಯ ಮತ್ತು ಕೋಲಾರ (Kolar) ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಿಲ್ಲೆಯ ಬಂಗಾರಪೇಟೆ-ಕೆಜಿಎಫ್ ದಾಸರಹೊಸಹಳ್ಳಿಯ ದೀಪಕ್ ನರ್ಸಿಂಗ್ ಹೋಮ್ ಮೇಲೆ ದಾಳಿ ಮಾಡಲಾಗಿದೆ. ವೈದ್ಯೆ ಡಾ.ಸರಸ್ವತಿ ವಿರುದ್ಧ ಭ್ರೂಣ ಲಿಂಗ ಪತ್ತೆ ಹಚ್ಚುತ್ತಿದ್ದ ಆರೋಪ ಕೇಳಿಬಂದಿದೆ.
ಕಳೆದ 2 ವರ್ಷದಲ್ಲಿ 2 ಬಾರಿ ದಾಳಿ ಮಾಡಿರುವ ಆರೋಗ್ಯ ಅಧಿಕಾರಿಗಳು ಇಂದು ಕೂಡ ದಿಢೀರ್ ಕಾರ್ಯಚರಣೆಗೊಂಡಿದ್ದು, ಸ್ಕ್ಯಾನಿಂಗ್ ಮಷೀನ್ ಜಪ್ತಿ ಮಾಡಿದ್ದಾರೆ. ಈ ಹಿಂದೆ ಜಪ್ತಿ ಮಾಡಿದ್ದ ಮಷೀನ್ ಬದಲು ಬೇರೆ ಮಷೀನ್ ಬಳಸಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಸದ್ಯ ದೀಪಕ್ ನರ್ಸಿಂಗ್ ಹೋಮ್ಗೆ ಆರೋಗ್ಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಭ್ರೂಣ ಲಿಂಗ ಪತ್ತೆ: ಸ್ಕ್ಯಾನಿಂಗ್ ಸೆಂಟರ್ ಮಾಹಿತಿ ಸಂಗ್ರಹಕ್ಕೆ ಡೆಡ್ಲೈನ್ ನಿಗದಿ
ರಾಜ್ಯ ಸಕ್ಷಮ ಪ್ರಾಧಿಕಾರದ ಡಾ.ವಿವೇಕ್ ದೊರೈ, ಉಪ ನಿರ್ದೇಶಕ ಪಿಸಿಪಿ ಎನ್ಡಿಟಿ ರಾಜೇಂದ್ರ, ಕೋಲಾರ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಂದನ್, ತಪಾಸಣೆ & ಮೇಲ್ವಿಚಾರಣಾ ಸಮಿತಿ ಸದಸ್ಯ ಡಾ.ರಾಜೇಂದ್ರ ಭಾಗಿಯಾಗಿದ್ದರು.
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಡ್ಯ ಹೆಣ್ಣು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ
ಮಂಡ್ಯದಲ್ಲಿ ಬೆಳಕಿಗೆ ಬಂದಿದ್ದ ಹೆಣ್ಣು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಪ್ರಕರಣ ಸಂಬಂಧ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಏನೆಲ್ಲಾ ಕ್ರಮಗಳನ್ನ ತೆಗೆದುಕೊಂಡಿದ್ದರು ಆರೋಪಿಗಳು ಮಾತ್ರ ಮಂಡ್ಯ ಜಿಲ್ಲೆಯಲ್ಲಿ ಕರಾಳದಂಧೆಯನ್ನ ಮುಂದುವರೆಸಿ ಕರುಳ ಬಳ್ಳಿಗಳನ್ನ ಕತ್ತರಿಸುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಬೇರೂ ಬಿಟ್ಟಿದ್ದ ಹೇಯಕೃತ್ಯವನ್ನ ಬುಡಸಮೇತ ಕಿತ್ತು ಹಾಕಲು ಮಂಡ್ಯ ಜಿಲ್ಲೆಯ ಪೊಲೀಸರು ಮುಂದಾಗಿದ್ದು, ಈ ಪ್ರಕರಣದಲ್ಲಿ ಆರು ಆರೋಪಿಗಳನ್ನ ಬಂಧಿಸಿದ್ದರು.
ಬನ್ನೂರಿನ ರಾಮಕೃಷ್ಣ, ಗುರು, ಮೈಸೂರಿನ ಸೋಮಶೇಖರ್ ಪಟೇಲ್, ಪಾಂಡವಪುರ ತಾಲ್ಲೂಕಿನ ಹಿರೇಮರಳಿ ಗ್ರಾಮದ ನವೀನ್, ಹರಳಹಳ್ಳಿಯ ಜಬ್ಬರ್, ಕೆ ಆರ್ ನಗರದ ಶಂಕರ್ ಬಂಧಿತ ಆರೋಪಿಗಳು. ಬಂಧಿತರಿಂದ ಸ್ಕ್ಸಾನಿಂಗ್ ಮಷೀನ್, ಕಾರುಗಳು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸ್ಕ್ಯಾನಿಂಗ್, ಕರ್ನಾಟಕದಲ್ಲಿ ಗರ್ಭಪಾತ: ಮೂವರು ವಶಕ್ಕೆ
ಅಂದಹಾಗೆ ಈ ಖತರ್ನಾಕ್ಗಳು ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಆಕ್ವೀಟ್ ಆಗಿದ್ದರು. ಆಸ್ಪತ್ರೆಗೆ ಸೋನೋಗ್ರಫಿ ಟೆಸ್ಟ್ ಮಾಡಿಸಿಕೊಳ್ಳಲು ಬರುವವರನ್ನ ಟಾರ್ಗೆಟ್ ಮಾಡಿ, ಡೀಲ್ ಮಾಡುತ್ತಿದ್ದರು. ಒಂದೊಂದು ಭ್ರೂಣ ಹತ್ಯೆಗೆ 10 ಸಾವಿರದಿಂದ 50 ಸಾವಿರ ರೂ. ಹಣ ಪಡೆಯುತ್ತಿದ್ದರು.
ಇದುವರೆಗೂ 50 ಕ್ಕೂ ಹೆಚ್ಚು ಭ್ರೂಣಗಳನ್ನ ಹತ್ಯೆ ಮಾಡಿದ್ದರು. ಆದರೆ ಯಾವದೇ ಪ್ರಕರಣದಲ್ಲಿ ಬಂಧನವಾಗಿರಲಿಲ್ಲ. ಆದರೆ ಮೇಲುಕೋಟೆ, ಪಾಂಡವಪುರ, ಬೆಳ್ಳೂರು ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಪೊಲೀಸರು ಈ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.