ಊರೇ ಮುಳುಗುವಷ್ಟು ಮಳೆ ಬಂದ್ರು, ಕೋಲಾರದ ಕ್ಯಾಲನೂರು ಕೆರೆಗೆ ಮಾತ್ರ ನೀರು ಬರ್ತಿಲ್ಲ; ಶಾಪ ತಗುಲಿರಬಹುದು ಎಂದ ಜನ
ಸುಮಾರು 400 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಕ್ಯಾಲನೂರು ದೊಡ್ಡ ಕೆರೆ ತುಂಬಿ 28 ವರ್ಷಗಳು ಕಳೆದಿವೆ. ಹೋಬಳಿ ಕೇಂದ್ರವಾಗಿರುವ ಕ್ಯಾಲನೂರು ಗ್ರಾಮದ ದೊಡ್ಡ ಕೆರೆ ಇದಾಗಿದ್ದು ಈ ಕೆರೆ ಸುತ್ತಲಿನ ಸುಮಾರು ಏಳೆಂಟು ಗ್ರಾಮಗಳು ಅವಲಂಬಿತವಾಗಿವೆ.
ಕೋಲಾರ: ಕಳೆದ ಹದಿನೈದು ದಿನಗಳಿಂದ ರಾಜ್ಯಾದ್ಯಂತ ಹಾಗೂ ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆರಾಯ ಅಬ್ಬರಿಸಿದ ಪರಿಣಾಮ ಜಿಲ್ಲೆಯ ಕೆರೆ ಕಟ್ಟೆಗಳೆಲ್ಲಾ ತುಂಬಿ ಹರಿದಿವೆ. ರಸ್ತೆಗಳು, ಮನೆ ಬಡಾವಣೆಗಳೆಲ್ಲವೂ ನೀರಿನಲ್ಲಿ ಮುಳುಗಿ ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ. ಆದರೆ ದುರಂತವೋ ಇಲ್ಲಾ ಶಾಪವೋ ಗೊತ್ತಿಲ್ಲ ಇದೊಂದು ಗ್ರಾಮದ ಕೆರೆಗೆ ಮಾತ್ರ ನೀರು ಬಂದಿಲ್ಲ.
ನಿರಂತವಾಗಿ ಮಳೆ ಬರುತ್ತಿದ್ದರೂ ಕೆರೆಗೆ ಮಾತ್ರ ನೀರು ಬರ್ತಿಲ್ಲ
ಕಳೆದ ಹದಿನೈದು ದಿನಗಳಿಂದಲೂ ಕೋಲಾರ ಜಿಲ್ಲೆಯಲ್ಲಿ ನಿರಂತರ ಮಳೆ ಸರಿಯುತ್ತಲೇ ಇದೆ. ಈ ಪರಿಣಾಮ ಜಿಲ್ಲೆಯ ಕೆರೆ ಕಟ್ಟೆಗಳೆಲ್ಲಾ ತುಂಬಿ ಹರಿಯುತ್ತಿವೆ. ಕೋಲಾರ ಜಿಲ್ಲೆಯ ದೊಡ್ಡಕೆರೆಗಳೆಲ್ಲಾ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಷ್ಟೇ ಅಲ್ಲ ರೈತರು ಬೆಳೆದ ನೂರಾರು ಎಕರೆ ಪ್ರದೇಶದ ಬೆಳೆ ನೀರು ಪಾಲಾಗಿ ಹೋಗಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಹೀಗೆ ಮಳೆಯಿಂದ ಇಷ್ಟೆಲ್ಲಾ ಸಂಭವಿಸಿದ್ದರೂ ಕೋಲಾರ ತಾಲ್ಲೂಕು ಕ್ಯಾಲನೂರು ಗ್ರಾಮದ ದೊಡ್ಡಕೆರೆಗೆ ಮಾತ್ರ ನೀರು ಬಂದಿಲ್ಲ.
ಕೆರೆ ತುಂಬಿ 28 ವರ್ಷಗಳಾಗಿದೆ
ಸುಮಾರು 400 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಕ್ಯಾಲನೂರು ದೊಡ್ಡ ಕೆರೆ ತುಂಬಿ 28 ವರ್ಷಗಳು ಕಳೆದಿವೆ. ಹೋಬಳಿ ಕೇಂದ್ರವಾಗಿರುವ ಕ್ಯಾಲನೂರು ಗ್ರಾಮದ ದೊಡ್ಡ ಕೆರೆ ಇದಾಗಿದ್ದು ಈ ಕೆರೆ ಸುತ್ತಲಿನ ಸುಮಾರು ಏಳೆಂಟು ಗ್ರಾಮಗಳು ಅವಲಂಬಿತವಾಗಿವೆ. ಜೊತೆಗೆ ಅಕ್ಕ ಪಕ್ಕದ ಗ್ರಾಮದ ಸಣ್ಣ ಕೆರೆಗಳು ಹಾಗೂ ಹಳ್ಳಕೊಳ್ಳಗಳು ತುಂಬಿ ಇದೇ ಕ್ಯಾಲನೂರು ದೊಡ್ಡಕೆರೆಗೆ ಹರಿಯುತ್ತಿತ್ತು. ಆದರೆ ಕೆಲವು ವರ್ಷಗಳಿಂದ ದೊಡ್ಡಕೆರೆಗೆ ಇದ್ದ ಎಲ್ಲಾ ರಾಜಕಾಲುವೆಗಳು ಹಾಗು ಪೋಷಕ ಕಾಲುವೆಗಳ ಜೊತೆಗೆ ಕೆರೆಯೇ ಬಹಳಷ್ಟು ಒತ್ತವರಿಯಾಗಿದೆ. ಪರಿಣಾಮ ಕೆರೆಗೆ ನೀರು ಬಾರದ ಹಿನ್ನೆಲೆ ಕೆರೆ 28 ವರ್ಷಗಳಿಂದಲೂ ತುಂಬುತ್ತಿಲ್ಲ. ಹೀಗಾಗಿ ಕೆರೆ ಸದ್ಯ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಇಷ್ಟಾದರೂ ಯಾರೊಬ್ಬರೂ ಈ ಬಗ್ಗೆ ಕ್ರಮ ವಹಿಸುತ್ತಿಲ್ಲ ಅನ್ನೋದು ಗ್ರಾಮಸ್ಥರಾದ ನವೀನ್ ಅವರ ಮಾತು.
ಯಾವುದಾದರೂ ಶಾಪ ತಗುಲಿರುವ ಆತಂಕ
ಇನ್ನು ಗ್ರಾಮಸ್ಥರು ಹೇಳುವಂತೆ ಈ ಕ್ಯಾಲನೂರು ಕೆರೆ ತುಂಬಿ 28 ವರ್ಷಗಳು ಕಳೆದಿವೆ. ಒಂದು ಕಡೆ ಕೆರೆಯ ಕಾಲುವೆಗಳು, ರಾಜಕಾಲುವೆಗಳು ಒತ್ತುವರಿಯಾಗಿದೆ. ಗ್ರಾಮದ ಹಲವು ಪ್ರಭಾವಿಗಳು ಕೆರೆಯನ್ನೇ ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಈ ಪರಿಣಾಮ ಕೆರೆಗೆ ನೀರು ಬರೋದಕ್ಕೆ ದಾರಿ ಇಲ್ಲದಂತಾಗಿದೆ. ಆದರೆ ಕೆರೆಗೆ ನೇರವಾಗಿ ಸುರಿದ ಮಳೆಯ ನೀರು ಕೂಡಾ ಒಂದು ಹನಿಯೂ ಕೆರೆಯಲ್ಲಿ ನಿಲ್ಲುತ್ತಿಲ್ಲ. ಹಾಗಾಗಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಗ್ರಾಮಕ್ಕೆ ಏನಾದರೂ ಕೆಡುಕಾಯಿತಾ ಅಥವಾ ಯಾರದ್ದಾದರೂ ಶಾಪ ತಟ್ಟಿದ್ಯಾ ಇದರಿಂದಾಗಿ ಗ್ರಾಮದ ಕೆರೆ ತುಂಬುತ್ತಿಲ್ವಾ ಅನ್ನೋ ಆತಂಕ ಗ್ರಾಮಸ್ಥರದ್ದಾಗಿದೆ. ಇನ್ನು ಗ್ರಾಮದ ಕೆರೆಗೆ ಹೊಂದಿಕೊಂಡಂತೆ ಹೊಯ್ಸಳರ ಕಾಲದ ಒಂದು ಶಿವ ದೇವಾಲಯವಿದೆ ಅದು ಶಿಥಿಲವಾಗಿತ್ತು. ಅದನ್ನೂ ಗ್ರಾಮಸ್ಥರು ಸೇರಿ ಜೀರ್ಣೋದ್ದಾರ ಮಾಡಿದ್ದಾರೆ. ಅದಾದ ನಂತರ ಕೆರೆಗೆ ನೀರು ಬರುತ್ತಿಲ್ಲ. ಇದೇ ಸ್ಥಿತಿ ಮುಂದುವರೆದರೆ ಗ್ರಾಮದ ಸುತ್ತಮುತ್ತಲಿನ ಬೋರ್ವೆಲ್ಗಳು ವ್ಯವಸಾಯ ಮಾಡಲು ಸಮರ್ಪಕ ನೀರಿಲ್ಲದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ಕೆರೆಯ ಸರ್ವೇ ಮಾಡಿ ನಂತರ ಒತ್ತುವರಿಯಾಗಿರುವ ಕೆರೆಯನ್ನು ತೆರವು ಮಾಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹ.
ಒಟ್ಟಾರೆ ಮಳೆಯಿಂದ ಅತಿವೃಷ್ಠಿಯಾಗಿ ಊರೂರೆ ಮುಳುಗಿ ಹೋಗುತ್ತಿದೆ ಅಷ್ಟೊಂದು ಮಳೆಯಾಗುತ್ತಿದ್ದರು ಕೂಡಾ ಕ್ಯಾಲನೂರು ಕೆರೆಗೆ ಅದ್ಯಾವ ಶಾಪ ಹಿಡಿದಿದೆಯೋ ಗೊತ್ತಿಲ್ಲ. ಎಷ್ಟು ಮಳೆ ಸುರಿದರೂ ಕೆರೆಗೆ ಮಾತ್ರ ನೀರು ಬರ್ತಿಲ್ಲ. ಹಾಗಾಗಿ ಅಧಿಕಾರಿಗಳು ಕೂಡಲೇ ಕೆರೆಗೆ ನೀರು ಬರುವ ದಾರಿ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ