`ಆಪರೇಷನ್ ಸಿಂಧೂರ’ ಕುರಿತು ಲೇವಡಿ ಮಾಡಿದ್ದ ಕಾಂಗ್ರೆಸ್ ಶಾಸಕ ಯುಟರ್ನ್..ಈಗ ಹೇಳಿದ್ದೇನು?
ಏನ್ ಯುದ್ಧ ಮಾಡಿದ್ರು, ಏನೂ ಮಾಡಿಲ್ಲ. ಏನ್ ಮಾಡಿದ್ದಾರೆ. ಸುಮ್ನೆ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಕಳಿಸಿಬಿಟ್ಟು ಬಂದ್ಬಿಟ್ಟು ಇದು ಮಾಡೋದಾ? ಇದಕ್ಕೆ ಪರಿಹಾರಾನಾ ಇದು. ನಮ್ಮ 28 ಜನ, 26 ಜನ ನಮ್ಮ ಭಾರತೀಯರು ಸತ್ತರಲ್ಲ. ಆ ಹೆಣ್ಮಕ್ಕಳಿಗೆ ಇದೇನಾ ಪರಿಹಾರ ಕೊಡೋದು? ಆ ಹೆಣ್ಮಕ್ಕಳಿಗೆ ಇದೇನಾ ನೀವು ಸಮಾಧಾನ ಮಾಡೋದು. ಆ ಹೆಣ್ಮಕ್ಕಳಿಗೆ ಇದೇನಾ ನೀವು ಗೌರವ ಕೊಡೋದು ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿ ವಿವಾದಾತ್ಮಕ ಸೃಷ್ಟಿಸಿಕೊಂಡಿದ್ದರು. ಇದಕ್ಕೆ ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆಯೇ ತಮ್ಮ ಹೇಳಿಕೆಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಕೋಲಾರ, (ಮೇ 16): ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ಆಪರೇಷನ್ ಸಿಂಧೂರ್ (Operation Sindoor) ಬಗ್ಗೆ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur G Manjunath) ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬದ್ದಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕೊತ್ತೂರು ಮಂಜುನಾಥ್ ಇದೀಗ ಯುಟರ್ನ್ ಹೊಡೆದಿದ್ದಾರೆ. ಆಪರೇಷನ್ ಸಿಂದೂರ್ ವಿಚಾರವಾಗಿ ನನಗೆ ಯಾವುದೇ ಅನುಮಾನವಿಲ್ಲ. ಕಾರ್ಯಾಚರಣೆ ಸಮಾಧಾನ ತಂದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಟಿವಿ9 ಜೊತೆ ಮಾತನಾಡಿರುವ ಕೊತ್ತೂರು ಮಂಜುನಾಥ್ , ಆಪರೇಷನ್ ಸಿಂದೂರ್ ವಿಚಾರವಾಗಿ ನನಗೆ ಯಾವುದೇ ಅನುಮಾನವಿಲ್ಲ. ಕಾರ್ಯಾಚರಣೆ ಸಮಾಧಾನ ತಂದಿಲ್ಲ ಎಂದು ಹೇಳಿದ್ದೇನೆ. ಮೊದಲು ಪೆಹಲ್ಗಾಮ್ ನಲ್ಲಿ 26 ಜನರನ್ನು ಕೊಲೆ ಮಾಡಿದ ಉಗ್ರರನ್ನು ಮೊದಲು ಸದೆಬಡಿಯಬೇಕಿತ್ತು. ನಂತರ ಪಾಕಿಸ್ಥಾನ ಕುಮ್ಮಕ್ಕು ಕೊಟ್ಟಿದ್ದ ಉಗ್ರವಾದಿಗಳ ನೆಲೆಗಳನ್ನು ಹೊಡೆದು ಸರ್ವನಾಶ ಮಾಡಬೇಕಿತ್ತು. ನಾನು ದೇಶದ ಬಗ್ಗೆ, ಸೈನಿಕರ ಬಗ್ಗೆ ಅಥವಾ ಪ್ರಧಾನಿಗಳ ಬಗ್ಗೆ ಹಗುರವಾಗಿ ಮತನಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಭಾರತ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಕಳ್ಸಿದ್ದು ಬಿಟ್ರೆ ಏನೂ ಮಾಡಿಲ್ಲ: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್
ಉಗ್ರರ ನೆನೆಗಳನ್ನು ಹೊಡೆದುಹಾಕಿ ಉಗ್ರರನ್ನು ಕೊಂದು ಹಾಕಿದ ಬಗ್ಗೆ ಹೇಳಿದ್ದನ್ನು ಕೇಳಿದ್ದೆ. ಅದರ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ. ಜನರು ನನ್ನ ಬಳಿ ಹೇಳಿಕೊಂಡ ಕೆಲವೊಂದು ವಿಚಾರಗಳನ್ನು ನಾನು ಹೇಳಿದ್ದೇನೆ. ದೇಶದ ಸಮಾನ್ಯ ಪ್ರಜೆಯಾಗಿ ನಾನು ಕೇಳಿದ್ದೇನೆ. ಈಗಲೂ ಮೊದಲು ಪೆಹಲ್ಗಾಮ್ ದಾಳಿಕೊರರನ್ನು ಮೊದಲು ಸದೆಬಡೆಯಬೇಕು ಎಂದರು.
ಅಷ್ಟಕ್ಕೂ ಮಂಜುನಾಥ್ ಹೇಳಿದ್ದೇನು?
ಸಾಮಾನ್ಯ ಪ್ರಜೆಗಳ ಮೇಲೆ ಯುದ್ದ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ, ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಪತಿಯರನ್ನು ಹೊಡೆದರೆ ಹೇಗೆ ಸಹಿಸುವುದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರುವುದಕ್ಕೆ ಪರವಾಗಿಲ್ಲ. ಇಲ್ಲಾ ಅಂದರೆ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದರು. ಅಂತಹದಕ್ಕೆ ಪರಿಹಾರ ಇದಲ್ಲ. ಬೇರಿನಿಂದ ಕೊಂಬೆ ತನಕ ಎಲ್ಲವನ್ನೂ ಹೊಡೆಯಬೇಕು. ಈ ಬಾರಿ ಒಳ್ಳೆಯ ಅವಕಾಶ ಇತ್ತು, ಆದರೆ ಏನೂ ಮಾಡಿಲ್ಲ ಎಂಬುದು ಬೇಸರ ತಂದಿದೆ. ಆಪರಷೇನ್ ಸಿಂದೂರ್ ಹೆಸರಿನಲ್ಲಿ ಅಷ್ಟು ಜನ, ಇಷ್ಟು ಜನ ಉಗ್ರರನ್ನು ಹೊಡೆದಿದ್ದೇವೆ ಎನ್ನುತ್ತಾರೆ. ಆದರೆ, ಇಲ್ಲಿಯವರೆಗೂ ಎಲ್ಲೂ ದೃಢವಾಗಿಲ್ಲ. ಮಾಧ್ಯಮಗಳಲ್ಲಿ ಬಂದಿದ್ದು ಬಿಟ್ಟರೆ ಎಲ್ಲೂ ನೋಡಿಲ್ಲ ಎಂದಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ