ಅನುದಾನದ ಕೊರತೆ; ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳಿಂದ ನೀಡಿಲ್ಲ ಗೌರವಧನ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳ ಫಲವಾಗಿ ಅದೆಷ್ಟೋ ಇಲಾಖೆಗಳ ಅನುದಾನ ಕಡಿತ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈಗ ಅಂಥಹದ್ದೇ ಮತ್ತೊಂದು ಇಲಾಖೆಯ ಅನುದಾನ ಕಡಿತ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ಕೋಲಾರ, ಆ.30: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government) ಬಂದ ಮೇಲೆ ಹಲವು ಇಲಾಖೆಗಳಲ್ಲಿ ಅನುಧಾನ ಕೊರತೆ ಎದ್ದು ಕಾಣುತ್ತಿದ್ದು, ಎಲ್ಲದಕ್ಕೂ ಗ್ಯಾರಂಟಿಗಳೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಈಗ ಅಂಥಾದೊಂದು ಅನುದಾನದ ಕೊರತೆ ಸಾಲಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸದಾಗಿ ಸೇರ್ಪಡೆಯಾಗಿದೆ. ಹೌದು, ಕಳೆದ ಮೂರು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರಿಗೆ ಗೌರವಧನ ನೀಡುತ್ತಿಲ್ಲ ಎಂದು ಅಂಗನವಾಡಿ ಸಿಬ್ಬಂದಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಮೂರು ತಿಂಗಳಿಂದ ಬಂದಿಲ್ಲ ಗೌರವಧನ
ನಮಗೆ ತಿಂಗಳಿಗೆ ನೀಡುವ ಗೌರವಧನದಿಂದಲೇ ನಮ್ಮ ಜೀವನ ನಡೆಸಬೇಕು. ಆದರೆ, ಈ ಸರ್ಕಾರ ಬಂದ ಮೇಲೆ ನಮಗೆ ಪ್ರತಿ ತಿಂಗಳು ಸರಿಯಾಗಿ ಗೌರವಧನ ನೀಡುತ್ತಿಲ್ಲ. ಎರಡು, ಮೂರು ತಿಂಗಳಿಗೊಮ್ಮೆ ನೀಡುತ್ತಿದ್ದಾರೆ. ಕೇಳಿದರೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರಂತೆ. ಇನ್ನು ಜೂನ್, ಜುಲೈ, ಆಗಸ್ಟ್ ತಿಂಗಳ ಸಂಬಳ ಬರಬೇಕಿದೆ. ಅದರ ಜೊತೆಗೆ ಅಂಗನವಾಡಿ ಬಾಡಿಗೆ ಕಟ್ಟಡದ ಬಾಡಿಗೆ, ಮಕ್ಕಳಿಗೆ ಮೊಟ್ಟೆ, ತರಕಾರಿ ಖರೀದಿಗೂ ಕೂಡ ಹಣ ಕೊಡುತ್ತಿಲ್ಲ. ಎಲ್ಲವನ್ನೂ ಅಂಗನವಾಡಿ ಕಾರ್ಯಕರ್ತೆಯರೇ ಹಣಕೊಟ್ಟು ಖರೀದಿ ಮಾಡಿಕೊಂಡು ಬಂದು ಮಾಡಬೇಕು. ನಮ್ಮ ಬಳಿ ಹಣ ಇಲ್ಲ ಅಂದರೂ ಕೂಡ ಸಾಲ ಮಾಡಿ ತಂದು ಅಂಗನವಾಡಿಗಳನ್ನು ನಡೆಸುತ್ತಿದ್ದೇವೆ. ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಅಳಲು ತೋಡಿಕೊಂಡರು.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 50/50 ಅನುಪಾತದಲ್ಲಿ ಅನುದಾನ ಬರುತ್ತದೆ. ಜಿಲ್ಲೆಯಲ್ಲಿ ಸುಮಾರು 2180 ಅಂಗನವಾಡಿಗಳಿದ್ದು, ಈ ಪೈಕಿ ಸುಮಾರು 4000 ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಈ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದಲೂ ಗೌರವಧನ ಸಿಕ್ಕಿಲ್ಲ. ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ‘ಕೇಂದ್ರ ಸರ್ಕಾರದ ಹಣ ಬಂದಿಲ್ವಾ, ಅಥವಾ ರಾಜ್ಯ ಸರ್ಕಾರದ ಹಣ ಬಂದಿಲ್ವ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ, ಅನುದಾನವಿಲ್ಲದ ಕಾರಣ ಇನ್ನೂ ಗೌರವಧನ ನೀಡುತ್ತಿಲ್ಲ. ಕಳೆದ ಮೇ ತಿಂಗಳಲ್ಲಿ ಗೌರವಧನ ನೀಡಿರೋದು, ಅದಾದ ನಂತರ ಇನ್ನೂ ಅನುದಾನ ನೀಡಿಲ್ಲ. ಈಗ ಒಂದು ತಿಂಗಳ ಗೌರವಧನ ನೀಡಿದ್ದಾರೆ. ಅದನ್ನು ಇನ್ನು ಎರಡು ಮೂರು ದಿನಗಳಲ್ಲಿ ಅವರ ಖಾತೆಗಳಿಗೆ ಹಾಕುತ್ತಿದ್ದೇವೆ ಎಂದು ಅಧಿಕಾರಿಗಳ ಹೇಳುತ್ತಿದ್ದಾರೆ.
ಒಟ್ಟಾರೆ ಬಡವರ ಕಲ್ಯಾಣಕ್ಕೆಂದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳೇ ಇವತ್ತು ಸರ್ಕಾರಕ್ಕೆ ಮಾರಕವಾಗುತ್ತಿದ್ಯಾ ಎನ್ನುವ ಅನುಮಾನ ಶುರುವಾಗಿದೆ. ಅದರಂತೆ ಒಂದಲ್ಲ, ಎರಡಲ್ಲಾ ಹತ್ತಾರು ಇಲಾಖೆಗಳು ಅನುದಾನವಿಲ್ಲದೆ ಸೊರಗಿ ಹೋಗುತ್ತಿವೆ. ಹಾಗಾಗಿ ಈ ಎಲ್ಲಾ ಬೆಳವಣಿಗೆ ನೋಡಿದರೆ ಸರ್ಕಾರದ ಅನುದಾನವನ್ನು ಗ್ಯಾರಂಟಿ ನುಂಗಿತ್ತಾ ಎನ್ನುವ ಅನುಮಾನ ಮೂಡೋದರಲ್ಲಿ ಸಂದೇಹವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ