ನಿಯಮ ಮೀರಿ ತಲೆ ಎತ್ತುತ್ತಿವೆ ಬಹುಮಹಡಿ ಕಟ್ಟಡಗಳು; ಅಪಾಯ, ಸಮಸ್ಯೆ ಗೊತ್ತಿದ್ದರೂ ಸುಮ್ಮನಿರೋ ಅಧಿಕಾರಿಗಳು?
ನಗರ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಹಾಗೂ ಕಾನೂನು ಮೀರಿ ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಆದರೆ, ಅಧಿಕಾರಿಗಳು ಮಾತ್ರ ಕೇವಲ ನೋಟಿಸ್ ನೀಡಿ ಸುಮ್ಮನಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಅಕ್ರಮ-ಸಕ್ರಮ ಪ್ರಕರಣಗಳು ಹೆಚ್ಚಾಗುವಂತಾಗಿದೆ.
ಕೋಲಾರ: ರಾಜ್ಯ ರಾಜಧಾನಿ ಬೆಂಗಳೂರಿಗೆ ಕೇವಲ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲಾಕೇಂದ್ರ ಇವತ್ತಿಗೂ ಅಭಿವೃದ್ದಿ ಹೊಂದದ ಹಳ್ಳಿಯಂತೆಯೇ ಬಾಸವಾಗುತ್ತಿದೆ. ಕಾರಣ ಇಲ್ಲಿನ ಇಕ್ಕಟ್ಟಾದ ರಸ್ತೆಗಳು, ಅಭಿವೃದ್ದಿ ಕಾಣದ ಬಡಾವಣೆಗಳು, ಇದೆಲ್ಲದರ ಪರಿಣಾಮ ಕೋಲಾರ ನಗರದಲ್ಲಿ ಅಭಿವೃದ್ದಿ ಅನ್ನೋದು ಇಂದಿಗೂ ಮರೀಚಿಕೆಯಾಗಿ ಉಳಿದೆ. ಇದರ ನಡುವೆ ಕೋಲಾರ ನಗರದಲ್ಲಿ ನಿರ್ಮಾಣವಾಗುವ ಕಟ್ಟಡಗಳು ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣವಾಗುತ್ತಿವೆ.
ಕಟ್ಟಡಗಳ ನಿರ್ಮಾಣದಲ್ಲಿ ಪಾಲನೆಯಾಗುತ್ತಿಲ್ಲ ಕಾನೂನು ನಗರ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಹಾಗೂ ಕಾನೂನು ಮೀರಿ ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಆದರೆ, ಅಧಿಕಾರಿಗಳು ಮಾತ್ರ ಕೇವಲ ನೋಟಿಸ್ ನೀಡಿ ಸುಮ್ಮನಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಅಕ್ರಮ-ಸಕ್ರಮ ಪ್ರಕರಣಗಳು ಹೆಚ್ಚಾಗುವಂತಾಗಿದೆ. ನಗರ ಪ್ರದೇಶಗಳಲ್ಲಿ ವಸತಿ ಹಾಗೂ ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ ಭಾರಿ ಬೇಡಿಕೆಯಿದೆ. ಆದರೆ, ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ತೆರಿಗೆ ಪಾವತಿಸಬೇಕು ಹಾಗೂ ಹೆಚ್ಚಿನ ನಿಯಮಗಳನ್ನು ಪಾಲಿಸಬೇಕಿರುವುದರಿಂದ ಅನುಮತಿ ಪಡೆಯದೆ ಹಾಗೂ ಅನುಮತಿ ಇದ್ದರೂ ಕಾನೂನುಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸುವವರ ಸಂಖ್ಯೆ ಏರಿಕೆಯಾಗಿದೆ.
ನಗರಸಭೆಯ ನಿಯಮಗಳ ಪ್ರಕಾರ ಕೇವಲ ತಳಮಹಡಿ ಸೇರಿ ಕೇವಲ ಮೂರು ಅಂತಸ್ತುಗಳ ಮನೆ ಅಥವಾ ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ. ಆದರೆ, ನಗರದ ಹಲವೆಡೆ ನಗರಸಭೆ ಕಾನೂನುಗಳನ್ನು ಗಾಳಿಗೆ ತೂರಿ ಐದಾರು ಅಂತಸ್ತುಗಳ ಕಟ್ಟಡಗಳ ಕಾಮಗಾರಿ ಎಗ್ಗಿಲ್ಲದೆ ನಡೆಯುತ್ತಿವೆ. ಈ ಅಕ್ರಮ ಬಹುಮಹಡಿ ಕಟ್ಟಡಗಳ ನಿರ್ಮಾಣದ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಕಟ್ಟಡಗಳನ್ನು ನಿರ್ಮಿಸುತ್ತಿರುವವರು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಬಲಾಢ್ಯರಾದ ಕಾರಣದಿಂದ ಕ್ರಮಕ್ಕೆ ಮುಂದಾಗುತ್ತಿಲ್ಲ. ಆದರೆ, ಇಂತಹ ಕಟ್ಟಡಗಳಿಂದ ಅವಘಡಗಳು ಸಂಭವಿಸಿದರೆ ಹೊಣೆ ಯಾರು ಅನ್ನೋ ಪ್ರಶ್ನೆಗೆ ಉತ್ತರ ಹೇಳುವವರಿಲ್ಲ.
ಅಕ್ರಮ ಕಟ್ಟಡಗಳಲ್ಲಿ ಆಸ್ಪತ್ರೆಗಳು ಹಾಗೂ ಖಾಸಗಿ ಶಾಲಾ ಕಾಲೇಜುಗಳದ್ದೇ ಪ್ರಮುಖ ಪಾತ್ರ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ನಗರಸಭೆಯಲ್ಲಿ ಯಾವುದೇ ಅನುಮತಿ ಇಲ್ಲ. ಆದರೆ, ಕೆಲವು ಬಲಾಢ್ಯರು ತಮ್ಮ ಪ್ರಭಾವ ಬಳಸಿ ಅನುಮತಿ ಪಡೆಯದೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ವಾಣಿಜ್ಯ ಮಳಿಗೆಗಳು, ಆಸ್ಪತ್ರೆಗಳು, ಶಾಲಾ-ಕಾಲೇಜು ಕಟ್ಟಡಗಳು, ವಸತಿ ಗೃಹಗಳು ನಿಯಮ ಬಾಹಿರ ಕಟ್ಟಡಗಳೇ ಪ್ರಮುಖ ಸಾಲಿನಲ್ಲಿವೆ. ಅದರಲ್ಲೂ ಇಂಥಹ ಕಟ್ಟಡಗಳ ಮಾಲೀಕರುಗಳು ರಾಜಕೀಯ ಹಿನ್ನೆಲೆ ಉಳ್ಳವರು ಅಥವಾ ಸರ್ಕಾರದ ಮಟ್ಟದಲ್ಲಿ ಉನ್ನತ ಅಧಿಕಾರದಲ್ಲಿರುವವರಿಗೆ ಸಂಬಂಧಿಸಿದ ಕಟ್ಟಡಗಳೇ ಹೆಚ್ಚಾಗಿವೆ ಅನ್ನೋದು ದುಸ್ಥರ.
ಕಟ್ಟಡ ನಿರ್ಮಾಣದಲ್ಲಿ ನಿಯಮ ಏನು ಹೇಳುತ್ತದೆ? ನಗರಸಭೆ ವ್ಯಾಪ್ತಿಯಲ್ಲಿ ತಳಮಹಡಿ ಸೇರಿ ಮೂರು ಅಂತಸ್ತು ನಿರ್ಮಾಣಕ್ಕೆ ಅವಕಾಶವಿದೆ. ಅದಕ್ಕೂ ಹೆಚ್ಚಿನ ಅಂತಸ್ತುಗಳನ್ನು ನಿರ್ಮಿಸಬೇಕಾದರೆ ನಗರಾಭಿವೃದ್ಧಿ ಪ್ರಾಕಾರ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ನಿರಾಪೇಕ್ಷಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಜತೆಗೆ ತಳಮಹಡಿ ಸೇರಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗುವ ಪ್ರದೇಶದಲ್ಲಿ 40 ಅಡಿ ರಸ್ತೆ, ತಳಮಹಡಿ ಸೇರಿ ಐದು ಅಂತಸ್ತಿನ ಕಟ್ಟಡ ನಿರ್ಮಿಸುವ ಪ್ರದೇಶದಲ್ಲಿ 60 ಅಡಿ ರಸ್ತೆ ಹಾಗೂ ಅದಕ್ಕಿಂತ ಹೆಚ್ಚಿನ ಮಹಡಿ ನಿರ್ಮಿಸಬೇಕಾದರೆ 80 ಅಡಿ ರಸ್ತೆಯಿರಬೇಕಾಗುತ್ತದೆ. ಆದರೆ, ಬಹುಮಹಡಿ ಹೊಂದಿರುವ ನಗರದ ಬಹಳಷ್ಟು ರಸ್ತೆಗಳಲ್ಲಿ ಅವಘಡಗಳು ಸಂಭವಿಸಿದರೆ ಕನಿಷ್ಠ ಆ್ಯಂಬುಲೆನ್ಸ್ ಕೂಡಾ ಸಂಚಾರ ಮಾಡಲು ಕಷ್ಟಕರ ಎನ್ನುವ ಸ್ಥಿತಿ ಇದೆ.
ಬೃಹತ್ ಕಟ್ಟಡಗಳಲ್ಲಿ ಕನಿಷ್ಠ ಪಾರ್ಕಿಂಗ್ ವ್ಯವಸ್ಥೆ ಸಹ ಇಲ್ಲ ನಗರದಲ್ಲಿ ನಿಯಮ ಮೀರಿ ನಿರ್ಮಾಣವಾಗಿರುವ ಹಾಗೂ ನಿರ್ಮಾಣವಾಗುತ್ತಿರುವ ಹೆಚ್ಚಿನ ಕಟ್ಟಡಗಳು ಆಸ್ಪತ್ರೆಗಳಿಗೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ನಿತ್ಯ ನೂರಾರು ಜನರು ಬಂದು ಹೋಗುತ್ತಾರೆ. ಆದರೆ, ಅವರಿಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.
ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ನಿಯಮ ಏನು ಹೇಳುತ್ತದೆ? ನಿಯಮಾನುಸಾರ ಯಾವುದೇ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಕಟ್ಟಡ ಸುತ್ತಲೂ 3 ಅಡಿ ಸೆಟ್ ಬ್ಯಾಕ್ ಬಿಡಬೇಕು. ಆದರೆ, ಈ ಅನಕೃತ ಬಹುಮಹಡಿ ಕಟ್ಟಡಗಳ ಸುತ್ತ ಸೆಟ್‌ಬ್ಯಾಕ್ ಬಿಟ್ಟಿಲ್ಲ. ಅಗ್ನಿ ದುರಂತ ಅಥವಾ ಇತರೆ ಅವಘಡಗಳು ಸಂಭವಿಸಿದರೆ, ರಕ್ಷಣೆಗೆ ಯಾವುದೇ ಕ್ರಮಗಳಿಲ್ಲ ಅನ್ನೋ ಆತಂಕ ಇದೆ. ಇನ್ನು ಈ ಬಗ್ಗೆ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಓಂಶಕ್ತಿಚಲಪತಿಯವರನ್ನು ಕೇಳಿದರೆ ಜಾಗ ವಿಸ್ತೀರ್ಣ, ರಸ್ತೆಯ ಅಳತೆಗೆ ತಕ್ಕಂತೆ ತಾಂತ್ರಿಕ ನೆರವನ್ನು ಮಾತ್ರ ನಾವು ನೀಡುತ್ತೇವೆ. ನಗರದಲ್ಲಿ ನಿಯಮ ಮೀರಿದ ಕಟ್ಟಡಗಳ ವಿರುದ್ಧ ನಗರಸಭೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ವಾಯು ಮಾಲಿನ್ಯದ ಎಫೆಕ್ಟ್; ದೆಹಲಿಯಲ್ಲಿ ಕಟ್ಟಡ ನಿರ್ಮಾಣದ ಮೇಲಿನ ನಿಷೇಧ ಮುಂದೂಡಿಕೆ
Published On - 11:44 am, Thu, 2 December 21