
ಬೆಂಗಳೂರು, (ಸೆಪ್ಟೆಂಬರ್ 24): ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರನ್ನಾಗಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಸೆಪ್ಟೆಂಬರ್ 24) ವಿಧಾನಸೌಧದಲ್ಲಿ ಘೋಷಣೆ ಮಾಡಿದರು. ಈ ಈ ಮೂಲಕ ಈ ಬಾರಿ ಮೈಸೂರು ದಸರಾವನ್ನು ಯಾರು ಉದ್ಘಾಟನೆ ಮಾಡಲಿದ್ದಾರೆ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪ್ರಸ್ತುತ ಪೀಠಾಧಿಪತಿಗಳು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಠದ 18ನೇ ಪೀಠಾಧಿಪತಿಗಳಾಗಿದ್ದು, ಸಮಾಜದಲ್ಲಿ ತಮ್ಮ ಅಭೂತಪೂರ್ವ ಸಾಮಾಜಿಕ ಕಳಕಳಿ, ಸರಳತೆ ಮತ್ತು ದಾಸೋಹ ಪರಂಪರೆಯಿಂದಾಗಿ ನಾಡಿನಾದ್ಯಂತ ‘ನಡೆದಾಡುವ ದೇವರು’ ಹಾಗೂ ‘ಜಲಋಷಿ’ ಎಂದೇ ಹೆಸರು ವಾಸಿಯಾಗಿದ್ದಾರೆ.
ಡಿಸೆಂಬರ್ 13, 2002 ರಂದು ತಮ್ಮ ಪೂರ್ವಾಧಿಕಾರಿಗಳಾದ ಶ್ರೀ ಶಿವಶಾಂತವೀರ ಸ್ವಾಮಿಗಳ ಆಶೀರ್ವಾದದೊಂದಿಗೆ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರ ಇವರು ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರವಾಗಿದ್ದ ನೀರಿನ ಅಭಾವವನ್ನು ನೀಗಿಸಲು ಇವರು ‘ಜಲ ದೀಕ್ಷೆ’ ಅಭಿಯಾನದ ಮೂಲಕ ನೂರಾರು ಕೆರೆಗಳ ಹೂಳೆತ್ತುವಿಕೆ ಮತ್ತು ಜಲ ಸಂರಕ್ಷಣಾ ಕ್ರಾಂತಿಯನ್ನು ಮಾಡಿ ಜಲಋಷಿ ಎನಿಸಿಕೊಂಡಿದ್ದಾರೆ. ಇನ್ನು ಇವರ ನೇತೃತ್ವದಲ್ಲಿ ಮಠದಲ್ಲಿ ಅನ್ನ, ಅರಿವು (ಶಿಕ್ಷಣ) ಮತ್ತು ಆಧ್ಯಾತ್ಮದ ತ್ರಿವಿಧ ದಾಸೋಹ ನಿರಂತರವಾಗಿ ಸಾಗುತ್ತಿದ್ದು, ಸಾವಿರಾರು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣ ಸೌಲಭ್ಯ ಒದಗಿಸಿದ್ದಾರೆ.
‘ಅಜ್ಜನ ಜಾತ್ರೆ’ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದುಕೊಂಡಿದೆ. ಇನ್ನು ಈ ಜಾತ್ರೆಯ ಉದ್ಘಾಟನೆಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಂದ ಮಾಡಿಸಿಕೊಂಡು ಬಂದಿದ್ದಾರೆ. ಭಾರತದ ಯಾವುದೇ ಮೂಲೆಯಲ್ಲಿ ಇರಲಿ ಸಾಧನೆ ಮಾಡಿದವರನ್ನು ಪತ್ತೆ ಮಾಡಿ ಜಾತ್ರೆಯ ಮೂಲಕ ಅವರನ್ನು ಪರಿಚಯಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದ್ರೆ, ಇದೀಗ ಇವರೇ ಈ ಬಾರಿ ಮೈಸೂರು ದಸರಾ ಉದ್ಘಾಟರಾಗಿ ಆಯ್ಕೆಯಾಗಿದ್ದಾರೆ.
ಕೊಪ್ಪಳ ಗವಿಮಠದ ಶ್ರೀಗಳು ಕೊಂಚ ಡಿಫ್ರೆಂಟ್. ಸರಳ ಸ್ವಭಾವದವರಾಗಿದ್ದು, ಜಾತ್ರಾ ಸಂದರ್ಭದಲ್ಲಿ ಮಠ ಆವರಣವನ್ನು ತಾವೇ ಸ್ವಚ್ಛತೆ ಮಾಡುತ್ತಾರೆ. ಹೆಚ್ಚಾಗಿ ಜನ ಸಾಮಾನ್ಯರ ಜೊತೆ ಇವರ ನಂಟು. ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ವಿರಣ. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಚಿಕ್ಕಪುಟ್ಟ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಉಂಟು. ದೊಡ್ಡ ದೊಡ್ಡ ರಾಜಕೀಯ ಗಣ್ಣರ ಜೊತೆ ವೇದಿಕೆ ಹಂಚಿಕೊಂಡಿಲ್ಲ. ಯಾವುದೇ ರಾಜಕಾರಣಿಗಳ ಪರ ಹೇಳಿಕೆಗಳನ್ನು ನೀಡಿಲ್ಲ. ಯಾರ ಪರವೂ ವಿರುದ್ಧವೂ ಬ್ಯಾಟಿಂಗ್ ಮಾಡಲ್ಲ. ಒಂದು ರೀತಿ ಶ್ರೀಗಳು ರಾಜಕಾರಣಿಗಳಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ಹೀಗಾಗಿ ರಾಜಕಾರಣಿಗಳೇ ಇವರನ್ನು ಹುಡುಕಿಕೊಂಡು ಮಠಕ್ಕೆ ಬರುತ್ತಾರೆ.
ಕೊಪ್ಪಳದ ಗವಿಸಿದ್ದೇಶ್ವರ ಮಠ ಇದನ್ನು ಗವಿಮಠ ಎಂದೂ ಕರೆಯುತ್ತಾರೆ. ಇದು ಉತ್ತರ ಕರ್ನಾಟಕದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ. ಗವಿಮಠವು ಕನಿಷ್ಠ 800 ವರ್ಷ ಹಳೆಯದಾಗಿದ್ದು, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು, ಅಗತ್ಯವಿರುವವರಿಗೆ ಆಹಾರವನ್ನು ಒದಗಿಸುವುದು ಮತ್ತು ಆಧ್ಯಾತ್ಮಿಕ ಜ್ಞಾನವನ್ನು ನೀಡುವುದು ಮುಂತಾದ ವಿವಿಧ ಚಟುವಟಿಕೆಗಳಿಂದ ಸಮಾಜವನ್ನು ಉನ್ನತೀಕರಿಸುವಲ್ಲಿ ಗವಿಮಠ ತೊಡಗಿಸಿಕೊಂಡಿದೆ.
ಉತ್ತರ ಕರ್ನಾಟಕ ಭಾಗದಲ್ಲಿರುವ ಈ ಕೊಪ್ಪಳ ಗವಿಮಠದ ಶ್ರೀಗಳು ಈವರೆಗೆ ಯಾವುದೇ ರಾಜಕೀಯ ವೇದಿಕೆಯಲ್ಲಿ, ರಾಜಕಾರಣ ವಿಚಾರದಲ್ಲಿ ಭಾಗಿಯಾಗಿಲ್ಲ. ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವ ಅವರು, ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನಸಾಮಾನ್ಯರೊಂದಿಗೆ ಸೇರಿ ಪ್ರತಿಭಟನೆಗಳನ್ನು ಮಾಡಿ ಸರ್ಕಾರಕ್ಕೆ ವಿಚಾರಗಳನ್ನು ಮುಟ್ಟಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಜನರ ಅಭ್ಯುದಯಕ್ಕೆ ಸದಾ ಮುಂದಿರುವ ಗವಿಮಠ ಶ್ರೀಗಳ ಆಶೀರ್ವಚನ ವಿಡಿಯೋಗಳಲ್ಲಿನ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ. ಜೀವನದ ಬಗ್ಗೆ ಅವರು ಆಡುವ ಒಂದೊಂದು ಮಾತುಗಳು ಮನಪರಿವರ್ತನೆ ಮಾಡುವಂತಿರುತ್ತವೆ. ಹೀಗಾಗಿ ಜನ ತಮ್ಮ ವಾಟ್ಸಪ್ ಸ್ಟೇಟಸ್ ಹಾಕಿಕೊಳ್ಳುತ್ತಾರೆ.
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಆಹ್ವಾನಿಸುವಂತೆ ದಿನೇಶ್ ಗೂಳಿಗೌಡ ಸರ್ಕಾರಕ್ಕೆ ಮನವಿ ಮಾಡಿದ್ದರು. ರಾಷ್ಟ್ರದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿರುವ ಇವರು ಸಮಸ್ತ ಮಹಿಳೆಯರ ಪ್ರೇರಣಾ ಶಕ್ತಿ ಎಂದಿದ್ದರು. ಅಲ್ಲದೇ ನಾಗರತ್ನ ಅವರ ಜೊತೆಗೆ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹೆಸರುಗಳ ಸಹ ಕೇಳಿಬಂದಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹರಿದಾಡುತ್ತಿದ್ದವು. ಜೊತೆಗೆ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿಂದ ಉದ್ಘಾಟಿಸಬೇಂಕೆಂದು ಚರ್ಚೆಗಳು ನಡೆದಿದ್ದವು. ಹೀಗಾಗಿ ದಸರಾ ಸಮಿತಿಯು ಉದ್ಘಾಟಕರ ಆಯ್ಕೆಯನ್ನು ಸಿಎಂ ಡಿಕೆ ಶಿವಕುಮಾರ್ ಅವರ ನಿರ್ಧಾರಕ್ಕೆ ಬಿಡಲಾಗಿತ್ತು.
ಮೈಸೂರು ದಸರಾ ಈ ವರ್ಷ ಅಕ್ಟೋಬರ್ 11 ರಿಂದ 21ರ ವರೆಗೆ ನಡೆಯಲಿದೆ. ಅ.11 ರಂದು ದಸರಾಗೆ ಚಾಲನೆ ದೊರೆಯಲಿದೆ. ವಿಜಯದಶಮಿ ಜಂಬೂಸವಾರಿ ಅ.21 ರಂದು ಜರುಗಲಿದೆ. ಈ ನಡುವೆ ಪ್ರವಾಸಿಗರನ್ನು ಸೆಳೆಯಲು ಹಲವಾರು ಕಾರ್ಯಕ್ರಮಗಳು ಸಹ ನಡೆಯಲಿವೆ. ಇದೇ ಮೊದಲ ಬಾರಿಗೆ ದಸರಾದಲ್ಲಿ ಕರಾವಳಿಯ ಕ್ರೀಡೆ ‘ಕಂಬಳ’ವನ್ನು ಆಯೋಜಿಸಲಾಗುತ್ತಿದೆ. ಈ ಸಲ ಚಿನ್ನದಂಬಾರಿ ಹೊರುವ ಕರ್ತವ್ಯದಿಂದ ಅಭಿಮನ್ಯು ಆನೆ ನಿವೃತ್ತಿ ಹೊಂದಿದೆ. ಚಿನ್ನದ ಅಂಬಾರಿ ಹೊರಲು ಹೊಸ ಸಾರಥಿಯ ಆಯ್ಕೆಯಾಗಲಿದೆ. ಯಾವ ಆನೆ ಅಂಬಾರಿ ಹೊರುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.
Published On - 8:27 pm, Thu, 24 September 26