ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ಸಾಲು ಸಾಲು ಅಕ್ರಮ, ಅವಾಂತರ; ಇಲಾಖೆ ಉಪನಿರ್ದೇಶಕ ಅಮಾನತ್ತು

ಕೊಪ್ಪಳದ ಅಂಗನವಾಡಿಗಳಲ್ಲಿ ಸಾಲು ಸಾಲು ಅಕ್ರಮ, ಅವ್ಯವಸ್ಥೆಯ ಘಟನೆಗಳು ನಡೆದಿದ್ದರೂ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿರುವ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರನ್ನು ಅಮಾನತ್ತು ಮಾಡಿ, ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ಸಾಲು ಸಾಲು ಅಕ್ರಮ, ಅವಾಂತರ; ಇಲಾಖೆ ಉಪನಿರ್ದೇಶಕ ಅಮಾನತ್ತು
ಕೊಪ್ಪಳದ ಅಂಗನವಾಡಿಗಳಲ್ಲಿ ಅಕ್ರಮ, ಅವಾಂತರ; ಇಲಾಖೆ ಉಪನಿರ್ದೇಶಕ ಅಮಾನತ್ತು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 05, 2024 | 4:36 PM

ಕೊಪ್ಪಳ, ಅ.05: ಕೊಪ್ಪಳದಲ್ಲಿ ಅಂಗನವಾಡಿ(Anganwadi)ಗಳ ದುಸ್ಥಿತಿ, ಅಕ್ರಮಗಳ ಬಗ್ಗೆ ಟಿವಿ9 ಡಿಜಿಟಲ್, ಸಾಲು ಸಾಲು ವರದಿ ಪ್ರಸಾರ ಮಾಡಿತ್ತು. ಮಕ್ಕಳಿಗೆ ನೀಡಬೇಕಾದ ಮೊಟ್ಟೆಗಳನ್ನು ವಿಡಿಯೋ ಮಾಡುವವರೆಗೆ ಮಾತ್ರ ನೀಡಿ, ಮರಳಿ ಪಡೆದಿದ್ದು. ಅಂಗನವಾಡಿ ಆಹಾರ ಪದಾರ್ಥಗಳು ಹೋಟೆಲ್​ನಲ್ಲಿ ಸಿಕ್ಕಿದ್ದು, ಅಂಗನವಾಡಿ ಮೇಲ್ಛಾವಣಿ ಕಾಂಕ್ರೀಟ್ ಬಿದ್ದು ಮಕ್ಕಳು ಗಾಯಗೊಂಡಿದ್ದು ಸೇರಿದಂತೆ ಹತ್ತಾರು ಅವಾಂತರ, ಅಕ್ರಮಗಳು ನಡೆದಿದ್ದವು. ಇದೀಗ ಎಚ್ಚೆತ್ತುಕೊಂಡಿರುವ ಇಲಾಖೆ, ಅಧಿಕಾರಿಯನ್ನು ಅಮಾನತ್ತು ಮಾಡಿದೆ.

ಜಿಲ್ಲೆಯಲ್ಲಿ ಅಂಗನವಾಡಿಗಳ ಸಾಲು ಸಾಲು ಅವಾಂತರ

ಶಾಲಾ ಪೂರ್ವ ಶಿಕ್ಷಣದ ಮೊದಲ ಹಂತವಾಗಿರುವ ಅಂಗನವಾಡಿಗಳಿಗೆ ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಆದ್ರೆ, ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕಿದ್ದ ಅಂಗನವಾಡಿಗಳು, ಮಕ್ಕಳಿಗೆ ಮಾರಕವಾಗಿ ಪರಿಣಮಿಸಿವೆ. ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಮೆಹಬೂಬ್ ನಗರದಲ್ಲಿ ಕಳೆದ ಸೆಪ್ಟಂಬರ್ 23 ರಂದು ಅಂಗನವಾಡಿ ಕಟ್ಟಡದ ಮೇಲ್ಚಾವಣಿಯ ಕಾಂಕ್ರಿಟ ಬಿದ್ದಿದ್ದರಿಂದ ನಾಲ್ವರು ಮಕ್ಕಳು ಗಾಯಗೊಂಡ ಘಟನೆ ನಡೆದಿತ್ತು. ಈ ರೀತಿಯ ಸಾಲು ಸಾಲು ಅವಾಂತರಗಳಿಂದ ಅಂಗನವಾಡಿಗಳಿಗೆ ಮಕ್ಕಳನ್ನು ಕಳಿಸಲು ಪಾಲಕರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:ಕೊಪ್ಪಳ: ಹೊಟೇಲ್​ಗಳಲ್ಲಿ ಅಂಗನವಾಡಿ ಮಸಾಲೆ ಪಾಕೆಟ್​ಗಳು ಬಳಕೆ, ಕ್ರಮಕ್ಕೆ ಸ್ಥಳೀಯರ ಆಗ್ರಹ

ಇನ್ನು ಕಳೆದ ಆಗಸ್ಟ್ 10 ರಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡುರು ಗ್ರಾಮದಲ್ಲಿ ಅಂನಗವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ, ಮಕ್ಕಳಿಗೆ ನೀಡಬೇಕಾಗಿದ್ದ ಮೊಟ್ಟೆಗಳನ್ನು ಕಾಳಸಂತೆಯಲ್ಲಿ ಮರಾಟ ಮಾಡಿಕೊಳ್ಳಲು ಮಾಡಿದ್ದ ದೊಡ್ಡ ನಾಟಕವನ್ನು ಟಿವಿ9 ಬಯಲು ಮಾಡಿತ್ತು. ಮಕ್ಕಳಿಗೆ ಮೊಟ್ಟೆಗಳನ್ನು ನೀಡಿ ವಿಡಿಯೋ ಮಾಡಿಕೊಂಡಿದ್ದ ಕಾರ್ಯಕರ್ತೆ ಮತ್ತು ಸಹಾಯಕಿ, ನಂತರ ಮಕ್ಕಳು ಮೊಟ್ಟೆ ತಿನ್ನುವಾಗಲೇ ಕಸಿದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಎರಡು ದಿನದ ಹಿಂದಷ್ಟೇ ಅಂಗನವಾಡಿ ಫಲಾನುಭವಿಗಳಿಗೆ ಸೇರಬೇಕಿದ್ದ ಮಸಾಲೆ ಪದಾರ್ಥಗಳು ಹೋಟೆಲ್​ನಲ್ಲಿ ಸಿಕ್ಕಿದ್ದವು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಅಮಾನತ್ತು

ಜಿಲ್ಲೆಯ ಅನೇಕ ಅಂನಗವಾಡಿಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೇ ಇರುವುದು, ಶಿಥಿಲಾವ್ಯವಸ್ಥೆಯ ಕಟ್ಟಡಗಳು ಸೇರಿದಂತೆ ಸಾಲು ಸಾಲು ಅವಾಂತರಗಳು, ಅಕ್ರಮಗಳ ಬಗ್ಗೆ ಟಿವಿ9 ಡಿಜಟಲ್ ನಲ್ಲಿ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿನ ಅಂಗನವಾಡಿಗಳ ಅಕ್ರಮ, ಅವಾಂತರಗಳನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ, ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕನನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ:ಕೊಪ್ಪಳ: ಅಂಗನವಾಡಿ ಮೇಲ್ಚಾವಣಿ ಕಾಂಕ್ರಿಟ್ ಬಿದ್ದು 4 ಮಕ್ಕಳಿಗೆ ಗಾಯ

ಕೊಪ್ಪಳದಲ್ಲಿ ಸಾಲು ಸಾಲು ಅಕ್ರಮಗಳು, ಅವ್ಯವಸ್ಥೆಯ ಘಟನೆಗಳು ನಡೆದಿದ್ದರೂ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿರುವ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರನ್ನು ಅಮಾನತ್ತು ಮಾಡಿ, ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಅವರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದೆಯೇ ತಿಪ್ಪಣ್ಣ ಸಿರಸಗಿಗೆ ನೋಟಿಸ್ ನೀಡಿದ್ದ ಸರ್ಕಾರ, ಅಧಿಕಾರಿಯಿಂದ ವರದಿ ಕೇಳಿತ್ತು. ಇನ್ನು ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ತಿಪ್ಪಣ್ಣ ಸಿರಸಗಿ ಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿಗಳ ಅಕ್ರಮ, ಮತ್ತು ಅವ್ಯವಸ್ಥೆಗೆ ಜಿಲ್ಲೆಯ ಉಪ ನಿರ್ದೇಶಕನ ಅಮಾನತ್ತು ಮಾಡಿ ಸರ್ಕಾರ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ. ಆದ್ರೆ, ಜಿಲ್ಲೆಯಲ್ಲಿ ಅಕ್ರಮ ಮತ್ತು ಅವ್ಯವಸ್ಥೆಗೆ ಕೆಳಹಂತದಿಂದ ಮೇಲಿನ ಹಂತದವರಗೆ ಅಧಿಕಾರಿಗಳ ನಿರ್ಲಕ್ಷ್ಯವಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವದರ ಜೊತೆಗೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Sat, 5 October 24