ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣ ಕೇಸ್: 20ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಯಾರ್ಯಾರ ಖಾತೆಗೆ ಎಷ್ಟೆಷ್ಟು?

Koppal KUDA Scam Case: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 8 ಕೋಟಿಗೂ ಹೆಚ್ಚು ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದೆ. 2023ರಿಂದ ಅಧಿಕೃತ ಖಾತೆಯಿಂದ ವ್ಯಕ್ತಿಗಳು ಮತ್ತು ಸಂಸ್ಥೆಗಳ 20ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಸದ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣ ಕೇಸ್: 20ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಯಾರ್ಯಾರ ಖಾತೆಗೆ ಎಷ್ಟೆಷ್ಟು?
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ
Image Credit source: tv9 kannada
Edited By:

Updated on: Aug 21, 2026 | 8:32 PM

ಕೊಪ್ಪಳ, ಆಗಸ್ಟ್​ 21: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ಕೋಟಿ ಕೋಟಿ ಹಣ ದುರುಪಯೋಗದ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಗೆದಷ್ಟು ಅಕ್ರಮದ ದಾಖಲೆಗಳು ಹೊರಬರುತ್ತಿವೆ ಎನ್ನಲಾಗುತ್ತಿದೆ. ಪ್ರಾಧಿಕಾರದ ಅಧಿಕೃತ ಬ್ಯಾಂಕ್ ಖಾತೆಯಿಂದಲೇ ಬರೋಬ್ಬರಿ 20ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಆರೋಪ ಕೇಳಿಬಂದಿದೆ. ಒಟ್ಟಾರೆ ಎರಡು ಕೋಟಿಗೂ ಅಧಿಕ ಮೊತ್ತ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿರುವ ದಾಖಲೆಗಳು ಟಿವಿ9ಗೆ ಲಭ್ಯವಾಗಿವೆ.

ಬರೋಬ್ಬರಿ 20ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ನಗರದ ಅಭಿವೃದ್ಧಿಗಾಗಿ ಇರುವ ಪ್ರತಿಷ್ಠಿತ ಸಂಸ್ಥೆ. ಆದರೆ ಇದೇ ಪ್ರಾಧಿಕಾರದ ಹಣದ ವಹಿವಾಟಿನ ಇದೀಗ ದೊಡ್ಡ ಚರ್ಚೆ ಶುರುವಾಗಿದೆ. 2023ರಿಂದಲೇ ಪ್ರಾಧಿಕಾರದ ಅಧಿಕೃತ ಬ್ಯಾಂಕ್ ಖಾತೆಯಿಂದ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ದಾಖಲೆಗಳಿಂದ ಬಯಲಾಗಿದೆ. ಬರೋಬ್ಬರಿ 20ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ ಎನ್ನಲಾಗ್ತಿದ್ದು, ಒಟ್ಟು ಎರಡು ಕೋಟಿಗೂ ಅಧಿಕ ಮೊತ್ತ ವರ್ಗಾವಣೆಯಾಗಿರುವ ದಾಖಲೆಗಳು ಇದೀಗ ಟಿವಿ9ಗೆ ಲಭ್ಯವಾಗಿವೆ.

ಇದನ್ನೂ ಓದಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣ ಕೇಸ್​​ಗೆ ಟ್ವಿಸ್ಟ್​​: ಬ್ಯಾಂಕ್ ಅಧಿಕಾರಿಗಳೂ ಭಾಗಿ?

ಈ ಹಣದ ವಹಿವಾಟಿನಲ್ಲಿ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ದಾಖಲೆಗಳ ಪ್ರಕಾರ, ರವೀಂದ್ರ ಕುಮಾರ್ ಅವರ ಬ್ಯಾಂಕ್ ಖಾತೆಗೆ 15 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿದೆ ಎನ್ನಲಾಗಿದೆ. ಅದು ಒಂದೇ ಬಾರಿ ಅಲ್ಲ, ಐದು ಬಾರಿ ಹಣ ವರ್ಗಾವಣೆಯಾಗಿರುವ ಮಾಹಿತಿ ಲಭ್ಯವಾಗಿದೆ. ಇಷ್ಟೇ ಅಲ್ಲ, ರವೀಂದ್ರ ಕುಮಾರ್ ಅವರ ಪತ್ನಿ ಹೆಸರಿನ ಖಾತೆಗೂ ಹಣ ವರ್ಗಾವಣೆಯಾಗಿದೆ ಅನ್ನೋದು ದಾಖಲೆಗಳಲ್ಲಿದೆ.

ಅನಿಲ್ ಕುಮಾರ್ ಹೆಸರಿನ ಖಾತೆಗೂ ಲಕ್ಷಾಂತರ ರೂ ವರ್ಗಾವಣೆ

ಅನಿಲ್ ಕುಮಾರ್ ಹೆಸರಿನ ಖಾತೆಗೂ ಹಲವು ಬಾರಿ ಹಣ ವರ್ಗಾವಣೆಯಾಗಿರುವುದು ದಾಖಲೆಗಳಲ್ಲಿ ಕಂಡುಬಂದಿದೆ. ನಾಲ್ಕು ಬಾರಿ ಹಣ ವರ್ಗಾವಣೆಯಾಗಿದ್ದು, ಒಟ್ಟಾರೆ ಸುಮಾರು 99 ಲಕ್ಷ ರೂಪಾಯಿ ಮೊತ್ತದ ವಹಿವಾಟು ನಡೆದಿರುವ ಆರೋಪ ಕೇಳಿಬಂದಿದೆ. ಇನ್ನು ಮತ್ತೊಂದು ಗಂಭೀರ ವಿಚಾರವೆಂದರೆ ಪ್ರಾಧಿಕಾರದ ಖಾತೆಯಿಂದಲೇ ಸ್ವಯಂ ಹಿಂತೆಗೆದುಕೊಳ್ಳುವಿಕೆ ಮೂಲಕ ಹಲವು ಬಾರಿ ಹಣ ತೆಗೆಯಲಾಗಿದೆ.  ನಾಲ್ಕೈದು ಬಾರಿ ನಡೆದಿರುವ ಈ ವಹಿವಾಟಿನಲ್ಲಿ ಸುಮಾರು 19 ಲಕ್ಷಕ್ಕೂ ಅಧಿಕ ಹಣ ವಿತ್‌ಡ್ರಾ ಆಗಿರುವುದು ಕಂಡು ಬಂದಿದೆ.

ಪ್ರಾಧಿಕಾರದ ಲೂಟಿ ಖಂಡಿಸಿ ಬಿಜೆಪಿ ಪ್ರತಿಭಟನೆ

ಇನ್ನು ಕೆಲವು ಎಂಟರ್‌ಪ್ರೈಸಸ್‌ಗಳ ಖಾತೆಗೂ ಪ್ರಾಧಿಕಾರದ ಹಣ ವರ್ಗಾವಣೆಯಾಗಿದೆ. 2023ರಿಂದ ನಡೆದಿರುವ ಈ ಎಲ್ಲಾ ವಹಿವಾಟುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಾಧಿಕಾರದ ಅಧಿಕೃತ ಖಾತೆಯಿಂದಲೇ ಇಷ್ಟೊಂದು ಮೊತ್ತ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ. ಪ್ರಾಧಿಕಾರದ ಲೂಟಿ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆಗೆ ಇಳಿದಿತ್ತು. ಆದರೆ ಪೊಲೀಸರು ಒಳಬರಲು ಬಿಡದೆ ಪ್ರಾಧಿಕಾರದ ಹೊರಗಡೆ ಬಂಧಿಸಿದರು. ಕೆಲಕಾಲ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೀತು. ಪೊಲೀಸರ ನಡೆಗೆ ಬಿಜೆಪಿ ಎಂಎಲ್​ಸಿ ಹೇಮಲತಾ ನಾಯಕ್ ಗರಂ ಆದರು.

ಇದನ್ನೂ ಓದಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಪ್ರಕರಣ: ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್‌ಗೆ ಪೊಲೀಸ್ ಬಲೆ

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬರೋಬ್ಬರಿ 8 ಕೋಟಿ 43 ಲಕ್ಷ ರೂ ದುರುಪಯೋಗವಾಗಿದೆ ಎನ್ನಲಾಗ್ತಿದೆ. ನಿವೇಶನ ನೀಡುವ ವಿಚಾರದಲ್ಲಿ ಈ ಹಣದ ದುರುಪಯೋಗ ನಡೆದಿದೆ ಎನ್ನಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಸತ್ಯತೆ ಬಯಲಾಗಲಿದೆ. ಹಣಕಾಸು ವಹಿವಾಟುಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಧಿಕಾರದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಹಣ ವರ್ಗಾವಣೆ ದಾಖಲೆಗಳು, ಚೆಕ್‌ಗಳು, ವಿತ್‌ಡ್ರಾ ವಿವರಗಳು ಹಾಗೂ ಸಂಬಂಧಪಟ್ಟ ಖಾತೆದಾರರ ವಹಿವಾಟುಗಳನ್ನು ಹೀಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us