ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಹಗರಣ: ಒಂದೇ ಕುಟುಂಬದ 9 ಮಂದಿಗೆ ನಿವೇಶನ ಹಂಚಿಕೆ ಆರೋಪ!

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ನಿವೇಶನ ಹಂಚಿಕೆ ಹಗರಣ ಬಯಲಾಗಿದೆ. ಸರೋಜಮ್ಮ ಬಡಾವಣೆಯಲ್ಲಿ ಒಂದೇ ಕುಟುಂಬದ 9 ಮಂದಿಗೆ ನಿವೇಶನ ಹಂಚಿಕೆಯಾಗಿದ್ದು, ಲಾಟರಿ ಆಯ್ಕೆ ಪಟ್ಟಿ ಮತ್ತು ನೋಂದಣಿ ಪಟ್ಟಿಯಲ್ಲಿ ಭಾರಿ ವ್ಯತ್ಯಾಸವಿದೆ. ಹಿಂದಿನ ಅವ್ಯವಹಾರ ಆರೋಪಗಳ ಬೆನ್ನಲ್ಲೇ ಈ ಕರ್ಮಕಾಂಡ ತನಿಖೆಯಲ್ಲಿದ್ದು, ಅಧಿಕಾರಿಗಳ ಭಾಗಿಯಾಗಿರುವ ಬಗ್ಗೆ ಅನುಮಾನಗಳು ಮೂಡಿವೆ.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಹಗರಣ: ಒಂದೇ ಕುಟುಂಬದ 9 ಮಂದಿಗೆ ನಿವೇಶನ ಹಂಚಿಕೆ ಆರೋಪ!
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ
Image Credit source: tv9 kannada
Edited By:

Updated on: Sep 09, 2026 | 5:06 PM

ಕೊಪ್ಪಳ, ಸೆಪ್ಟೆಂಬರ್​ 09: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣದ ಆರೋಪಗಳ ಬೆನ್ನಲ್ಲೇ ಇದೀಗ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ. ನಿವೇಶನ ಹಂಚಿಕೆ ವಿವಾದ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಸರೋಜಮ್ಮ ಬಡಾವಣೆಯಲ್ಲಿ ಒಂದೇ ಕುಟುಂಬದ ಬರೋಬ್ಬರಿ 9 ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರಿಂದ ಹಣ ಪಡೆದು ಅಭಿವೃದ್ಧಿಪಡಿಸಲಾಗಿದ್ದ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಲಾಟರಿ ಮೂಲಕ ಆಯ್ಕೆಯಾದವರ ಪಟ್ಟಿಗೂ, ಅಂತಿಮ ನೋಂದಣಿ ಪಟ್ಟಿಗೂ ತಾಳೆಯಾಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದರೆ 9 ಜನ ಪ್ರಭಾವಿಗಳಿಗೆ ನಿವೇಶನ ನೀಡಿದ್ದು ಯಾರೂ ಎನ್ನುವುದು ಪ್ರಶ್ನೆಯಾಗಿದೆ.

ಏನಿದು ಮತ್ತೊಂದು ಹಗರಣ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಕೋಟ್ಯಂತರ ರೂ ಅವ್ಯವಹಾರದ ಆರೋಪದಿಂದ ಸುದ್ದಿಯಲ್ಲಿತ್ತು. ಇದೀಗ ಅದೇ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕೊಪ್ಪಳ ನಗರದ ಕಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿರುವ ಸರೋಜಮ್ಮ ಬಡಾವಣೆ ಇದ್ದು, ಸುಮಾರು 9 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಬಡಾವಣೆಯಲ್ಲಿ ಒಟ್ಟು 119 ನಿವೇಶನಗಳಿವೆ. ಈ ಪೈಕಿ 116 ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: 3 ಪೋಸ್ಟ್‌ಗೆ 7 ಮಂದಿ ಭರ್ತಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೇಮಕಾತಿಯಲ್ಲಿ ಗೋಲ್‌ಮಾಲ್, ಆಡಿಟ್‌ನಲ್ಲಿ ಬಯಲು

ಹಿಂದಿನ ಜಿಲ್ಲಾಧಿಕಾರಿ ನಳಿನ್ ಅತುಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರಕ್ರಿಯೆಯಲ್ಲಿ 116 ನಿವೇಶನಗಳ ಪೈಕಿ 87 ನಿವೇಶನಗಳಿಗೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಲಾಟರಿಯಲ್ಲಿ ಆಯ್ಕೆಯಾದ 87 ಮಂದಿಯಲ್ಲಿ ಕೇವಲ 24 ಮಂದಿಗೆ ಮಾತ್ರ ನಿವೇಶನ ವಿತರಣೆ ಮಾಡಲಾಗಿದೆ. ಉಳಿದ 63 ನಿವೇಶನಗಳ ನೋಂದಣಿ ಹಾಗೂ ಫಲಾನುಭವಿಗಳ ಪಟ್ಟಿಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂಬ ಆರೋಪ ಈಗ ಕೇಳಿಬಂದಿದೆ. ಇದರ ನಡುವೆ ಒಂದೇ ಕುಟುಂಬದ ಬರೋಬ್ಬರಿ 9 ಮಂದಿಗೆ ನಿವೇಶನ ಹಂಚಿಕೆಯಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ದಾಖಲೆಗಳು ಲಭ್ಯವಾಗಿದ್ದು ಅದರಲ್ಲಿ 9 ಜನ ಒಂದೇ ಕಟುಂಬಕ್ಕೆ ನಿವೇಶನ ಹಂಚಿಕೆ ಮಾಡಿರೋದು ಸ್ಪಷ್ಟವಾಗಿದೆ. ಹಾಗಾದರೆ ಒಂದೇ ಕುಟುಂಬ ನಿವೇಶನ ತಗೆದುಕೊಂಡಿದ್ದು ಅನಧಿಕೃತ ಎನ್ನಲಾಗಿದೆ. ಲಾಟರಿ ಮೂಲಕ ಆಯ್ಕೆಯಾದವರು 24 ಜನ ಮಾತ್ರ, ಆದ್ರೆ ಉಳಿದ 63 ಜನರಲ್ಲಿ ಒಂದೇ ಕುಟುಂಬದ 9 ಜನರಿಗೆ ನಿವೇಶನ ಹೇಗೆ ಹೋಯ್ತು ಅನ್ನೋದು ಸದ್ಯದ ದೊಡ್ಡ ಪ್ರಶ್ನೆ ಆಗಿದೆ.

ಅಧಿಕಾರಿಗಳು, ಹೊರಗುತ್ತಿಗೆ ನೌಕರರ ಶಾಮೀಲು ಶಂಕೆ

ಈ ಮಧ್ಯೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಕೋಟ್ಯಂತರ ರೂ ಅವ್ಯವಹಾರದ ಆರೋಪ ಪ್ರಕರಣವೂ ತನಿಖೆಯಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್, ಅವರ ಸಹೋದರ ಅನಿಲ್ ಕುಮಾರ್ ಹಾಗೂ ಪತ್ನಿ ರಮಾ ಬಂಧನಕ್ಕೊಳಗಾಗಿದ್ದಾರೆ ಎಂಬ ಮಾಹಿತಿ ಇದೆ. ಪ್ರಾಧಿಕಾರದ ಮಾಜಿ ಆಯುಕ್ತ ಯೋಗಾನಂದರನ್ನು ಪೊಲೀಸರ ತನಿಖೆ ಮುಂದುವರಿದಿದೆ.

ದಾಖಲೆಗಳ ಪರಿಶೀಲನೆ, ನಿವೇಶನ ರದ್ದತಿಗೆ ಚಿಂತನೆ

ಇದೀಗ ಇದೇ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲೂ ಅಕ್ರಮದ ಆರೋಪ ಕೇಳಿಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳ ಪಟ್ಟಿ, ನೋಂದಣಿ ಮಾಡಿರುವ ಫಲಾನುಭವಿಗಳ ಪಟ್ಟಿ ಹಾಗೂ ವಾಸ್ತವವಾಗಿ ನಿವೇಶನ ಪಡೆದವರ ವಿವರ, ಈ ಮೂರು ಪಟ್ಟಿಗಳನ್ನು ಪರಿಶೀಲಿಸಿದರೆ ಸತ್ಯ ಹೊರಬರಲಿದೆ. ಹೀಗಾಗಿ ಪ್ರಾಧಿಕಾರದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಲಾಟರಿ ಪ್ರಕ್ರಿಯೆಯಿಂದ ಹಿಡಿದು ನಿವೇಶನ ನೋಂದಣಿಯವರೆಗಿನ ಸಂಪೂರ್ಣ ವ್ಯವಹಾರದ ಬಗ್ಗೆ ಅಧಿಕಾರಿಗಳು ಈಗಾಗಲೇ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಿವೇಶನ ರದ್ದು ಮಾಡುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಈ ಮದ್ಯೆ ಬಡಾವಣೆಯಲ್ಲಿ ಈಗಾಗಲೇ ಕೆಲವರು ಮನೆ ಕಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಕುಡಾ 8.43 ಕೋಟಿ ಹಗರಣ: ಕಿಂಗ್‌ಪಿನ್ ಸಹೋದರನ ಬಂಧನ; ಆರೋಪಿ ಸಿಕ್ಕಿದ್ದೇ ರೋಚಕ!

ಕೋಟ್ಯಂತರ ರೂ ಅವ್ಯವಹಾರದ ಆರೋಪದ ಬೆನ್ನಲ್ಲೇ ಈಗ ನಿವೇಶನ ಹಂಚಿಕೆಯಲ್ಲೂ ಗೋಲ್ಮಾಲ್ ಆರೋಪ ಬಯಲಾಗಿದೆ. ಒಂದೇ ಕುಟುಂಬದ 9 ಮಂದಿಗೆ ನಿವೇಶನ ಹಂಚಿಕೆಯಾಗಿದ್ದು, ಹಿಂದಿನ ಆಯುಕ್ತರು, ನೊಂದಣಾಧಿಕಾರಿಗಳು ಹಾಗೂ ಹೊರಗುತ್ತಿಗೆ ನೌಕರರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ನೊಂದಣಾಧಿಕಾರಿಗಳ ವಿರುದ್ದವೂ ಇದೀಗ ಅಧಿಕಾರಿಗಳು ತನಿಖೆ ಮಾಡಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us