ಕೊಪ್ಪಳ ಗ್ರಾಮೀಣ ಭಾಗದಲ್ಲಿ ಹೆಚ್ಚಾದ ವೈರಲ್​ ಫೀವರ್, ಚಿಕನ್​​ಗುನ್ಯಾ ರೋಗ- ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ಜನರು ಕಳೆದ ಒಂದು ವಾರದಿಂದ ಜ್ವರ ಮತ್ತು ಮೈ ಕೈ ನೋವಿನಿಂದ ಬಳಲುತ್ತಿದ್ದಾರೆ. ಆರಂಭದಲ್ಲಿ ವೈರಲ್ ಫೀವರ್​ ಅಂತ ತಿಳಿದು, ಜನರು ಚಿಕಿತ್ಸೆ ಪಡೆದು ಮನೆಗೆ ಹೋಗುತ್ತಿದ್ದರು. ಆದರೆ ಜ್ವರ ಪೀಡಿತರ ಸಂಖ್ಯೆ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ದೀಡಿರನೆ ಹೆಚ್ಚಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಗ್ರಾಮಸ್ಥರ ರಕ್ತ ತಪಾಸಣೆ ನಡೆಸುತ್ತಿದ್ದಾರೆ.

ಕೊಪ್ಪಳ ಗ್ರಾಮೀಣ ಭಾಗದಲ್ಲಿ ಹೆಚ್ಚಾದ ವೈರಲ್​ ಫೀವರ್, ಚಿಕನ್​​ಗುನ್ಯಾ ರೋಗ- ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ
ಗ್ರಾಮಸ್ಥರ ಆರೋಗ್ಯ ತಪಾಸಣೆ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on:Feb 09, 2024 | 10:40 AM

ಕೊಪ್ಪಳ, ಫೆಬ್ರವರಿ 09: ಕುಷ್ಟಗಿ (Kustagi) ತಾಲೂಕಿನ ನೆರೆಬೆಂಚಿ ಗ್ರಾಮದಲ್ಲಿ ವೈರಲ್ ಫೀವರ್ (Viral Fever)​ ಮತ್ತು ಚಿಕನ್​​ಗುನ್ಯಾ (Chikungunya) ಪ್ರಕರಣಗಳು ಹೆಚ್ಚಾಗಿದ್ದು, ಗ್ರಾಮದ ಜನರು ಜ್ವರ, ಮೈ ಕೈ ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದಾರೆ. ನೆರೆಬೆಂಚಿ ಗ್ರಾಮ ಮಾತ್ರವಲ್ಲ, ಅನೇಕ ಗ್ರಾಮಗಳಲ್ಲಿ ಚಿಕನ್ ಗುನ್ಯಾ ಆತಂಕ ಆರಂಭವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗಗಳು ಬೇಸಿಗೆಯಲ್ಲಿ ಬಂದಿವೆ. ರೋಗ ಬಂದು ಕಡಿಮೆಯಾಗದೆ ಇರುವುದು ಜನರ ಆತಂಕ ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ಕೊಪ್ಪಳ (Koppal) ಜಿಲ್ಲಾ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಲು ಮುಂದಾಗಿದೆ. ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ರೋಗ ನಿಯಂತ್ರಣ ಹೇಗೆ, ಜನರು ಮಾಡಬೇಕಾಗಿರುವುದು ಏನು ಎಂಬುವುದರ ಬಗ್ಗೆ ಮನೆ ಮನೆಗೆ ಹೋಗಿ ತಿಳಿಸಲು ಮುಂದಾಗಿದೆ.

ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ಜನರು ಕಳೆದ ಒಂದು ವಾರದಿಂದ ಜ್ವರ ಮತ್ತು ಮೈ ಕೈ ನೋವಿನಿಂದ ಬಳಲುತ್ತಿದ್ದಾರೆ. ಆರಂಭದಲ್ಲಿ ವೈರಲ್ ಫೀವರ್​ ಅಂತ ತಿಳಿದು, ಜನರು ಚಿಕಿತ್ಸೆ ಪಡೆದು ಮನೆಗೆ ಹೋಗುತ್ತಿದ್ದರು. ಆದರೆ ಜ್ವರ ಪೀಡಿತರ ಸಂಖ್ಯೆ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ದೀಡಿರನೆ ಹೆಚ್ಚಾಗಿದೆ. ಹೀಗಾಗಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೆಲವರ ರಕ್ತ ತಪಾಸಣೆ ನಡೆಸಿದಾಗ, ಓರ್ವನಲ್ಲಿ ಚಿಕನ್​​ಗುನ್ಯಾ ಪಾಸಿಟಿವ್ ಬಂದಿದೆ. ನೆರೆಬೆಂಚಿ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗಲು ಜ್ವರ ಪ್ರಕರಣಗಳು ಹೆಚ್ಚಾಗಲು ಸೊಳ್ಳೆಗಳು ಕಾರಣ ಎಂಬುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮೆಲೆರಿಯಾ, ಚಿಕನ್​​ಗುನ್ಯಾ, ಡೇಂಘಿ ಜ್ವರ ಹರಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನೆರೆಬೆಂಚಿ ಗ್ರಾಮಸ್ಥರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಜನರಿಗೆ ತಿಳಿಸುತ್ತಿದ್ದಾರೆ. ನೀರನ್ನು ಸ್ವಚ್ಚವಾಗಿಟ್ಟುಕೊಳ್ಳಿ, ಸುತ್ತಮುತ್ತಲಿನ ಪರಿಸರವನ್ನು ಕೂಡ ಸ್ವಚ್ಚವಾಗಿಟ್ಟುಕೊಂಡು, ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳಿ, ನೀರನ್ನು ಹೆಚ್ಚು ದಿನ ಸಂಗ್ರಹಿಸಿಡುವ ಬದಲು ಮೇಲಿಂದ ಮೇಲೆ ಬದಲಾಯಿಸಿ ಎಂಬುವುದು ಸೇರಿದಂತೆ ಅನೇಕ ಮಾಹಿತಿಯನ್ನು ಜನರಿಗೆ ನೀಡುತ್ತಿದ್ದಾರೆ. ಕೇವಲ ನೆರೆಬೆಂಚಿ ಗ್ರಾಮ ಮಾತ್ರವಲ್ಲ, ಸುತ್ತುಮುತ್ತಲಿನ ಗ್ರಾಮಗಳಲ್ಲಿನ ಜನರಿಗೂ ಕೂಡ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ.

ಹೇಗೆ ಹರಡುತ್ತೆ ಚಿಕನ್​​ಗುನ್ಯಾ, ಡೇಂಘಿ?

ಚಿಕನ್​​ಗುನ್ಯಾ ಮತ್ತು ಡೇಂಘಿ, ಈಡೀಸ್ ಅನ್ನೋ ಹೆಣ್ಣು ಸೊಳ್ಳೆ ಕಚ್ಚುವದರಿಂದ ಬರುತ್ತದೆ. ಹೆಚ್ಚಿನ ಜನರಿಗೆ, ಅಶುದ್ದವಾದ ನೀರಲ್ಲಿ ಮಾತ್ರ ಈಡೀಸ್ ಸೊಳ್ಳೆ ಮೊಟ್ಟೆಗಳನ್ನು ಇಡುತ್ತದೆ ಎಂಬ ನಂಬಿಕೆ ಇದೆ. ಆದರೆ ಈಡೀಸ್ ಸೊಳ್ಳೆ, ಶುದ್ದವಾದ ನೀರಲ್ಲಿ ಮೊಟ್ಟೆಗಳನ್ನು ಇಡುತ್ತದೆ. ನಿಂತ ನೀರು ಇರುತ್ತದೆ ಅಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಜೊತೆಗೆ ಸಾಯಂಕಾಲ ಮತ್ತು ಬೆಳಗಿನ ಜಾವ ಕಚ್ಚುತ್ತದೆ. ಯಾರಿಗೆಲ್ಲಾ ಈ ಈಡೀಸ್ ಸೊಳ್ಳೆ ಕಚ್ಚುತ್ತದೆ ಅವರು ಚಿಕನ್​​ಗುನ್ಯಾ ಮತ್ತು ಡೇಂಘಿ ಜ್ವರದಿಂದ ಬಳಲುತ್ತಾರೆ. ಹೀಗಾಗಿ ಜನರು ಸೊಳ್ಳೆಗಳು ಕಚ್ಚದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: Koppal Viral Fever: ವೈರಲ್ ಫೀವರ್​ಗೆ ತತ್ತರಿಸಿದ ನೆರೆಬೆಂಚಿ ಗ್ರಾಮ; ಜ್ವರ, ಮೈಕೈ ನೋವಿನಿಂದ ಜನರ ನರಳಾಟ

ಚಿಕನ್​​ಗುನ್ಯಾ ಮತ್ತು ಡೇಂಘಿ ಜ್ವರದ ಲಕ್ಷಣಗಳು ಏನು?

ಈಡೀಸ್ ಸೊಳ್ಳೆ ಕಚ್ಚುವದರಿಂದ ಚಿಕನ್ ಗುನ್ಯಾ ಮತ್ತು ಡೇಂಘಿ ಹರಡುತ್ತದೆ. ಇನ್ನು ಹೆಚ್ಚು ಜ್ವರ, ಮೈ ಕೈ ನೋವು, ಕೀಲು ನೋವು, ವಿಪರೀತ ಬೆವರುವದು, ಆಯಾಸ ಈ ರೋಗದ ಲಕ್ಷಣಗಳಾಗಿವೆ. ಚಿಕನ್​​ಗುನ್ಯಾ ಬಂದರೆ ನಡೆಯಲು ಆಗದಂತಹ, ಎದ್ದು ಕೂರಲು ಆಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು ಸಾಮಾನ್ಯವಾಗಿ ಸೊಳ್ಳೆ ಕಚ್ಚಿದ ಮೂರ್ನಾಲ್ಕು ದಿನದ ಮೇಲೆ ರೋಗ ಲಕ್ಷಣಗಳು ಕಾಣಿಸುತ್ತವೆ. ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ರೋಗ ಬಾಧಿಸಿದರೆ, ಇನ್ನು ಕೆಲವರು ತೀರ್ವರೀತಿಯ ತೊಂದರೆಗೊಳಗಾಗುತ್ತಾರೆ.

ನಿಯಂತ್ರಣ ಹೇಗೆ?

ಇನ್ನು ಚಿಕನ್​​ಗುನ್ಯಾ ಮತ್ತು ಡೇಂಘಿ, ಮಲೆರಿಯಾ, ಸೊಳ್ಳೆ ಕಚ್ಚುವುದರಿಂದ ಬರುವ ಖಾಯಿಲೆಗಳಾಗಿವೆ. ಹೀಗಾಗಿ ಸೊಳ್ಳೆಗಳು ಕಚ್ಚದಂತೆ ಜಾಗೃತಿ ವಹಿಸಬೇಕು. ಮೊದಲು ನೀರಲ್ಲಿ ಲಾರ್ವಾಗಳು ಬೆಳೆಯದಂತೆ ನೋಡಿಕೊಂಡು, ಅವುಗಳನ್ನು ನಾಶ ಮಾಡುವ ಕೆಲಸವನ್ನು ಮಾಡಬೇಕು. ಜೊತೆಗೆ ಸೊಳ್ಳೆಗಳು ನಿಂತ ನೀರಲ್ಲಿ, ಶೇಖರಿಸಿದ ನೀರಲ್ಲಿ ಮೊಟ್ಟೆಗಳನ್ನು ಇಡುವದರಿಂದ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರನ್ನು ಎರಡ್ಮೂರು ದಿನಕ್ಕೊಮ್ಮೆ ಬದಲಾಯಿಸುತ್ತಿರಬೇಕು. ನೀರು ಸಂಗ್ರಹಿಸುವ ಕ್ಯಾನ್, ಟಬ್​ಗಳನ್ನು ಸರಿಯಾಗಿ ಮುಚ್ಚಿಡಬೇಕು. ಸೊಳ್ಳೆಗಳ ನಿಯಂತ್ರಣ ಮಾಡಿದರೆ, ಸೊಳ್ಳೆಗಳು ಕಚ್ಚದಂತೆ ನೋಡಿಕೊಂಡರೆ ಈ ಖಾಯಿಲೆಗಳು ಬರದಂತೆ ತಡೆಯಬಹುದು ಅಂತಾರೆ, ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ.ಲಿಂಗರಾಜು.

ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆಗಳು ಕೂಡಾ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗದಂತೆ ಪಾಗಿಂಗ್ ಸೇರಿದಂತೆ ಚರಂಡಿಗಳ ಸ್ವಚ್ಚತೆಯನ್ನು ಮಾಡಿಸಬೇಕು. ಇದರ ಜೊತೆಗೆ ಸಾರ್ವಜನಿಕರು ಕೂಡಾ ಸ್ವಯಂ ಪ್ರೇರಣೆಯಿಂದ ಅನೇಕ ಕ್ರಮಗಳನ್ನು ಕೈಗೊಂಡರೆ, ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:37 am, Fri, 9 February 24