ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಪಕ್ಷ ಬಿಟ್ಟು ಹೋಗುವುದಾದರೆ ಹೋಗಿ, ಸಂಸದ ಸುಧಾಕರ್ಗೆ ಇದೆಂಥಾ ಮಾತು..!
ಕರ್ನಾಟಕ ಬಿಜೆಪಿಯಲ್ಲಿನ ಬಣ ಬಡಿದಾಟ ಮತ್ತೊಂದು ಹಂತಕ್ಕೆ ಹೋಗಿದ್ದು, ಕೇಸರಿ ಮನೆಯಲ್ಲಿ ಬಣ ಬಡಿದಾಟ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇದೆ. ಇಷ್ಟು ದಿನ ಶಾಸಕ ಯತ್ನಾಳ್ ಬಣ, ನೇರಾ ನೇರವಾಗಿಯೇ ವಿಜಯೇಂದ್ರ ವಿರುದ್ಧ ಸಮರ ಸಾರಿತ್ತು. ಇದೀಗ ಬಿಜೆಪಿಯಲ್ಲಿ ರೆಬೆಲ್ ಆಗಿರುವ ಸಂಸದ ಡಾ.ಕೆ.ಸುಧಾಕರ್, ಸಿಡಿದೆದ್ದಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಇನ್ನು ಇದಕ್ಕೆ ಇದೀಗ ವಿಜಯೇಂದ್ರ ಬಣದ ನಾಯಕರು ಸುಧಾಕರ್ಗೆ ತಿರುಗೇಟು ನೀಡುತ್ತಿದ್ದು, ಬಿಜೆಪಿ ನಾಯಕರ ಕಿತ್ತಾಟ ತಾರಕಕ್ಕೇರಿದೆ.

ಬೆಂಗಳೂರು, (ಜನವರಿ 30): ಕರ್ನಾಟಕ ಬಿಜೆಪಿ ಮನೆ ಮನೆಯೊಂದು ಮೂರು ಬಾಗಿಲಲ್ಲ. ನೂರಾರು ಬಾಗಿಲಾಗಿದೆ. ದಿನಕ್ಕೊಂದು ಆಂತರಿಕ ಕಚ್ಚಾಟ ಸ್ಫೋಟವಾಗುತ್ತಿದ್ದು, ಹೆಚ್ಚಾಗುತ್ತಿರುವ ವಿರೋಧಿ ಅಲೆ ವಿಜಯೇಂದ್ರಗೆ ಅಪ್ಪಳಿಸುತ್ತಿವೆ. ಯತ್ನಾಳ್, ರಮೇಶ್ ಜಾರಕಿಹೊಳಿ, ಶ್ರೀರಾಮುಲು ಬಳಿಕ ಇದೀಗ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ಸಿಡಿದೆದ್ದಿದ್ದಾರೆ. ಸುಧಾಕರ್ ಸಿಟ್ಟಿಗೆ ಕಾರಣವೇ ಜಿಲ್ಲಾಧ್ಯಕ್ಷರ ನೇಮಕ. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರನ್ನ ತಮ್ಮ ಗಮನಕ್ಕೆ ತರದೇ ನೇಮಕ ಮಾಡಿದ್ದಾರೆ eಂದು ಸುಧಾಕರ್ ಕೋಪಗೊಂಡಿದ್ದು, ಎಲ್ಲರನ್ನ ಸಮಾಧಿ ಮಾಡುವುದಕ್ಕೆ ಹೊರಟಿದ್ದೀರಾ ಎಂದು ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ಇನ್ನು ಇದಕ್ಕೆ ವಿಜಯೇಂದ್ರ ಬಣ ಸಹ ತಿರುಗೇಟು ನೀಡಿದ್ದು, ನಿಮ್ಮಂತಹವರು ಪಕ್ಷದಲ್ಲಿ ಇರುವುದಕ್ಕಿಂತ ಬಿಟ್ಟು ಹೋದರೇನೇ ಸರಿ. ಬಿಟ್ಟು ಹೋಗುವುದಾದರೆ ಹೋಗಿ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಖಡಕ್ ಆಗಿ ಹೇಳಿದ್ದಾರೆ.
ಬೆಂಗಳುರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಸನ್ಮಾನ್ಯ, ಗೌರವಾನ್ವಿತ ಸಂಸದ ಡಾ. ಸುಧಾಕರ್ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಬಹಳ ಕೇವಲವಾಗಿ ಮಾತಾಡಿದ್ದಾರೆ. ಅವರು ಮಾತಾಡಿರುವುದು ನಮಗೆ ಹಿಡಿಸಿಲ್ಲ. ಏನೇ ಇದ್ದರೂ ರಾಜ್ಯಾಧ್ಯಕ್ಷರ ಜೊತೆ ಮಾತಾಡಬಹುದಿತ್ತು. ಪರೋಕ್ಷವಾಗಿ ನನ್ನ ಕ್ಷೇತ್ರದ ಬಗ್ಗೆಯೂ ಮಾತಾಡಿದ್ದಾರೆ. ನಾನೇನು ದಡ್ಡ ಅಲ್ಲ. ಸುಧಾಕರ್ ನನ್ನಿಂದಲೇ ಸರ್ಕಾರ ರಚನೆ ಆಯಿತು ಎಂದು ಹೇಳಿದ್ದಾರೆ. 17 ಶಾಸಕರು ಬಂದಾಗ ಕೊನೆಯದಾಗಿ ಮೆಜಾರಿಟಿ ಆದ ಬಳಿಕ ಬಂದವರು ಸುಧಾಕರ್ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಗುಡುಗಿದ ಸುಧಾಕರ್
ವಿಧಾನಸೌಧದಲ್ಲಿ ಸುಧಾಕರ್ ಮೇಲೆ ಹಲ್ಲೆ ಆದಾಗ ರಕ್ಷಣೆ ಮಾಡಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟವನು ನಾನು. ಸಮರ್ಥ ಸಚಿವರಾಗಿದ್ದೂ ಸಾಕಷ್ಟು ಅನುದಾನ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹಾಕಿದರೂ ಯಾಕೆ ನೀವು ಸೋತಿರಿ? ನಿಮಗೆ ಅಸಮಾಧಾನ ಇರಬಹುದು. ಆದರೆ ವಿಜಯೇಂದ್ರ ಬಗ್ಗೆ ಬಹಿರಂಗವಾಗಿ ಮಾತಾಡಿದ್ರಿ? ನನಗೂ ವಿಜಯೇಂದ್ರ ಬಗ್ಗೆ ಸಣ್ಣ ಪುಟ್ಟ ಅಸಮಾಧಾನ ಇದ್ದರೂ ನಾನು ಎಲ್ಲೂ ಹೊರಗೆ ಮಾತಾಡಿಲ್ಲ. ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ನಿಲ್ಲುವ ಬಗ್ಗೆ ಮಾತಾಡಿದ್ದು ಸುಳ್ಳಾ? ಎಲ್ಲಿ ಪ್ರಮಾಣ ಮಾಡಬೇಕು ಹೇಳಿ ಬನ್ನಿ ನಾನು ಬರುತ್ತೇನೆ ಎಂದು ಸವಾಲು ಹಾಕಿದರು.
ಸುಧಾಕರ್, ಯತ್ನಾಳ್ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬನ್ನಿ
ಸುಧಾಕರ್, ಯತ್ನಾಳ್ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬನ್ನಿ. ಆಗ ನಿಮ್ಮ ಜನಪ್ರಿಯತೆ ಒಪ್ಪಿಕೊಳ್ಳೋಣ. ಬಿಜೆಪಿಗೆ ಬಂದು ವಾಪಸ್ ಹೋದರೆ ಉದ್ಧಾರ ಆಗಿದ್ದು ಇಲ್ಲ. ಇದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೂ ಅನ್ನಿಸಿದೆ. ಯಡಿಯೂರಪ್ಪ ವಾಪಸ್ ಬಿಜೆಪಿಗೆ ಬಂದೇ ಸಿಎಂ ಆಗಿದ್ದು. ಸುಧಾಕರ್ ಅವರೇ ನೀವು ನಾಳೆ ಸಿಎಂ ಆಗಬಹುದೇನೋ. ನೀವು ಪಕ್ಷದಲ್ಲಿ ಇರಿ ಅಂತಾ ನಾವಂತೂ ಹೇಳಲ್ಲ. ಹೋದರೆ ಸನ್ಮಾನ ಮಾಡಿ ಕಳುಹಿಸಿಕೊಟ್ಟು ಸಂಘಟನೆ ಮಾಡುತ್ತೇನೆ. ಮುಂದಿನ ಚುನಾವಣೆಗೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಾನೇ ಪ್ರವಾಸ ಮಾಡುತ್ತೇನೆ ಎಂದು ಚಾಲೆಂಜ್ ಮಾಡಿದರು.
ರಾಜಕೀಯ ಬಿಟ್ಟು ಬಿಡುತ್ತೇನೆ
ಆಗ ನಾವು ವಿರೋಧ ಮಾಡಿದ್ದು ನಿಜ. ಆಗ ನಾನು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನ ಮಗನ ಹೆಸರು ಹೇಳಿದ್ದೆ ಅಷ್ಟೇ. ನೀನು ಎಷ್ಟು ಲೀಡ್ ತಗೊಂಡೆ? ಚಿಕ್ಕಬಳ್ಳಾಪುರದಲ್ಲಿ ಯಾಕೆ ಸೋತೆ ನೀನು? ಬಾಗೇಪಲ್ಲಿಯಲ್ಲಿ ಯಾಕೆ ಸೋತೆ? ಯಲಹಂಕ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ನಿನ್ನೆ ಮಾತಾಡಿದ್ದೀರಿ. ಅಮಿತ್ ಶಾ ಕರೆದು ಮಾತಾಡಿದ ಮೇಲೆ ನಾನು ಚುನಾವಣೆಗೆ ಕೆಲಸ ಮಾಡಿದ್ದೇನೆ. ನಾನು ಯಲಹಂಕ ಕ್ಷೇತ್ರಕ್ಕೆ ಸುಧಾಕರ್ ಕರೆಸಿದ್ದು ಮೂರೇ ದಿನ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು ಸಾಬೀತು ಮಾಡಿದರೆ ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿದರು.
ನಿಮ್ಮಂತವರು ಪಕ್ಷ ಬಿಟ್ಟು ಹೋದರೇನೇ ಸರಿ
ನನಗೆ ರಾಜ್ಯಾಧ್ಯಕ್ಷರು ಜವಾಬ್ದಾರಿ ಕೊಡಲಿ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಂಘಟನೆ ಮಾಡಿ ತೋರಿಸುತ್ತೇನೆ, ಚಾಲೆಂಜ್ ಇದು. ನನ್ನ ಸಹವಾಸ ಗೊತ್ತಿಲ್ಲ. ನಾನು ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ಧ. ನೂರಕ್ಕೆ ನೂರು ನೀನು ಪಕ್ಷದಲ್ಲಿ ಇರಲ್ಲ. ಒಂದು ಕಾಲು ಹೊರಗೆ ಇಟ್ಟೇ ರಾಜಕೀಯ ಮಾಡುತ್ತಿದ್ದಾರೆ. ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುತ್ತಾರೆ. ಪಕ್ಷವನ್ನೇ ಅಲ್ಲಾಡಿಸಲು ಹೋದರೆ? ಬಂದು ಅಧಿಕಾರ ಅನುಭವಿಸಿದವನು ನೀನು. ನೀವು ಬರಲಿಲ್ಲ ಅಂದರೆ ನಾವು ಇಂದು ಪೂರ್ಣ ಬಹುಮತದಲ್ಲಿ ಸರ್ಕಾರ ಮಾಡುತ್ತಿದ್ದೆವು. ಚಿಕ್ಕಬಳ್ಳಾಪುರದಲ್ಲಿ ನೀನು ಗೆದ್ದಿದ್ದು ನಿನ್ನ ಹೆಸರಿನಿಂದ ಅಲ್ಲ ನೆನಪಿರಲಿ. ಸಂಘಟನೆಯಲ್ಲಿ ಜಿಲ್ಲೆ ನನ್ನದು ಬೆಂಗಳೂರು ಉತ್ತರ, ಲೋಕಸಭಾ ಕ್ಷೇತ್ರ ಮಾತ್ರ ಚಿಕ್ಕಬಳ್ಳಾಪುರ. ಸಂದೀಪ್ ರೆಡ್ಡಿ ನನ್ನ ಶಿಷ್ಯ ಅಂತಾ ಹೇಳುತ್ತಿದ್ದೀರಿ. ಜಿಲ್ಲಾಧ್ಯಕ್ಷರ ವಿಚಾರದಲ್ಲಿ ನನ್ನದು ಏನೂ ಅಸಮಾಧಾನ ಇಲ್ಲ. ಅನಾವಶ್ಯಕವಾಗಿ ನನ್ನ ಬಗ್ಗೆ, ಕ್ಷೇತ್ರದ ಬಗ್ಗೆ ಮಾತಾಡಿದರೆ ನಾನು ಸುಮ್ಮನೆ ಇರಲ್ಲ, ನಾನು ಬೇರೆಯ ರೀತಿಯಲ್ಲಿ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯತ್ನಾಳ್ ಕೂಡಾ ಬಹಿರಂಗವಾಗಿ ಮಾತಾಡುತ್ತಿದ್ದಾರೆ. ದಯವಿಟ್ಟು ನೀವು ಯಾಕೆ ಮಾಧ್ಯಮಕ್ಕೆ ಹೋಗುತ್ತೀರಿ. ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿಕೊಂಡು ಬರುತ್ತೇನೆ ಅಂತಾರೆ. ಬದಲಿಸಿಕೊಂಡು ಬನ್ನಿ, ಬೇಡ ಅಂದವರಾರು? ನಿಮ್ಮಂತಹವರು ಪಕ್ಷದಲ್ಲಿ ಇರುವುದಕ್ಕಿಂತ ಬಿಟ್ಟು ಹೋದರೇನೇ ಸರಿ. ಬಿಟ್ಟು ಹೋಗುವುದಾದರೆ ಹೋಗಿ ಎಂದು ಸುಧಾಕರ್ ಹಾಗೂ ಯತ್ನಾಳ್ಗೆ ತಿವಿದರು.