ಕರ್ನಾಟಕ ಗೆಲ್ಲಲು ಬಿಜೆಪಿ ಕೇಂದ್ರ ನಾಯಕರ ಯೋಜನೆ: ಲೋಕಸಭೆ ಟಿಕೆಟ್​ಗೆ ರಾಜ್ಯ ನಾಯಕರ ಮಧ್ಯೆ ಪೈಪೋಟಿ

Lok Sabha Elections: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಒಂದೆಡೆ, ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ತಂತ್ರಗಾರಿಕೆ ರೂಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲು ಮುಂದಾಗಿದ್ದರೆ, ಇತ್ತ ರಾಜ್ಯ ನಾಯಕರ ಮಧ್ಯೆ ಟಿಕೆಟ್​ಗಾಗಿ ಪೈಪೋಟಿ ಶುರುವಾಗಿದೆ.

ಕರ್ನಾಟಕ ಗೆಲ್ಲಲು ಬಿಜೆಪಿ ಕೇಂದ್ರ ನಾಯಕರ ಯೋಜನೆ: ಲೋಕಸಭೆ ಟಿಕೆಟ್​ಗೆ ರಾಜ್ಯ ನಾಯಕರ ಮಧ್ಯೆ ಪೈಪೋಟಿ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Feb 06, 2024 | 7:04 AM

ಬೆಂಗಳೂರು, ಫೆಬ್ರವರಿ 6: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಹ್ಯಾಟ್ರಿಕ್ ಗೆಲುವಿಗೆ ಬಿಜೆಪಿ (BJP) ಹೈಕಮಾಂಡ್ ಪಣ ತೊಟ್ಟಿದೆ. ಕಳೆದ ಬಾರಿಯಂತೆ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಸಿದ್ಧತೆಗೆ ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಖುದ್ದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇವರ ಜೊತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಚಿವ ರಾಜನಾಥ್‌ ಸಿಂಗ್ ಕೂಡ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅದರೆ, ರಾಜ್ಯ ನಾಯಕರ ಮಧ್ಯೆ ಟಿಕೆಟ್​ಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ತುಮಕೂರು ಲೋಕಸಭೆ ಟಿಕೆಟ್​​ಗಾಗಿ ಮಾಜಿ ಸಚಿವರ ಮಧ್ಯೆ ಪೈಪೋಟಿ ಶುರುವಾಗಿದೆ. ಸ್ಪರ್ಧೆಗಿಳಿಯಲು ವಿ.ಸೋಮಣ್ಣ ಈಗಾಗಲೇ ಸಿದ್ಧತೆ ನಡೆಸಿದ್ದು, ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ. ಆದರೆ, ಸೋಮಣ್ಣಗೆ ಟಿಕೆಟ್ ಬೇಡ ಎಂದು ಮಾಜಿ ಸಚಿವ ಮಾಧುಸ್ವಾಮಿ ಬಣ ಅಡ್ಡಗಾಲಿಟ್ಟಿದೆ. ಮಾಜಿ ಸಚಿವ ಮಾಧುಸ್ವಾಮಿ, ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ.

ಇತ್ತ ತುಮಕೂರಲ್ಲಿ ಈ ರೀತಿಯ ಬೆಳವಣಿಗೆಗಳೆಲ್ಲ ನಡೆಯುತ್ತಿದ್ದರೆ, ಅತ್ತ ದೆಹಲಿಯಲ್ಲಿರುವ ವಿ.ಸೋಮಣ್ಣ ತಮ್ಮದೇ ಕಾರ್ಯ ತಂತ್ರದಲ್ಲಿದ್ದಾರೆ. ತುಮಕೂರು ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್​ಗಾಗಿ ಮಾಜಿ ಆರೋಗ್ಯ ಸಚಿವ ಡಿ. ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್​​.ಆರ್.ವಿಶ್ವನಾಥ್ ಮಧ್ಯೆ ಜಿದ್ದಾಜಿದ್ದಿ ನಡೆಯುತ್ತಿದೆ. ಪುತ್ರ ಅಲೋಕ್​​ಗೆ ಟಿಕೆಟ್ ಕೊಡಿಸಲು ವಿಶ್ವನಾಥ್ ಹೋರಾಡುತ್ತಿದ್ದಾರೆ. ಡಿ.ಸುಧಾಕರ್ ನಾನೇ ಅಭ್ಯರ್ಥಿ ಎಂದುಕೊಂಡು ಓಡಾಡುತ್ತಿದ್ದಾರೆ. ಬಹಿರಂಗವಾಗಿಯೇ ವಾಗ್ಯುದ್ಧ ನಡೆಸಿದ್ದಾರೆ.

ಇತ್ತ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪನವರ ನಿವಾಸ ಮತ್ತೊಮ್ಮೆ ಪವರ್ ಸೆಂಟರ್​ ಆಗಿ ಬದಲಾಗಿದೆ. ಬಿಜೆಪಿ ನಾಯಕರು ಟಿಕೆಟ್​ಗಾಗಿ ಸರ್ಕಸ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಸೋಮವಾರ ಹಲವು ನಾಯಕರು ಲಗ್ಗೆ ಹಾಕಿದ್ದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಹ ಯಡಿಯೂರಪ್ಪನವರ ನಿವಾಸಕ್ಕೆ ಬಂದಿದ್ದರು. ಪುತ್ರ ಕಾಂತೇಶ್​​​​​ಗೆ ಹಾವೇರಿ ಕ್ಷೇತ್ರ ಟಿಕೆಟ್​ಗಾಗಿ ಈಶ್ವರಪ್ಪ ಪ್ರಯತ್ನಿಸಿದ್ರೆ, ಮತ್ತೊಂದೆಡೆ ಮರಳಿ ಬಿಜೆಪಿ ಸೇರ್ಪಡೆಯಾಗಿರುವ ಶೆಟ್ಟರ್ ಹೆಸರು ಕೂಡ ಹಾವೇರಿ ಕ್ಷೇತ್ರಕ್ಕೆ ಕೇಳಿ ಬರುತ್ತಿದೆ.

ಫೆಬ್ರವರಿ 9, 10ಕ್ಕೆ ಅಮಿತ್ ಶಾ ರಾಜ್ಯ ಪ್ರವಾಸ

ಬಿಜೆಪಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಫೆಬ್ರವರಿ 9 ಮತ್ತು 10 ರಂದು ಎರಡು ದಿನ ಮೈಸೂರು ಮತ್ತು ದಾವಣಗೆರೆಗೆ ಭೇಟಿ ನೀಡಲಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆ. ಸುತ್ತೂರು ಜಾತ್ರಾ ಮಹೋತ್ಸವದಲ್ಲೂ ಭಾಗಿಯಾಗಲಿರುವ ಅಮಿತ್ ಶಾ, ಕಾರ್ಯಕ್ರಮದ ಬಳಿಕ ರಾಜ್ಯ ನಾಯಕರ ಜೊತೆ ಸರಣಿ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ಫೆಬ್ರವರಿ 9, 10 ರಂದು 2 ದಿನ ಕೇಂದ್ರ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ

ಬಿಜೆಪಿ ನಾಯಕರು ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಕಾರ್ಯಕಾರಿಣಿ ಸಭೆಗಳನ್ನು ನಡೆಸಿದ್ದು, ಯಾವ ಅಭ್ಯರ್ಥಿಗೆ ಟಿಕೆಟ್​ ನೀಡಬೇಕು ಎಂಬ ವಿಚಾರವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಿಸ್ದಾರೆ. ಅಮಿತ್​ ಶಾ ಅವರ ಮುಂದೆ ವರದಿ ಒಪ್ಪಿಸಲಿದ್ದಾರೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ