ತುಮಕೂರಿನಲ್ಲಿ ಜೀಪ್ ಖರೀದಿಗೆ ಬಂದ ರೈತರಿಗೆ ಅವಮಾನ: ಗ್ರಾಹಕರ ಘನತೆ ನಮ್ಮ ಹೊಣೆ ಎಂದ ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ
ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ
ಬೆಂಗಳೂರು: ಜೀಪ್ ಖರೀದಿಗೆಂದು ಬಂದ ರೈತರೊಬ್ಬರಿಗೆ ತುಮಕೂರಿನ ಮಹೀಂದ್ರ ಡೀಲರ್ (Mahindra Dealer) ಅವಮಾನ ಮಾಡಿದ್ದಾರೆ ಎಂಬ ಸಂಗತಿ ರಾಷ್ಟ್ರಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು. ಸಾಕಷ್ಟು ಜನರು ಕಂಪನಿಯ ಸಿಇಒ ವಿಜಯ್ ನಕ್ರಾ (Vijay Nakra) ಮತ್ತು ಅಧ್ಯಕ್ಷ ಆನಂದ್ ಮಹೀಂದ್ರ (Anand Mahindra) ಅವರಿಗೆ ಸಂಬಂಧಿಸಿದ ಸುದ್ದಿ ಟ್ಯಾಗ್ ಮಾಡಿದ್ದರು. ಟಿವಿ9 ಸುದ್ದಿ ವಾಹಿನಿ ಸಹ ಈ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು. ಟಿವಿ9 ಕನ್ನಡ ಡಿಜಿಟಲ್ ಜಾಲತಾಣದಲ್ಲಿ ಸುದ್ದಿ ಪ್ರಕಟವಾಗಿತ್ತು. ಇದೀಗ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ‘ಮಹೀಂದ್ರ ಕಂಪನಿಯ ಮುಖ್ಯ ಉದ್ದೇಶವೇ ನಮ್ಮ ಸಮುದಾಯಗಳು ಮತ್ತು ಎಲ್ಲ ಸಹಭಾಗಿಗಳಿಗೆ ಶಕ್ತಿ ತುಂಬುವುದು. ವ್ಯಕ್ತಿಯ ಘನತೆ ಎತ್ತಿಹಿಡಿಯುವುದು ನಮ್ಮ ಸಂಸ್ಥೆಯ ಉದ್ದೇಶ. ಈ ಮೌಲ್ಯದೊಂದಿಗೆ ರಾಜಿ ಆಗುವುದು ಅಥವಾ ನಮ್ಮ ನೀತಿಗಳಿಂದ ದೂರ ಹೋಗುವ ಯಾವುದೇ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಮತ್ತು ತುರ್ತಾಗಿ ಗಮನಿಸುತ್ತೇವೆ’ ಎಂದು ಹೇಳಿದ್ದಾರೆ.
ತುಮಕೂರು ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಹೀಂದ್ರ ಕಂಪನಿಯ ಸಿಇಒ ವಿಜಯ್ ನಕ್ರಾ, ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸಬೇಕು ಎನ್ನುವ ನಮ್ಮ ಪ್ರಯತ್ನದಲ್ಲಿ ಡೀಲರ್ಗಳು ಅತಿಮುಖ್ಯ ಪಾತ್ರ ವಹಿಸುತ್ತಾರೆ. ನಮ್ಮೆಲ್ಲಾ ಗ್ರಾಹಕರನ್ನು ಗೌರವ ಮತ್ತು ಘನತೆಯಿಂದ ಕಾಣಬೇಕು ಎನ್ನುವುದು ನಮ್ಮ ನಿಯಮ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಗ್ರಾಹಕರನ್ನು ಗೌರವಿಸುವ ನಮ್ಮ ನಿಯಮದಿಂದ ಯಾವುದೇ ಡೀಲರ್ ದೂರ ಸರಿದಿರುವುದು ದೃಢಪಟ್ಟರೆ ನಮ್ಮ ಸಿಬ್ಬಂದಿಗೆ ತರಬೇತಿ ಕೊಡಿಸುವುದು, ಕೌನ್ಸೆಲಿಂಗ್ ಮಾಡಿಸುವುದು ಸೇರಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
The Core Purpose of @MahindraRise is to enable our communities & all stakeholders to Rise.And a key Core Value is to uphold the Dignity of the Individual. Any aberration from this philosophy will be addressed with great urgency. https://t.co/m3jeCNlV3w
— anand mahindra (@anandmahindra) January 25, 2022
ಏನಿದು ಘಟನೆ? ಕಾರು ಖರೀದಿಗೆ ಬಂದ ಯುವ ರೈತರಿಗೆ ಅವಮಾನ ಮಾಡಿದ ಘಟನೆ ತುಮಕೂರಿನ ರಾಮನಪಾಳ್ಯದಲ್ಲಿ ನಡೆದಿದೆ. ಇಲ್ಲಿನ ಕೆಂಪೇಗೌಡ ಎನ್ನುವ ಯುವ ರೈತರಿಗೆ ಅವಮಾನ ಮಾಡಲಾಗಿದೆ. ಬೋಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡಗೆ ಅವಮಾನ ಮಾಡಲಾಗಿದೆ. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ‘ದಿಗ್ಗಜರು’ ಸಿನಿಮಾವನ್ನು ನೀವು ನೋಡಿರುತ್ತೀರಿ. ಆ ಸಿನಿಮಾದಲ್ಲಿನ ದೃಶ್ಯದಂಥ ಘಟನೆಯೊಂದು ಇದೀಗ ನಿಜಜೀವನದಲ್ಲಿ ಸಂಭವಿಸಿದೆ. ತುಮಕೂರಿನ ರೈತರೊಬ್ಬರಿಗೆ ಅಂಥ ಅನುಭವವಾಗಿದೆ.
ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್ರಿಂದ ಕೆಂಪೇಗೌಡಗೆ ಅವಮಾನ ಆಗಿದೆ. ಅವಮಾನಿಸಿದ್ದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ.
ಕಾರ್ ಶೋರೂಮ್ನಲ್ಲಿ ಘಟನೆ ನಡೆದಿದ್ದೇನು? ನಮ್ಮನ್ನು ನೋಡಿ ಕೇವಲವಾಗಿ ಮಾತನಾಡಿದರು. 10 ರೂಪಾಯಿ ತರಲು ಯೋಗ್ಯತೆ ಇಲ್ಲ ಎಂದು ಅವಮಾನಿಸಿದರು. ಆಗ ನಾವು ಅರ್ಧಗಂಟೆಯಲ್ಲಿ 10 ಲಕ್ಷ ಹೊಂದಿಸಿ ತಂದು ಕೊಟ್ಟಿದ್ದೀವಿ. ಕಳೆದ ಜನವರಿ 4 ರಂದು ಶೋರೂಮ್ಗೆ ಹೋಗಿ ಗೂಡ್ಸ್ ವಾಹನ ತರಲು ಹೇಳಿಬರಲಾಗಿತ್ತು. ಅದರಂತೆ ಮೊನ್ನೆ ಎರಡು ಲಕ್ಷ ಹಣ ಕಟ್ಟಿ ವಾಹನ ತರಲು ಶೋರೂಮ್ಗೆ ಹೋಗಿದ್ವಿ. ಎರಡು ಲಕ್ಷ ಹಣ ಕಟ್ತೀವಿ. ವಾಹನ ಕೊಡಿ ಎಂದು ಕೇಳಿದ್ದೀವಿ. ಆಗ ಶೋರೂಮ್ನಲ್ಲಿದ್ದ ಏಳೂ ಮಂದಿ ‘ನೀವು ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ, ಸುಮ್ಮನೇ ಬಂದಿದ್ದೀರಾ’ ಎಂದು ಅವಮಾನ ಮಾಡಿದ್ದರು ಎಂದು ಕ್ಯಾಂಟರ್ ಚಾಲಕ ಕೆಂಪೇಗೌಡ ವಿವರಿಸಿದ್ದರು.
ನಾವು 25 ನಿಮಿಷ ಸಮಯ ಕೇಳಿದಾಗಲೂ ಅವರು ಕಿಚಾಯಿಸಿದರು. ನಾವು ಹೇಳಿದ ಸಮಯಕ್ಕೆ ಹಣ ತಂದು ಕೊಟ್ಟಿದ್ದೀವಿ. ಆದರೆ ಅವರು ವಾಹನ ನೀಡಲಿಲ್ಲ. ನಾವು ರೈತರು ಅಂತಾ ಅವಮಾನ ಮಾಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಬೊಲೆರೋ ವಾಹನ ತರಲು ಹೋಗಿದ್ದ ಕೆಂಪೇಗೌಡ ಹಾಗೂ ಮಾವ ರಾಮಾಂಜನೇಯ ಈ ಬಗ್ಗೆ ಟಿವಿ9ಗೆ ಹೇಳಿಕೆ ನೀಡಿದರು. ಕ್ಯಾಂಟರ್ ಚಾಲಕರಾಗಿ ಕೆಲಸ ಮಾಡುತ್ತಿರುವ ಕೆಂಪೇಗೌಡ ಸದ್ಯ ಸ್ವಂತ ವಾಹನ ಖರೀದಿಸಲು ನಿರ್ಧರಿಸಿದ್ದರು. ಹೀಗಾಗಿ ಸ್ವಂತ ವಾಹನ ತರಲು ಮಾವ ಹಾಗೂ ಸ್ನೇಹಿತರೊಂದಿಗೆ ಹೋಗಿದ್ದರು. ಈ ವೇಳೆ ಬಟ್ಟೆ ವೇಷಭೂಷಣ ಕಂಡು ಸಿಬ್ಬಂದಿ ಅವಮಾನಿಸಿದ್ದರು ಎಂದು ತಿಳಿದುಬಂದಿದೆ. ಸಿಬ್ಬಂದಿ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮಹೀಂದ್ರಾ ಕಂಪನಿ ವಾಹನವನ್ನು ಕಚ್ಚಿ ಎಳೆದ ಹುಲಿ: ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ ಇದನ್ನೂ ಓದಿ: ಮಗನಿಗಾಗಿ ಗುಜರಿ ವಸ್ತುಗಳಿಂದ ನಾಲ್ಕು ಚಕ್ರದ ವಾಹನ ತಯಾರಿಸಿದ ವ್ಯಕ್ತಿ : ವಾಹನ ಮೆಚ್ಚಿಕೊಂಡ ಆನಂದ್ ಮಹೀಂದ್ರಾರಿಂದ ಬೊಲೇರೋ ಗಿಫ್ಟ್
Published On - 5:15 pm, Tue, 25 January 22