ಬೆಂಗಳೂರು, ಸೆಪ್ಟೆಂಬರ್ 16: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಗಲಭೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ನಾಗಮಂಗಲ ಗಲಭೆಯಲ್ಲಿ ಕೇರಳ ಮೂಲದವರ ಮತ್ತು ನಿಷೇಧಿತ ಪಿಎಫ್ಐ ಸಂಘಟನೆ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿರುವ ಬೆನ್ನಲ್ಲೇ ಅಶೋಕ್ ಈ ಹೇಳಿಕೆ ನೀಡಿದ್ದಾರೆ
‘‘ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ? ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳುತ್ತಿದ್ದು, ಈ ಕೋಮುದಳ್ಳುರಿಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ. ಇದರ ಬೆನ್ನಲ್ಲೇ ಚಿಕ್ಕಮಗಳೂರಲ್ಲಿ ಬೈಕ್ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದಿರುವ ಪುಂಡಾಟ, ದಾವಣಗೆರೆಯ ಗಾಂಧಿನಗರ ಹಾಗೂ ಅಹ್ಮದ್ ನಗರಗಳಲ್ಲಿ ಹಿಂದೂ ಯುವಕರು ಬಾವುಟ ಕಟ್ಟಿದ್ದಕ್ಕೆ ಮತಾಂಧ ಪುಂಡರು ಅವರ ಮೇಲೆ ಹಲ್ಲೆ ಮಾಡಿರುವುದು, ಇವನ್ನೆಲ್ಲಾ ಗಮನಿಸುತ್ತಿದ್ದರೆ ಈ ಪ್ರಚೋದನಕಾರಿ ಘಟನೆಗಳು ಗಣೇಶೋತ್ಸವವನ್ನೇ ಟಾರ್ಗೆಟ್ ಮಾಡಿರುವಂತಿದೆ’’ ಎಂದು ಎಕ್ಸ್ ಸಂದೇಶದಲ್ಲಿ ಅಶೋಕ್ ಉಲ್ಲೇಖಿಸಿದ್ದಾರೆ.
ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ?
ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳುತ್ತಿದ್ದು, ಈ ಕೋಮುದಳ್ಳುರಿಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗಿತ್ತಿದೆ.… pic.twitter.com/GmyxMyiZIZ
— R. Ashoka (@RAshokaBJP) September 16, 2024
‘‘ಇಂತಹ ಘಟನೆಗಳು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿಯೂ ನಡೆದಿತ್ತು. ಹಿಂದೂಗಳ ಹಬ್ಬಗಳು, ಉತ್ಸವಗಳು, ಸಂಭ್ರಮಾಚರಣೆಗಳನ್ನೇ ಗುರಿಯಾಗಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಇಂತಹ ದುಷ್ಕೃತ್ಯಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ದೊಡ್ಡ ಜಾಲವೇ ಇರುವಂತಿದೆ. ಅಂತಾರಾಜ್ಯ, ಅಂತರಾಷ್ಟ್ರೀಯ ನಂಟು ಹೊಂದಿರುವ ಇಂತಹ ವ್ಯವಸ್ಥಿತ, ಪ್ರಾಯೋಜಿತ, ಜಾಲವನ್ನ ಬೇಧಿಸುವುದು ಸ್ಥಳೀಯ ಪೊಲೀಸರಿಂದ ಅಸಾಧ್ಯವಾಗಿದ್ದು, ಕೂಡಲೇ ಈ ಪ್ರಕರಣಗಳನ್ನ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ’’ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.
ನಾಗಮಂಗಲ ಗಲಭೆ ಸಂಬಂಧ ದಾಖಲಾಗಿರುವ ಎಫ್ಐಆರ್ನಲ್ಲಿ ಕೇರಳ ಮೂಲದ ಇಬ್ಬರ ಹೆಸರು ಇರುವುದು ಭಾನುವಾರ ಬೆಳಕಿಗೆ ಬಂದಿತ್ತು. ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ನಾಗಮಂಗಲ ಗಲಭೆಯಲ್ಲಿ ಹಿಂದೂಗಳ ಮೇಲೆ ಹೆಚ್ಚು ಕೇಸ್ ಹಾಕಲಾಗಿದೆ. ಗಲಭೆಯಲ್ಲಿ ಪಿಎಫ್ಐ ಲಿಂಕ್ ಇದ್ದವರೂ ಇದ್ದರು ಎನ್ನಲಾಗಿದೆ. ಅವರನ್ನು ಕೇರಳದಿಂದ ಕರೆಸುವ ಕೆಲಸ ಕಿಡಿಗೇಡಿ ಮುಸ್ಲಿಮರು ಮಾಡಿದ್ದಾರೆ. ಮಂಗಳೂರಿನಲ್ಲೂ ಕೋಮುಗಲಭೆ ಆಗುತ್ತಿದೆ. ಘಟನೆಯ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಅಶೋಕ್ ಆಗ್ರಹಿಸಿದರು.
ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ರಾಜಾರೋಷವಾಗಿ ಘೋಷಣೆ ಕೂಗುತ್ತಾ ಹೋಗಿದ್ದಾರೆ. ಈ ಸರ್ಕಾರ ಬಂದ ಮೇಲೆ ಭಯೋತ್ಪಾದಕರಿಗೆ, ಪಿಎಫ್ಐನವರಿಗೆ ಭಯ ಇಲ್ಲದಂತಾಗಿದೆ. ಒಂದು ಕಡೆ ರಾಹುಲ್ ವಿದೇಶಗಳಲ್ಲಿ ಭಾರತ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮತ್ತೆ ವಿಭಜನೆ ಹುನ್ನಾರಕ್ಕೆ ಕಾಂಗ್ರೆಸ್ ಮುಂದಾಗಿದೆ. ನಾಗಮಂಗಲ, ಮಂಗಳೂರು, ಚಿಕ್ಕಮಗಳೂರು ಘಟನೆಗಳಿಂದ ಮತ್ತೆ ವಿಭಜನೆ ಕೆಲಸಕ್ಕೆ ಮುಂದಾಗಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಇದನ್ನೂ ಓದಿ: ನಾಗಮಂಗಲ ಗಲಭೆಯಲ್ಲಿ ನಿಷೇಧಿತ PFI ಸದಸ್ಯರು ಭಾಗಿ?, ಇನ್ಸ್ಪೆಕ್ಟರ್ ಅಮಾನತು
ಪ್ರಗತಿಪರರು, ನಗರ ನಕ್ಸಲರು ಕಾಂಗ್ರೆಸ್ಗೆ ಕುಮ್ಮಕ್ಕು ಕೊಡ್ತಿದ್ದಾರೆ. ಈ ಪ್ರಗತಿಪರರು, ನಗರ ನಕ್ಸಲರು ಯಾಕೆ ಈ ಘಟನೆಗಳನ್ನು ಖಂಡಿಸ್ತಿಲ್ಲ? ಮಂಗಳೂರು, ಚಿಕ್ಕಮಗಳೂರು, ನಾಗಮಂಗಲ ಘಟನೆಗಳ ತನಿಖೆಯನ್ನು ಎನ್ಐಎಗೆ ವಹಿಸಬೇಕು ಅಂತ ಆಗ್ರಹಿಸುತ್ತೇನೆ. ಬಾಂಬ್ ತಯಾರಿಗೆ ಕಚ್ಚಾ ವಸ್ತು, ಜಾಗ ಕೊಟ್ಟಿದ್ದು, ಎಲ್ಲಿ ಇದನ್ನು ತಯಾರು ಮಾಡಿದ್ರು? ಇಲ್ಲಿನ ಮಸೀದಿಗಳಲ್ಲಿ ತಯಾರಿಸಿದ್ರಾ, ಹೊರಗಿಂದ ತಂದಿದ್ರಾ? ದೇಶದ ಭದ್ರತೆ ದೃಷ್ಟಿಯಿಂದ ಇದೆಲ್ಲದರ ತನಿಖೆ ಆಗಲು ಎನ್ಐಗೆ ವಹಿಸಲಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 am, Mon, 16 September 24