ಕೆಆರ್​ಎಸ್​ನಿಂದ ನೀರು ಬಿಟ್ಟ ಮರುದಿನವೇ ವಿಸಿ ನಾಲೆಯಲ್ಲಿ ಕೊಚ್ಚಿ ಹೋದ ಮಗು

ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೆಆರ್​ಎಸ್ ಜಲಾಶಯ. ಕಳೆದ ಬಾರಿ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ವಿಸಿ ನಾಲೆಗಳಿಗೆ ನೀರನ್ನ ಬಿಟ್ಟಿರಲಿಲ್ಲ. ಹೀಗಾಗಿ ಬೇಸಿಗೆ ಬೆಳೆಯನ್ನ ರೈತರು ಬೆಳೆದಿರಲಿಲ್ಲ. ಆದರೆ, ಈ ಬಾರಿ ಜಲಾಶಯ ನೂರು ಅಡಿಗೂ ಹೆಚ್ಚು ನೀರು ಸಂಗ್ರಹವಾಗಿರೋ ಹಿನ್ನೆಲೆಯಲ್ಲಿ ನಿನ್ನೆಯಿಂದ ನಾಲೆಗಳಿಗೆ ನೀರನ್ನ ಬಿಡಲಾಗಿದೆ. ಆದರೆ, ನೀರು ಬಿಟ್ಟ ಮಾರನೇ ದಿನವೇ ವಿಸಿ ನಾಲೆಗೆ ಬಿದ್ದು ಮಗುವೊಂದು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಕೆಆರ್​ಎಸ್​ನಿಂದ ನೀರು ಬಿಟ್ಟ ಮರುದಿನವೇ ವಿಸಿ ನಾಲೆಯಲ್ಲಿ ಕೊಚ್ಚಿ ಹೋದ ಮಗು
ನೀರು ಬಿಟ್ಟ ಮರುದಿನವೇ ವಿಸಿ ನಾಲೆಯಲ್ಲಿ ಕೊಚ್ಚಿ ಹೋದ ಮಗು
Follow us
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2024 | 9:40 PM

ಮಂಡ್ಯ, ಜು.11: ಮಂಡ್ಯ ತಾಲೂಕಿನ ಹೊನಗನಹಳ್ಳಿ ಮಠ(Honaganahalli Matha) ಗ್ರಾಮದಲ್ಲಿ ಮಧ್ಯಾಹ್ನ ಮನೆ ಬಳಿ ಆಟವಾಡುತ್ತಿದ್ದ ವೇಳೆ ವಿಶ್ವೇಶ್ವರಯ್ಯ ನಾಲೆಯಲ್ಲಿ 4 ವರ್ಷದ ಮಗು ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆಯಿಂದ ಕೆಆರ್​ಎಸ್​(KRS) ಜಲಾಶಯದಿಂದ ನಾಲೆಗೆ ನೀರು ಹರಿಸಲಾಗುತ್ತಿದೆ. ಇನ್ನು ರಾಜು ಹಾಗೂ ಕಸ್ತೂರಿ ದಂಪತಿಯ ಪುತ್ರ ಸಬಿನ್(4), ಅಂಗನವಾಡಿಯಿಂದ ಬಂದು ಮನೆ ಬಳಿಯೇ ಆಟವಾಡುತ್ತಿದ್ದ. ಆದರೆ, ಮಧ್ಯಾಹ್ನ 2.30ರಿಂದ ನಾಪತ್ತೆಯಾಗಿದ್ದಾನೆ. ಕೂಡಲೇ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆ ಪಕ್ಕದಲ್ಲೇ ಇರುವ ವಿಶ್ವೇಶ್ವರಯ್ಯ ನಾಲೆ ಬಳಿ ಸಬಿನ್ ಚಪ್ಪಲಿ ಪತ್ತೆಯಾಗಿದೆ.

ಆಟವಾಡುವ ವೇಳೆ ಆಯತಪ್ಪಿ ನಾಲೆಗೆ ಬಿದ್ದಿರುವ ಶಂಕೆ

ಇನ್ನು ಆಟವಾಡುತ್ತ ಹೋಗಿ ಆಯತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರು, ಕುಟುಂಬ ಸದಸ್ಯರು ಸೇರಿಕೊಂಡು ಮಗು ಸಬಿನ್​ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮಗು ಪತ್ತೆಗಾಗಿ ನೀರು ನಿಲ್ಲಿಸುವಂತೆ ಮನವಿ ಮಾಡಿದರೂ ನೀರು ನಿಲ್ಲಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ತುಂಬಿ ಹರಿಯುತ್ತಿರುವ ವಿಸಿ ನಾಲೆಯಲ್ಲಿ ಮಗು ಕೊಚ್ಚಿಹೋಗಿರಬಹುದು ಎನ್ನಲಾಗುತ್ತಿದೆ. ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಮಂಡ್ಯ: ಆಧುನೀಕರಣ ಹೆಸರಲ್ಲಿ ನಾಲೆಗಳಿಗೆ ಹರಿಯದ ನೀರು; ಕಾಮಗಾರಿ ವಿಳಂಬಕ್ಕೆ ರೈತರ ಆಕ್ರೋಶ

ನಿನ್ನೆಯಷ್ಟೇ ನೀರು ಹರಿಸಿದ್ದ ಸರ್ಕಾರ

ಕಳೆದ ಬಾರಿ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರಲಿಲ್ಲ. ಹೀಗಾಗಿ ಬೇಸಿಗೆ ಬೆಳೆಗೆ ನೀರನ್ನ ಕೊಟ್ಟಿರಲಿಲ್ಲ. ಜಿಲ್ಲೆಯ ರೈತರು ಸಹ ನೀರಿಲ್ಲದೆ ಬೆಳೆಯನ್ನ ಬೆಳೆದಿರಲಿಲ್ಲ. ಅಲ್ಲದೆ ನಾಲೆಗಳ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ನಾಲೆಗೆ ನೀರನ್ನ ಸಹ ಹರಿಸಿಲಿಲ್ಲ. ಹೀಗಾಗಿ ಜಿಲ್ಲೆಯ ರೈತರು ಹೋರಾಟ ಮಾಡಿ ನಾಲೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದ್ರು. ಜಲಾಶಯ ನೂರು ಅಡಿ ದಾಟಿದ ಮೇಲೆ ನೀರು ಹರಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಇದೀಗ ಜಲಾಶಯ ನೂರು ಅಡಿ ದಾಟಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ ನಾಲೆಗಳಿಗೆ ನೀರನ್ನ ಹರಿಸಲಾಗಿದೆ. ಇದು ಒಂದು ಕಡೆ ರೈತರ ಸಂತಸಕ್ಕೆ ಕಾರಣವಾಗಿದೆ. ಆದರೆ, ಇನ್ನೊಂದೆಡೆ ನೀರು ಬಿಟ್ಟ ಮರುದಿನವೇ ವಿಸಿ ನಾಲೆಯಲ್ಲಿ ಮಗುವೊಂದು ಕೊಚ್ಚಿ ಹೋಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ