ಮಂಡ್ಯ ಜಿಲ್ಲೆಯಲ್ಲೂ ಶುರುವಾಯ್ತು ಆಕ್ಸಿಜನ್ ಕೊರತೆ; ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಚಾಮರಾಜನ ನಗರ ಜಿಲ್ಲೆಯಂತೆ ನಮ್ಮ ಜಿಲ್ಲೆಯಲ್ಲಿ ಆಕ್ಸಿಜನ್ ಸಿಗದೆ ಒಂದೇ ಒಂದು ಸಾವು ಸಂಭವಿಸಿದರೂ ನಾವೇನು ಅನ್ನೋದನ್ನ ತೋರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

  • ರವಿ ಲಾಲಿಪಾಳ್ಯ
  • Published On - 17:31 PM, 4 May 2021
ಮಂಡ್ಯ ಜಿಲ್ಲೆಯಲ್ಲೂ ಶುರುವಾಯ್ತು ಆಕ್ಸಿಜನ್ ಕೊರತೆ; ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
ಪ್ರಾತಿನಿಧಿಕ ಚಿತ್ರ

ಮಂಡ್ಯ: ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಸಾವಿನ ಸಂಖ್ಯೆಯಲ್ಲೂ ಕೂಡ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ರೋಗಿಗಳಿಗೆ ಪೂರೈಕೆಯಾಗಬೇಕಿರುವ ಆಕ್ಸಿಜನ್ ಕೊರತೆ ಕಂಡುಬರುತ್ತಿದೆ. ಇನ್ನು ಆರಂಭದಿಂದಲೂ ಮಂಡ್ಯ ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಇಲ್ಲಾ ಎಂದು ಹೇಳುತ್ತಲೇ ಬಂದಿದ್ದ ಜಿಲ್ಲಾಡಳಿತ ಈಗ ನಮ್ಮಲ್ಲಿ ಆಕ್ಸಿಜನ್ ಸ್ಟಾಕ್ ಇಲ್ಲವೇ ಇಲ್ಲ ಎಂದು ಕೈ ಚೆಲ್ಲಿ ಕುಳಿತಿದೆ.

ಮಂಡ್ಯ ಜಿಲ್ಲೆಯಲ್ಲಿ ಪ್ರತೀ ನಿತ್ಯ 350 ರಿಂದ 360 ಸಿಲಿಂಡರ್ ಆಕ್ಸಿಜನ್ ಅಗತ್ಯವಿದೆ. ಆದರೆ, ಈಗ ಪೂರೈಕೆಯಾಗುತ್ತಿರುವುದು ಕೇವಲ 70 ರಿಂದ 80 ಸಿಲಿಂಡರ್ ಮಾತ್ರ. ಈ ಬಗೆಗೆ ಆತಂಕ ವ್ಯಕ್ತಪಡಿಸಿರುವ ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಸಂಜೆಯೊಳಗಾಗಿ ಮಂಡ್ಯ ಜಿಲ್ಲೆಗೆ ಆಕ್ಸಿಜನ್ ಪೂರೈಸದಿದ್ದರೆ ಎಷ್ಟು ಜನ ಸಾಯ್ತಾರೋ ಹೇಳಲು ಸಾಧ್ಯವಿಲ್ಲ. ಈ ಸಂಬಂಧ ನಾನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಜೊತೆ ಮಾತನಾಡಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ಆಗಬಹುದಾದ ಅನಾಹುತ್ತಕ್ಕೆ ಅವರೇ ಹೊಣೆಯಾಗುತ್ತಾರೆ. ಚಾಮರಾಜನ ನಗರ ಜಿಲ್ಲೆಯಂತೆ ನಮ್ಮ ಜಿಲ್ಲೆಯಲ್ಲಿ ಆಕ್ಸಿಜನ್ ಸಿಗದೆ ಒಂದೇ ಒಂದು ಸಾವು ಸಂಭವಿಸಿದರೂ ನಾವೇನು ಅನ್ನೋದನ್ನ ತೋರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಮಂಡ್ಯ ಮೆಡಿಕಲ್ ಕಾಲೇಜನ್ನು ಸಂಪೂರ್ಣವಾಗಿ ಕೊವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಆತಂಕ ಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಪ್ರತೀ ನಿತ್ಯ 400 ಕ್ಕೂ ಹೆಚ್ಚು ಕೊವಿಡ್ ಪಾಸಿಟಿವ್ ಪೀಡಿತರಿಗೆ ಚಿಕಿತ್ಸೆ ನೀಡಿ ಸಾವಿರಾರು ಜನರಿಗೆ ಕೊವಿಡ್ ಟೆಸ್ಟ್ ಮಾಡುತ್ತಿರುವ ಮೆಡಿಕಲ್ ಕಾಲೇಜಿನ 68 ಜನ ಸಿಬ್ಬಂದಿಗಳಿಗೆ ಕೊವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿರುವ 20 ಜನ, ನರ್ಸಿಂಗ್ ವಿಭಾಗದಲ್ಲಿನ 17 ಜನ, ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿರುವ 16 ಜನ ವಿದ್ಯಾರ್ಥಿಗಳು ಹಾಗೂ 15 ಜನ ಕಂಪ್ಯೂಟರ್ ಆಪರೇಟರ್​ಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಇದಲ್ಲದೆ ಮಂಡ್ಯಗೆ ಹತ್ತಿರ ಇರುವ ಹಳ್ಳಿಗಳಿಂದ ಪ್ರತೀ ನಿತ್ಯ ನೂರಾರು ಜನರನ್ನ ಕರೆತಂದು ಪರೀಕ್ಷೆಗೊಳಪಡಿಸಲಾಗುತ್ತಿದೆ. ಇನ್ನೊಂದು ಕಡೆ ಜನರೇ ಸ್ವಯಂ ಪ್ರೇರಿತರಾಗಿ ಬಂದು ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲದ್ದರಿಂದ ಮಂಡ್ಯ ಮೆಡಿಕಲ್ ಕಾಲೇಜು ಆವರಣ ಸಂಪೂರ್ಣವಾಗಿ ಕೊವಿಡ್ ವಲಯವಾಗಿ ಮಾರ್ಪಾಡಾಗಿದೆ. ಹೀಗಾಗಿಯೇ ಕಾಲೇಜಿನ ನಿರ್ದೇಶಕ ಡಾ. ಹರೀಶ್ ಆಸ್ಪತ್ರೆಯ ಆವರಣದಲ್ಲಿ ಜನರು ಅನಗತ್ಯವಾಗಿ ಓಡಾಡುವುದನ್ನ ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಎಲ್ಲೆಡೆ ಆಕ್ಸಿಜನ್​ಗೆ ಆಹಾಕಾರ ಉಂಟಾಗಿದ್ದರೂ ಮಂಡ್ಯದಲ್ಲಿ ಸದ್ಯಕ್ಕೆ ಆ ಸ್ಥಿತಿ ಇಲ್ಲ ಎಂದು ಹೇಳುತ್ತಲೇ ಬಂದಿದ್ದ ಜಿಲ್ಲಾಡಳಿತ ಇದೀಗ ನಮ್ಮಲ್ಲೂ ಆಕ್ಸಿಜನ್ ಸ್ಟಾಕ್ ಇಲ್ಲ ಎಂದು ಹೇಳಲಾರಂಭಿಸಿರುವುದು ಜನರ ಆತಂಕವನ್ನ ಹೆಚ್ಚಿಸಿದೆ. ರಾಜ್ಯ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಆಕ್ಸಿಜನ್ ಪೂರೈಸಲು ಮುಂದಾಗದಿದ್ದರೆ ದುರಂತ ತಪ್ಪಿದ್ದಲ್ಲ.

ಇದನ್ನೂ ಓದಿ:

ಕೊರೊನಾ ಹೆಮ್ಮಾರಿಗೆ ಐಪಿಎಲ್‌ 2021 ಬಲಿ, ಈ ವರ್ಷದ ಟೂರ್ನಿ ಮಧ್ಯದಲ್ಲಿಯೇ ರದ್ದು

Pascal Saldhana: ಹೆಂಡತಿ ಆಭರಣ ಮಾರಿ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಕ್ಷಿಜನ್ ನೀಡುತ್ತಿದ್ದಾರೆ ಪ್ಯಾಸ್ಕಲ್…