ಕೊರೊನಾದಿಂದ ಉಂಟಾದ ಹೆಚ್ಚಿನ ಸಾವುಗಳು ಸೋಂಕು ದೃಢಪಟ್ಟ 10 ದಿನಗಳ ಬಳಿಕ ಸಂಭವಿಸಿದೆ; ಕೊವಿಡ್ 2ನೇ ಅಲೆಯ ವಿಶೇಷ ವರದಿ ಇಲ್ಲಿದೆ
ಕೊರೊನಾ ಸೋಂಕಿಗೆ ತುತ್ತಾದ ಶೇ. 10ರಷ್ಟು ಸೋಂಕಿತರಲ್ಲಿ ಪೋಸ್ಟ್ ಕೊವಿಡ್ ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಆ ಪೈಕಿ ಸುಮಾರು ಶೇ. 5ರಷ್ಟು ಮಂದಿ ಆಸ್ಪತ್ರೆಗೆ, ಐಸಿಯುಗೆ ದಾಖಲಾಗಿದ್ದಾರೆ. ಅದರಲ್ಲಿ ಶೇ. 1-2 ರಷ್ಟು ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಕೊರೊನಾ ಎರಡನೇ ಅಲೆ ವೇಳೆ ಘಟಿಸಿದ ಸಾವುಗಳಲ್ಲಿ ಬಹಳಷ್ಟು ಸಂಖ್ಯೆಯ ಮರಣಗಳು ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ 10 ದಿನ ಕಳೆದ ಬಳಿಕ ಸಂಭವಿಸಿದವು ಆಗಿದೆ ಎಂಬ ಅಂಶ ಇದೀಗ ಬಹಿರಂಗವಾಗಿದೆ. ಮೇ 28ರಿಂದ ಜೂನ್ 3ರ ಅವಧಿಯಲ್ಲಿ ದಾಖಲಾದ 1,855 ಕೊವಿಡ್ ಮರಣಗಳ ಪೈಕಿ 734 ಸಾವುಗಳು ಆಸ್ಪತ್ರೆಗೆ ದಾಖಲಾಗಿ 10 ಅಥವಾ ಅದಕ್ಕಿಂತ ಹೆಚ್ಚಿನ ದಿನ ಕಳೆದ ರೋಗಿಗಳದ್ದಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಆಧರಿಸಿ ಪಡೆದ ಅಂಕಿ ಅಂಶಗಳಿಂದ ಈ ವಿಚಾರ ತಿಳಿದುಬಂದಿದೆ. ಸುಮಾರು ಶೇ. 40ರಷ್ಟು ಸೋಂಕಿತರು 10 ದಿನ ಚಿಕಿತ್ಸೆ ಪಡೆದ ನಂತರ ಮೃತಪಟ್ಟಿದ್ದಾರೆ. ಇದು ಕೊವಿಡ್-19 ಮೊದಲ ಅಲೆಗೆ ತದ್ವಿರುದ್ಧವಾಗಿದೆ. ಅಂದರೆ, ಕೊರೊನಾ ಮೊದಲನೇ ಅಲೆಯಲ್ಲಿ ಶೇ. 60ರಷ್ಟು ಸಾವುಗಳು ಆಸ್ಪತ್ರೆಗೆ ದಾಖಲಾದ ಒಂದರಿಂದ ಮೂರು ದಿನದ ಅಂತರದಲ್ಲಿ ಸಂಭವಿಸಿತ್ತು. ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ ಮಾಡಿರುವ ವಿಶೇಷ ವರದಿಯ ಕನ್ನಡ ಅನುವಾದ ಇಲ್ಲಿದೆ.
ಈ ಅಂಕಿ ಅಂಶಗಳು ಕೊರೊನಾ ಎರಡನೇ ಅಲೆಯ ಮತ್ತೊಂದು ಗುಣಲಕ್ಷಣವನ್ನು ತೋರ್ಪಡಿಸಿದಂತಾಗಿದೆ. ಅಂದರೆ, ಸೋಂಕಿಗೆ ಚಿಕಿತ್ಸೆ ಪಡೆದು, ಹತ್ತು ದಿನಗಳ ಆರೈಕೆ ಪಡೆದು ಗುಣಮುಖರಾಗುತ್ತಾರೆ ಎನ್ನಬೇಕಾದ ಸಂದರ್ಭದಲ್ಲಿ ಈ ಸಾವುಗಳು ಸಂಭವಿಸಿದೆ.
ಹಲವು ಕೊವಿಡ್ ಮರಣಗಳು, ಕೊರೊನಾ ನಂತರದ ಆರೋಗ್ಯ ಸಮಸ್ಯೆಗಳಿಂದ ಕಂಡುಬಂದಿದೆ. ಕೊರೊನಾ ಸೋಂಕು ತಗುಲಿ, ರಿಕವರಿ ಫೇಸ್ನಲ್ಲಿ ಇರುವಾಗ ಮೃತಪಟ್ಟಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗದ ಡಾ. ಶಿವಕುಮಾರ್ ಹೇಳಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಮನೆಗೆ ವಾಪಸಾಗಿ, ನಂತರ ಮತ್ತೆ ಇತರೆ ಆರೋಗ್ಯ ಸಮಸ್ಯೆ ಕಂಡುಬಂದು ಮತ್ತೆ ಆಸ್ಪತ್ರೆ, ಐಸಿಯುಗೆ ದಾಖಲಾಗಿ ಸಾವನ್ನಪ್ಪಿದ್ದಾರೆ ಎಂಬ ವಿಚಾರವನ್ನು ಕೂಡ ಡಾ. ಶಿವಕುಮಾರ್ ತಿಳಿಸಿದ್ದಾರೆ.
ಡಾ. ಶಿವಕುಮಾರ್ ಹೇಳಿಕೆಯ ಪ್ರಕಾರ, ಕೊರೊನಾ ಸೋಂಕಿಗೆ ತುತ್ತಾದ ಶೇ. 10ರಷ್ಟು ಸೋಂಕಿತರಲ್ಲಿ ಪೋಸ್ಟ್ ಕೊವಿಡ್ ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಆ ಪೈಕಿ ಸುಮಾರು ಶೇ. 5ರಷ್ಟು ಮಂದಿ ಆಸ್ಪತ್ರೆಗೆ, ಐಸಿಯುಗೆ ದಾಖಲಾಗಿದ್ದಾರೆ. ಅದರಲ್ಲಿ ಶೇ. 1-2 ರಷ್ಟು ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ರೀತಿಯ ಸಾವುಗಳು ಖಾಸಗಿ ಆಸ್ಪತ್ರೆಗಳಲ್ಲೂ ಕಂಡುಬಂದಿದೆ. ಕೊರೊನಾ ಸೋಂಕಿತರು 10 ದಿನಗಳ ಅಥವಾ ಹೆಚ್ಚಿನ ಚಿಕಿತ್ಸೆ ಪಡೆದು, ಜ್ವರ ಕಂಡುಬಾರದ ಕಾರಣ ಬಿಡುಗಡೆಗೆ ತಯಾರಾಗುತ್ತಿರುವ ಸಂದರ್ಭದಲ್ಲಿ ಆರೋಗ್ಯ ಏರುಪೇರಾಗಿ ಸಾವನ್ನಪ್ಪಿದ್ದಾರೆ ಎಂದು ಕೊವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಕೊರೊನಾ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ ಹಾಗೂ ರಾಜ್ಯದಲ್ಲಿ ಇಳಿಮುಖವಾಗುತ್ತಿದೆ. ಆದರೂ, ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿಲ್ಲ. ಬಹಳಷ್ಟು ಕೊವಿಡ್ ಮರಣಗಳು, ಸೋಂಕಿತರ ರಿಪೋರ್ಟಿಂಗ್ ವಿಳಂಬವಾದ್ದರಿಂದ ಸಂಭವಿಸಿವೆ. ಜೊತೆಗೆ ಈ ಬಾರಿಯ ಕೊರೊನಾ ಅಲೆಯಲ್ಲಿ, ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಧಿ ಅಧಿಕವಾಗಿದೆ. ಸೋಂಕಿತರು ತಡವಾಗಿ ಆಸ್ಪತ್ರೆಗೆ ಬಂದು ತಡವಾಗಿ ಬಿಡುಗಡೆಯಾಗುತ್ತಿದ್ದಾರೆ ಎಂದು ಆರೋಗ್ಯ ತಜ್ಞ ಮತ್ತು ಕರ್ನಾಟಕ ಸರ್ಕಾರದ ಕೊವಿಡ್-19 ತಾಂತ್ರಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ. ಎಮ್.ಕೆ. ಸುದರ್ಶನ್ ಅಭಿಪ್ರಾಯಪಟ್ಟಿದ್ದಾರೆ.
ಮೇ 28ರಿಂದ ಜೂನ್ 3ರ ಅವಧಿಯಲ್ಲಿ ಸಂಭವಿಸಿದ ಸಾವುಗಳಲ್ಲಿ ಬಹಳಷ್ಟು ಮಂದಿ ಮೇ 15ಕ್ಕೂ ಮುಂಚೆ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ. ನಾವು ಸೋಂಕು ಇಳಿಮುಖವಾಗಿರುವುದನ್ನು ಹಾಗೂ ಸಾವುಗಳ ಸಂಖ್ಯೆ ಅಷ್ಟೇ ಇರುವುದನ್ನು ಹೊಂದಿಸಿ ನೋಡಲಾಗುವುದಿಲ್ಲ. ಈಗ ಕಂಡುಬರುತ್ತಿರುವ ಕೊವಿಡ್ ಸೋಂಕಿತರ ಸಾವು 15ರಿಂದ 21 ದಿನಗಳ ಹಿಂದೆ ದೃಢಪಟ್ಟ ಪ್ರಕರಣಗಳದ್ದಾಗಿರುತ್ತದೆ. ಆಗ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿತ್ತು ಎಂದು ರಾಜೀವ್ ಗಾಂಧಿ ಯುನಿವರ್ಸಿಟಿ ಉಪಕುಲಪತಿ ಡಾ. ಎಸ್. ಸಚ್ಚಿದಾನಂದ್ ಹೇಳಿದ್ದಾರೆ.
ಮತ್ತೊಂದು ವಿಶೇಷ ಅಂಶ ಎಂದರೆ, ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿ ಇದ್ದ ಏಪ್ರಿಲ್ ಕೊನೆಯ ಹಾಗೂ ಮೇ ಮೊದಲ ಭಾಗದಲ್ಲಿ ಬೆಂಗಳೂರಿನ ಸ್ಮಶಾನಗಳು 50-85 ಶವಸಂಸ್ಕಾರ ಮಾಡುತ್ತಿದ್ದರೆ, ಈಗ ಅದೇ ಸ್ಮಶಾನಗಳಲ್ಲಿ ಒಂದಂಕಿ ಲೆಕ್ಕದಲ್ಲಿ ಶವಸಂಸ್ಕಾರ ನಡೆಯುತ್ತಿದೆ. ಅಂದರೆ, ಮರಣಿಸಿದವರ ಅಧಿಕೃತ ದಾಖಲೆಗೂ ಸ್ಮಶಾನದಲ್ಲಿ ಉಂಟಾದ ಒತ್ತಡಗಳಿಗೂ ಯಾವುದೋ ವ್ಯತ್ಯಾಸ ಸೂಚಿಸುತ್ತಿದೆ.
ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ
ಎಚ್ಐವಿ ಸೋಂಕಿತೆಯ ದೇಹದಲ್ಲಿ 32 ಬಗೆಯ ಕೊರೊನಾ ರೂಪಾಂತರಿ ವೈರಸ್ಗಳು; ಆತಂಕ ವ್ಯಕ್ತಪಡಿಸಿದ ಸಂಶೋಧಕರು
Published On - 7:27 pm, Sun, 6 June 21