
ಬೆಂಗಳೂರು, ಜುಲೈ 6: ಕರ್ನಾಟಕ ರಾಜಕಾರಣದಲ್ಲಿ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಬದಲಿ ನಿವೇಶನ ಹಂಚಿಕೆ ಹಗರಣದ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಡಾ. ಯತೀಂದ್ರ (Yathindra Siddaramaiah) ಅವರ ಖಾತೆ ಬದಲಾವಣೆಗೆ ತೀವ್ರ ಒತ್ತಡ ವ್ಯಕ್ತವಾಗಿದೆ. ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿರುವ ಡಾ. ಯತೀಂದ್ರ ಅವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಖಾತೆಯಿಂದ ಮುಕ್ತಿ ನೀಡಿ, ಬದಲಿ ಇಲಾಖೆಯನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ‘ನೈಜ ಹೋರಾಟಗಾರರ ವೇದಿಕೆ’ ಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ (DK Shivakumar) ಪತ್ರ ಬರೆದು ಆಗ್ರಹಿಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಬದಲಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಯತೀಂದ್ರ ತಂದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿದ್ದು, ತಾಯಿ ಪಾರ್ವತಿ ಎರಡನೇ ಆರೋಪಿಯಾಗಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಜೊತೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕ್ರಿಮಿನಲ್ ಪ್ರಕರಣ (PCR 42/24), ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಮತ್ತು ಜಾರಿ ನಿರ್ದೇಶನಾಲಯದಲ್ಲಿ (ED) ಪ್ರಕರಣವೂ ದಾಖಲಾಗಿ ಸದ್ಯ ವಿಚಾರಣೆಯ ಹಂತದಲ್ಲಿದೆ.
ವೇದಿಕೆಯ ಪರವಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ಬರೆದಿರುವ ಪತ್ರದಲ್ಲಿ ಗಂಭೀರ ಕಾನೂನು ಮತ್ತು ನೈತಿಕ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ‘ಮುಡಾ ಹಗರಣದಲ್ಲಿ ಯತೀಂದ್ರರ ತಂದೆ ಮತ್ತು ತಾಯಿಯೇ ಪ್ರಮುಖ ಆರೋಪಿಗಳಾಗಿದ್ದಾರೆ. ಹೀಗಿರುವಾಗ ಅವರ ಮಗನೇ ಇಡೀ ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿ ಅಧಿಕಾರ ಚಲಾಯಿಸುವುದು ಮತ್ತು ನಿರ್ಧಾರಗಳನ್ನು ಕೈಗೊಳ್ಳುವುದು ಖಂಡಿತವಾಗಿಯೂ ‘ಹಿತಾಸಕ್ತಿ ಸಂಘರ್ಷ’ಕ್ಕೆ (Conflict of Interest) ಎಡೆಮಾಡಿಕೊಡುತ್ತದೆ. ಇದರಿಂದಾಗಿ ಸಾರ್ವಜನಿಕರಲ್ಲಿ, ‘ತಂದೆ-ತಾಯಿಯ ರಕ್ಷಣೆಗಾಗಿ ಅಧಿಕಾರ ದುರುಪಯೋಗವಾಗಬಹುದು’ ಎಂಬ ಅನುಮಾನ ಮೂಡುವುದು ಸಹಜ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
‘ಸೆಕ್ಷನ್ 167 ಮತ್ತು 169 ರ ಪ್ರಕಾರ ಸಾರ್ವಜನಿಕ ಸೇವೆಯಲ್ಲಿರುವವರು ತಪ್ಪು ದಾಖಲೆ ಸೃಷ್ಟಿಸುವುದು ಅಥವಾ ಕಾನೂನುಬಾಹಿರವಾಗಿ ಆಸ್ತಿ ಖರೀದಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಡಾ. ಯತೀಂದ್ರ ಇದೇ ಇಲಾಖೆಯಲ್ಲಿ ಮುಂದುವರಿದರೆ ಮುಡಾ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗಿ ನ್ಯಾಯ ಸಿಗುವುದು ಮರೀಚಿಕೆಯಾಗುತ್ತದೆ. ಆಡಳಿತಾತ್ಮಕ ಮತ್ತು ಸಂವಿಧಾನದ ಆರ್ಟಿಕಲ್ 311 ರ ನಿಯಮಾವಳಿಗಳ ಅನ್ವಯ ಪಾರದರ್ಶಕತೆ ಕಾಯ್ದುಕೊಳ್ಳಲು ಅವರನ್ನು ನಗರಾಭಿವೃದ್ಧಿ ಇಲಾಖೆಯಿಂದ ದೂರವಿಡಬೇಕು. ರಾಜ್ಯದ ನಾಗರಿಕರಲ್ಲಿ ಮೂಡಿರುವ ಗೊಂದಲಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿಗಳು ತಕ್ಷಣವೇ ಅವರಿಗೆ ಯಾವುದೇ ಒತ್ತಡವಿಲ್ಲದ ಮತ್ತೊಂದು ಬದಲಿ ಖಾತೆಯನ್ನು ನೀಡಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು’ ಎಂದು ಹೆಚ್.ಎಂ. ವೆಂಕಟೇಶ್ ಸಿಎಂ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ