ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ಲೋಕಾಯುಕ್ತ ಪೊಲೀಸರಿಂದ ಕೆಲವೇ ದಿನಗಳಲ್ಲಿ ಅಂತಿಮ ವರದಿ
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣ ವಿಚಾರವಾಗಿ ಕೋರ್ಟ್ನಲ್ಲಿ ಭಾರಿ ಬೆಳವಣಿಗೆ ಆಗುತ್ತಿದ್ದರೆ, ಮತ್ತೊಂದೆಡೆ ಲೋಕಾಯುಕ್ತ ತನಿಖೆ ಮುಕ್ತಾಯದ ಹಂತ ತಲುಪಿದೆ. ಮೈಸೂರು ಲೋಕಾಯುಕ್ತ ಸಿದ್ದರಾಮಯ್ಯ, ಅವರ ಪತ್ನಿ ಸಹಿತ ಹಲವರ ವಿಚಾರಣೆ ನಡೆಸಿದ್ದು, ತನಿಖೆ ಅಂತಿಮ ಘಟ್ಟಕ್ಕೆ ತಲುಪಿದೆ. ಈ ಮೂಲಕ ಹಿರಿಯ ಅಧಿಕಾರಿಗಳಿಗೆ ಪ್ರಕರಣದ ಅಂತಿಮ ತನಿಖಾ ವರದಿ ಸಲ್ಲಿಸಲು ತಯಾರಿ ನಡೆದಿದೆ.

ಬೆಂಗಳೂರು, ಫೆಬ್ರವರಿ 7: ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ವಿರುದ್ಧ ಕೇಳಿ ಬಂದ ಮುಡಾ ಹಗರಣ ಆರೋಪದ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಮೈಸೂರು ಲೋಕಾಯುಕ್ತ ಪೊಲೀಸರು ಈವರೆಗೆ ಮಾಡಲಾದ ಆರೋಪ ಸಂಬಂಧ ಪರಿಶೀಲನೆ, ಹಲವರ ವಿಚಾರಣೆ ನಡೆಸಿದ್ದು, ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದ ಎ1 ಸಿಎಂ ಸಿದ್ದರಾಮಯ್ಯ, ಎ2 ಆಗಿರುವ ಸಿದ್ಧರಾಮಯ್ಯ ಪತ್ನಿ ಪಾರ್ವತಿ, ಎ3 ಮಲ್ಲಿಕಾರ್ಜುನ, ಎ4 ದೇವರಾಜು ಸೇರಿದಂತೆ ಹಲವರ ವಿಚಾರಣೆಯನ್ನು ಮೈಸೂರು ಲೋಕಾಯುಕ್ತ ನಡೆಸಿತ್ತು. ಈ ವೇಳೆ ಆರೋಪ ಸಂಬಂಧ ಸಿಕ್ಕ ಸಾಕ್ಷಿಗಳ ಪರಿಶೀಲನೆ ಮತ್ತು ವಿಚಾರಣೆ ಸಹ ನಡೆಸಲಾಗಿತ್ತು. ಸದ್ಯ ಈ ವೇಳೆ ಸಂಗ್ರಹಿಸಲಾದ ವರದಿಗಳ ಆಧರಿಸಿ FR (ಫೈನಲ್ ರಿಪೊರ್ಟ್) ಸಿದ್ಧಪಡಿಸಲಾಗುತ್ತಿದೆ.
ಬಾಗಶಃ ವರದಿ ಬಹುತೇಕ ಮುಕ್ತಾಯದ ಹಂತ ತಲುಪಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಫೈನಲ್ ರೀಪೊರ್ಟ್ ಸಿದ್ಧಗೊಳ್ಳಲಿದೆ. ಆ ಬಳಿಕ ವರದಿ ಸ್ಕ್ರೂಟಿನಿ ಪ್ರಕ್ರಿಯೆ ಮುಗಿಸಿ ಮೈಸೂರು ಲೋಕಾಯುಕ್ತ ಎಸ್ಪಿ, ವರದಿಯನ್ನು ಐಜಿಪಿ ಸುಬ್ರಮಣೇಶ್ವರ ರಾವ್ಗೆ ಸಲ್ಲಿಸಲಿದ್ದಾರೆ. ನಂತರ ವರದಿಯ ಸಾರಾಂಶ ಲೋಕಾಯುಕ್ತ ಎಡಿಜಿಪಿಗೆ ಸಲ್ಲಿಕೆಯಾಗಲಿದ್ದು, ಕಾನೂನು ಸಲಹೆಗಾಗಿ ತಜ್ಞರ ಮೊರೆ ಹೊಗಲಿದ್ದಾರೆ. ಆ ಬಳಿಕ ವರದಿ ಕೊರ್ಟ್ಗೆ ಸಲ್ಲಿಕೆಯಾಗಲಿದೆ.
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಸ್ನೇಹಮಯಿ ಅರ್ಜಿ ವಜಾ
ಮತ್ತೊಂದೆಡೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದ್ದು, ನೋಟಿಸ್ ಪ್ರಶ್ನಿಸಿ ಹೈಕೊರ್ಟ್ ಮೊರೆ ಹೊದ ಹಿನ್ನಲೆ ತಾತ್ಕಲಿಕ ತಡೆ ನೀಡಿದ್ದ ಕೊರ್ಟ್, ಮುಂದಿನ ವಿಚಾರಣೆಯನ್ನು ಇದೇ 10 ಕ್ಕೆ ನಿಗದಿ ಮಾಡಿದೆ. ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



