ಮೂಡಾ ಹಗರಣ: ಹಂಚಿಕೆಯಾಗಿದ್ದ ಎಲ್ಲಾ 1,100 ನಿವೇಶನಗಳನ್ನ ರದ್ದುಗೊಳಿಸಿದ ಸರ್ಕಾರ
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಈಗಾಗಲೇ ಹಂಚಿಕೆ ಮಾಡಲಾಗಿದ್ದ ಸುಮಾರು 1,100, 50:50 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಹಾಗಾದ್ರೆ, ಕ್ರಯಪತ್ರ ಹಾಗೂ ಖಾತೆ ಆಗಿದ್ದರೆ ಏನ್ಮಾಡ್ಬೇಕು ಎನ್ನುವುದು ಈ ಕೆಳಗಿನಂತಿದೆ.

ಮೈಸೂರು, (ಆಗಸ್ಟ್ 19): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ ಮಾಡಲಾಗಿದ್ದ 50:50 ಅಡಿಯಲ್ಲಿ 1,100 ಬದಲಿ ನಿವೇಶನಗಳ (Muda Scam case) ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ನೀಡಿರುವ ವರದಿಯನ್ವಯ ಈ ಆದೇಶ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 2023ರ ಮಾರ್ಚ್ 14ರ ನಿರ್ದೇಶನವನ್ನ ಉಲ್ಲಂಘಿಸಿ ಮಾಡಲಾದ ಎಲ್ಲಾ 50:50 ಬದಲಿ ನಿವೇಶನಗಳ ಹಂಚಿಕೆಯನ್ನ ರದ್ದುಪಡಿಸಿ ಆದೇಶಿಸಿದೆ.
ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿದ್ದರೆ ಬದಲಿ ನಿವೇಶನಗಳ ಕ್ರಯಪತ್ರ ರದ್ದುಪಡಿಸಲು ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿ ನೋಂದಣಿಯಾಗಿರುವ ಬದಲಿ ನಿವೇಶನಗಳ ಖಾತೆ ಮಾಡುವುದನ್ನು ತಡೆಹಿಡಿಯಲು ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ನಿರ್ದೇಶನ ನೀಡಿದೆ. ಅಲ್ಲದೇ ಸರ್ಕಾರದ ಮಾರ್ಗಸೂಚಿ ಬರುವವರೆಗೆ ಕ್ರಯಪತ್ರ ನೀಡದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಮುಡಾ ಹಗರಣದ ಮತ್ತಷ್ಟು ಕರ್ಮಕಾಂಡ ಬಯಲು: ಒಬ್ಬನೇ ವ್ಯಕ್ತಿಗೆ 30ಕ್ಕೂ ಹೆಚ್ಚು ಸೈಟ್ ಹಂಚಿಕೆ, ಇಡಿ ತನಿಖೆಯಲ್ಲಿ ಪತ್ತೆ
ಒಂದು ವೇಳೆ ಖಾತಾ ಆಗಿದ್ದಲ್ಲಿ, ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1976, ಕರ್ನಾಟಕ ಮುನಿಸಿಪಲ್ ಕಾಯ್ದೆ 1961 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರಡಿ ನಿಯಮಾನುಸಾರ ರದ್ದುಪಡಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸುವುದು. ಈ ಆದೇಶದ ಮೇರೆಗೆ ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿಯನ್ನು (Compliance Report) ಸರ್ಕಾರಕ್ಕೆ ತಕ್ಷಣವೇ ಸಲ್ಲಿಸಲು ಸೂಚಿಸಲಾಗಿದೆ. ಒಂದು ವೇಳ ಸೂಚನೆ ಪಾಲನೆ ಮಾಡಲು ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 1,100, 50:50 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರ ಮೌಲ್ಯ ಸರಿ ಸುಮಾರು 2,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಸಂತಸ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ, ಮುಡಾ ಹಗರಣದಲ್ಲಿ ದೊಡ್ಡದೊಂದು ಜಯ ಸಿಕ್ಕಿದೆ. 1100 ನಿವೇಶನ ಹಿಂಪಡೆಯಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 1100 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಎಲ್ಲಾ ನಿವೇಶನಗಳನ್ನು ವಾಪಸ್ ಮುಡಾಗೆ ಬರುವವರೆಗೂ ಹೋರಾಟ ನಡೆಸುತ್ತೇನೆಂದು ಹೇಳಿದ್ದೆ. ಅದು ಈಗ ಹೇಳಿದಂತೆ ಆಗಿದೆ. ನನ್ನ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:34 pm, Wed, 19 August 26




