ಶಾಲೆಯಲ್ಲಿ ಮಕ್ಕಳಿಗೆ ತ್ರಿಶೂಲ ದೀಕ್ಷೆ: ಶಾಲೆ ತ್ಯಜಿಸಲು ಮುಂದಾದ ಮುಸ್ಲಿಂ ವಿದ್ಯಾರ್ಥಿಗಳು
ಸಾಯಿ ಶಂಕರ ಶಾಲೆಯಲ್ಲಿ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿರುವ ಹಿನ್ನೆಲೆ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆ ತ್ಯಜಿಸಲು ಮುಂದಾಗಿದ್ದಾರೆ. ಟಿಸಿ ನೀಡುವಂತೆ ವಿದ್ಯಾರ್ಥಿಗಳ ಪೋಷಕರು ಅರ್ಜಿ ಸಲ್ಲಿಸಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ಕೊಡಗು: ಸಾಯಿ ಶಂಕರ ಶಾಲೆಯಲ್ಲಿ ಮಕ್ಕಳಿಗೆ ತ್ರಿಶೂಲ ದೀಕ್ಷೆ (Trident initiation) ನೀಡಿರುವ ವಿಚಾರ ದಿನಗಳ ಹಿಂದೆ ಭಾರಿ ಟೀಕೆಗೆ ಗುರಿಯಾಗಿತ್ತು. ಇದೀಗ ಇದನ್ನೇ ಮುಂದಿಟ್ಟುಕೊಂಡು ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆ ತ್ಯಜಿಸಲು ಮುಂದಾಗಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ನಗರದಲ್ಲಿರುವ ಶಾಲೆಯ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಟಿಸಿ (Transfer Certificate) ಕೇಳಿದ್ದು, ಇದಕ್ಕೆ ಕಾರಣ ದುಬೈ (Dubai)ನಿಂದ ಬಂದಿರುವ ಆ ಒಂದು ದೂರವಾಣಿ ಕರೆ ಎನ್ನಲಾಗುತ್ತಿದೆ. ಅದರಂತೆ, ಟಿಸಿ ನೀಡುವಂತೆ ಮೂವರು ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರು ಅರ್ಜಿ ಸಲ್ಲಿಸಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ (School board) ದೃಢಪಡಿಸಿದೆ.
ನೋಟಿಸ್ ನೀಡಿದ ಪೊಲೀಸಪ್ಪ ಎತ್ತಂಗಡಿ
ಶಾಲೆಯಲ್ಲಿ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿದ ವಿಚಾರವಾಗಿ ಶಿಬಿರ ಆಯೋಜಕರಿಗೆ ಹಾಗೂ ಶಾಲಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಶಾಲೆಯ ವಿರುದ್ಧ ಬಂದಿದ್ದ ದೂರಿನ ಮೇರೆಗೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ಎಸ್.ಎನ್.ಜಯರಾಮ್ ಅವರು ನೋಟಿಸ್ ಜಾರಿ ಮಾಡಿದ್ದರು. ಸದ್ಯ ಜಯರಾಮ್ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿ: ತ್ರಿಶೂಲ ದೀಕ್ಷೆ
ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ವಿರಾಜಪೇಟೆ ಪೊಲೀಸ್ ಉಪಾಧೀಕ್ಷಕ ಸಿ.ಟಿ.ಜಯಕುಮಾರ್, ವರ್ಗಾವಣೆ ಮಾಮೂಲಿಯಾಗಿದ್ದು, ವಿವಾದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸರ್ಕಲ್ ಇನ್ಸ್‌ಪೆಕ್ಟರ್ ಹುದ್ದೆಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಇದು ಸಾಮಾನ್ಯ ವರ್ಗಾವಣೆಯಾಗಿದೆ. ವರ್ಗಾವಣೆಯ ಆದೇಶವನ್ನು ಬಹಳ ಹಿಂದೆಯೇ ಹೊರಡಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಪೊಲೀಸರ ವರ್ಗಾವಣೆಯನ್ನು ಪ್ರಶ್ನಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟ್, ಮಡಿಕೇರಿಯಲ್ಲಿ ನಡೆದ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ಸರ್ಕಾರ ಬೆಂಬಲಿಸಿದೆ ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು. ನೀವು ಪ್ರಾಮಾಣಿಕರಾಗಿದ್ದರೆ, ವರ್ಗಾವಣೆ ಆದೇಶವನ್ನು ತಡೆಹಿಡಿಯಿರಿ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಹೇಳಿದರು.
ಸಾಯಿ ಶಂಕರ ಶಾಲೆಯಲ್ಲಿ ತ್ರಿಶೂಲ ದೀಕ್ಷೆ ಹಾಗೂ ಏರ್ಗನ್ ತರಬೇತಿ ನೀಡಿರುವ ಫೋಟೋಗಳು ವೈರಲ್ ಆಗಿದ್ದವು. ಶಾಲಾ ಆವರಣದಲ್ಲಿ ಇಂಥ ಚಟುವಟಿಕೆಗಳು ನಡೆದಿರುವ ಹಿನ್ನೆಲೆ ಸಾಮಾಜಿಕ ಜಾಲತಾನದಲ್ಲಿ ಟೀಕೆ ವ್ಯಕ್ತವಾಗಿತ್ತು. ಶಿಬಿರದಲ್ಲಿ ಸುಮಾರು 145 ಮಂದಿ ಭಾಗಿಯಾಗಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 5:09 pm, Thu, 19 May 22