ಸತ್ತವರಿಗೆ ತಿಥಿ ಮಾಡೋದು ಕಾಮನ್, ಆದರೆ ಕೊಳ್ಳೇಗಾಲ ತಾಲೂಕಿನಲ್ಲಿ ಜೀವಂತ ಇರೋ ವ್ಯಕ್ತಿಗೆ ತಿಥಿ ಮಾಡಿದ್ರು!
ಈ ತಿಥಿ ಕಾರ್ಯದೊಂದಿಗೆ 25 ದಿನಗಳ ಕಾಲ ನಡೆದ ಸೀಗೆಮಾರಮ್ಮ ನರಬಲಿ ಹಬ್ಬ ಮುಕ್ತಾಯಗೊಂಡಿದೆ. ಈ ವೇಳೆ ಗ್ರಾಮದಲ್ಲಿ ಯಾರೂ ಮಾಂಸಾಹಾರ, ಮದ್ಯಪಾನ ಮಾಡುವಂತಿಲ್ಲ, ಶುಭ ಸಮಾರಂಭಗಳನ್ನು ಮಾಡುವಂತಿಲ್ಲ, ಮನೆಗಳಲ್ಲಿ ಅಡುಗೆಗೆ ಒಗ್ಗರಣೆಯನ್ನ ಸಹ ಹಾಕುವಂತಿಲ್ಲ! ಈ ವಿಶಿಷ್ಟ ಜಾತ್ರೆಯನ್ನು ಪಾಳ್ಯ ಗ್ರಾಮಸ್ಥರು ಈಗಲು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಚಾಮರಾಜನಗರ: ಸಾಮಾನ್ಯವಾಗಿ ಸತ್ತವರಿಗೆ ತಿಥಿ ಮಾಡೋದು ಕಾಮನ್. ಆದ್ರೆ ಇಲ್ಲಿ ಜೀವಂತ ಇರೋ ವ್ಯಕ್ತಿಗೂ ಎಡೆ ಇಟ್ಟು ತಿಥಿ ಕಾರ್ಯಮಾಡಲಾಗಿದೆ. ಅಷ್ಟಕ್ಕೂ ಜೀವಂತ ಇರೋ ವ್ಯಕ್ತಿಗೆ ತಿಥಿ ಯಾಕ್ ಮಾಡಿದ್ರು ಅಂತೀರಾ ಈ ಸ್ಟೋರಿ ಓದಿ. ಹೌದು ಇದು ಚಾಮರಾಜನಗರ ಜಿಲ್ಲೆ (chamarajanagar) ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸೀಗೆಮಾರಮ್ಮನ ನರಬಲಿ ಹಬ್ಬದ ಮತ್ತೊಂದು ವಿಶೇಷ. ಕಳೆದ 25 ದಿನಗಳಿಂದ ನಡೆಯುತ್ತಿರುವ ಕೊಳ್ಳೇಗಾಲ (Kollegal) ತಾಲೂಕಿನ ಪಾಳ್ಯ ಗ್ರಾಮದ (Palya villagers) ಸೀಗೆ ಮಾರಮ್ಮ ನರಬಲಿ ಹಬ್ಬದ ಕೊನೆಯ ದಿನ ತಿಥಿ ಮಾಡಿ ಹಬ್ಬಕ್ಕೆ ಅಂತ್ಯ ಹಾಡಲಾಗಿದೆ. ಇಲ್ಲಿ ಸೀಗಮಾರಮ್ಮನ ಒಕ್ಕಲಿನ ಕುಟುಂಬಸ್ಥರಿಗೆ ಮರಿ ಕೊಯ್ದು ಮಾಂಸಾಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಇತರ ಸಮುದಾಯದ ಜನರು ತಿಥಿ ಕಾರ್ಯ ನೋಡುವಂತಿಲ್ಲ. ಇದರಿಂದ ಮಧ್ಯರಾತ್ರಿಯಲ್ಲೆ ಸೀಗೆ ಮಾರಮ್ಮ ಮನೆತನದವರಷ್ಟೇ ತಿಥಿ ನಡೆಸಬೇಕೆಂಬ ಸಂಪ್ರದಾಯ ಇದೆ. ಹೀಗೆ ವ್ಯಕ್ತಿ ಸತ್ತು ಮತ್ತೆ ಬದುಕುತ್ತಾನೆ ಎಂಬ ನಂಬಿಕೆಯ ವಿಶಿಷ್ಟ ಆಚರಣೆಗೆ ಸಾಕ್ಷಿಯಾಗಿದ್ದ ಪಾಳ್ಯ ಗ್ರಾಮವು ಬದುಕಿ ಬಂದ ವ್ಯಕ್ತಿಗೆ ತಿಥಿ ಮಾಡುವ ಮೂಲಕ (last rites) ಮತ್ತೊಂದು ವಿಚಿತ್ರ ಅಚರಣೆಗೆ ಸಾಕ್ಷಿಯಾಯಿತು. ಜಾತ್ರೆ ದಿನ ಪ್ರಾಣ ಪಕ್ಷಿ ಹಾರಿಹೋಗಿದ್ದ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆ ಇದೆ. ಹೀಗೆ ಬಲಿಗೆ ಬಿದ್ದ ವ್ಯಕ್ತಿಗೆ ಜೀವ ಹೋದ 11 ನೇ ದಿನಕ್ಕೆ ತಿಥಿ ಮಾಡಲಾಗುತ್ತದೆ ಹನ್ನೊಂದನೆ ದಿನಕ್ಕೆ ಕುರಿಯೊಂದನ್ನು ಬಲಿ ನೀಡಿ ಶಾಂತಿ ಮಾಡಲಾಗುತ್ತದೆ! ಅಂದಹಾಗೆ, ಹೀಗೆ ಸತ್ತು ಬದುಕಿದ ಗ್ರಾಮಸ್ಥನ ಹೆಸರು ಸೀಗೆ ನಾಯಕ.
ಈ ತಿಥಿ ಕಾರ್ಯದೊಂದಿಗೆ 25 ದಿನಗಳ ಕಾಲ ನಡೆದ ಸೀಗೆಮಾರಮ್ಮ ನರಬಲಿ ಹಬ್ಬ ಮುಕ್ತಾಯಗೊಂಡಿದೆ. ಹಬ್ಬ ನಡೆಯುವ 25 ದಿನಗಳ ಕಾಲ ಗ್ರಾಮದಲ್ಲಿ ಯಾರೂ ಮಾಂಸಾಹಾರ, ಮದ್ಯಪಾನ ಮಾಡುವಂತಿಲ್ಲ ಶುಭ ಸಮಾರಂಭಗಳನ್ನು ಮಾಡುವಂತಿಲ್ಲ ಮನೆಗಳಲ್ಲಿ ಅಡುಗೆಗೆ ಒಗ್ಗರಣೆಯನ್ನ ಸಹ ಹಾಕುವಂತಿಲ್ಲ. ಇದೀಗ ಈ ಎಲ್ಲಾ ಕಟ್ಟುಪಾಡುಗಳನ್ನು ತೆರವುಗೊಳಿಸಲಾಗಿದೆ. ಅಡುಗೆಗೆ ಒಗ್ಗರಣೆ ಹಾಕಲು, ಮನೆಗಳಲ್ಲಿ ಬಾಡೂಟ ಸೇವಿಸಲು, ಶುಭ ಸಮಾರಂಭಗಳನ್ನು ಮಾಡಲು ಇಂದಿನಿಂದ ಅವಕಾಶ ಸಿಗಲಿದೆ. ಈ ವಿಶಿಷ್ಟ ಹಾಗೂ ವಿಸ್ಮಯಕಾರಿ ಜಾತ್ರೆಯನ್ನು ಪಾಳ್ಯ ಗ್ರಾಮಸ್ಥರು ಈಗಲು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಒಟ್ಟಿನಲ್ಲಿ ವ್ಯಕ್ತಿ ಸತ್ತು ಬದುಕಲು ಸಾಧ್ಯವಾ? ಅನ್ನೋ ಕೌತುಕದ ನಡುವೆ ಬೆಳಗ್ಗೆ ಕಣ್ಣು ಬಿಡುವ ಮೂಲಕ ಸೀಗೆ ಮಾರಮ್ಮ ಎಲ್ಲರನ್ನೂ ನಿಬ್ಬೆರಾಗಿಸಿದ್ದಳು. ಇದೀಗ ಸತ್ತ ವ್ಯಕ್ತಿಗೆ ತಿಥಿ ಮಾಡಿ ತಮ್ಮ ನಂಬಿಕೆಯ ಆಚರಣೆ ಪೂರ್ಣಗೊಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:50 pm, Thu, 19 May 22