ಮೈಸೂರು ದಸರಾ: ಎರಡು ದಿನ ಹೊರತು ಪಡಿಸಿ 18 ದಿನ ರಜೆ, ಮಕ್ಕಳಿಗೆ ಹಬ್ಬವೋ ಹಬ್ಬ!
Dasara School Holiday: ಕರ್ನಾಟಕ ಶಿಕ್ಷಣ ಇಲಾಖೆ ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ 18 ದಿನ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಆ ಮೂಲಕ ಶಾಲಾ ಮಕ್ಕಳಿಗೆ ಭರ್ಜರಿ ರಜೆ ನೀಡಲಾಗಿದೆ. ಆದರೆ ಗಾಂಧಿ ಜಯಂತಿ ಮತ್ತು ಶಾಸ್ತ್ರಿ ಜಯಂತಿ ಆಚರಣೆಗೆ ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 19: ಮೈಸೂರು ವಿಶ್ವವಿಖ್ಯಾತ ದಸರಾಗೆ (Mysuru Dasara) ಸಜ್ಜಾಗಿದೆ. ಚಿನ್ನದ ಅಂಬಾರಿ ಹೊತ್ತು ಮೆರೆಯೋಕೆ ಗಜಪಡೆಯೂ ರೆಡಿಯಾಗಿದೆ. ಅರಮನೆಯಲ್ಲಿ ಖಾಸಗಿ ದರ್ಬಾರ್ಗೆ ಕೌಂಟ್ಡೌನ್ ಕೂಡ ಶುರುವಾಗಿದೆ. ಹೀಗಿರುವಾಗಲೇ ನಾಡಹಬ್ಬ ದಸರಾ ಮಹೋತ್ಸವವನ್ನು ಮಕ್ಕಳು ಸಹ ನೋಡಿ ಕಣ್ತುಂಬಿಕೊಳ್ಳಲಿ ಎಂದು ಶಿಕ್ಷಣ ಇಲಾಖೆ ನಾಳೆಯಿಂದ 18 ದಿನ ಸರ್ಕಾರಿ ಶಾಲೆಗಳಿಗೆ ಹಬ್ಬದ ರಜೆ (Holiday) ಘೋಷಣೆ ಮಾಡಿದೆ.
ಎರಡು ದಿನ ಹೊರತು ಪಡಿಸಿ 18 ದಿನ ರಜೆ
ಈ ಬಗ್ಗೆ ಶಿಕ್ಷಣ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದ್ದು, ನಾಳೆಯಿಂದ ಅಂದರೆ ಸೆ. 20 ರಿಂದ ಅಕ್ಟೋಬರ್ 7ರವರೆಗೆ ಸರ್ಕಾರಿ ಶಾಲೆಗಳಿಗೆ ಒಟ್ಟು 18 ದಿನ ಹಬ್ಬದ ರಜೆ ಘೋಷಿಸಿದೆ. ಆದರೆ ಕಡ್ಡಾಯವಾಗಿ ಅಕ್ಟೋಬರ್ 2ರಂದು ನಡೆಯಲಿರುವ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಗಜಪಡೆ ತಾಲೀಮು, ವಜ್ರಖಚಿತ ಸಿಂಹಾಸನ ಜೋಡಣೆ: ಇಲ್ಲಿವೆ ಮೈಸೂರು ದಸರಾ ಸಂಭ್ರಮದ ಚಿತ್ರಗಳು
ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ 18 ದಿನ ರಜೆ ನೀಡಲಾಗಿದೆ. ಆ ಮೂಲಕ ರಾಜ್ಯದ ಶಾಲಾ ಮಕ್ಕಳಿಗೆ ಈ ಬಾರಿ ಭರ್ಜರಿ ರಜೆ ನೀಡಲಾಗಿದೆ. ಈ ರಜೆ ಮಕ್ಕಳಲ್ಲಿ ಹಬ್ಬದ ಸಂಭ್ರಮ ದುಪ್ಪಟ್ಟು ಮಾಡಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಅಂದರೆ ಅದು ರಾಜ ಪರಂಪರೆ, ಗತಕಾಲದ ವೈಭವ. ಅಷ್ಟೇ ಅಲ್ಲ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಉತ್ಸವ. ಸೆಪ್ಟೆಂಬರ್ 22ರಂದು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಿಗೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಾಲನೆ ಸಿಗುತ್ತಿದೆ.
ಅಂದಿನಿಂದ ಅಕ್ಟೋಬರ್ 2ವರೆಗೆ ಅಂದರೆ 11 ದಿನಗಳ ಕಾಲ ದಸರಾ ಕಲರವ ಜೋರಾಗಿರಲಿದೆ. ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ.
ಇದನ್ನೂ ಓದಿ: ಮೈಸೂರು ದಸರಾ ಗೋಲ್ಡ್ ಕಾರ್ಡ್, ಟಿಕೆಟ್ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ ವಿವರ
ಇನ್ನು ಸರ್ಕಾರದಿಂದ 11 ದಿನಗಳ ದಸರಾ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಅಕ್ಟೋಬರ್ 2ರಂದು ಜಂಬೂ ಸವಾರಿ ಕಣ್ತುಂಬಿಕೊಳ್ಳಲು ನಾಡಿನ ಜನತೆ ಕಾತುರರಾಗಿ ಕಾಯುತ್ತಿದ್ದಾರೆ. ಅಂಬಾರಿ ಹೊರುವ ಅಭಿಮನ್ಯುಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







