
ಮೈಸೂರು, ಅಕ್ಟೋಬರ್ 22: ವಿಶ್ವವಿಖ್ಯಾತ ಮೈಸೂರು ದಸರಾ ಕನ್ನಡ ನಾಡಿನ ಹೆಮ್ಮೆ. ನಾಲ್ಕು ಶತಮಾನಗಳಿಗೂ ಮೀರಿದ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ರಾಜವೈಭವದಿಂದ ಪ್ರಜಾಪ್ರಭುತ್ವದ ಜನೋತ್ಸವದವರೆಗೆ ಬೆಳೆದು ಬಂದ ನಾಡಹಬ್ಬ, ಇಂತಹ ಮೈಸೂರು ದಸರಾ-2026 ಈ ಬಾರಿ ಹಲವು ಹೊಸತನದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಿ ಮೊದಲ ದಸರಾ. ಹೀಗಾಗಿ ಈ ಬಾರಿಯ ದಸರಾ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಆ ನಿರೀಕ್ಷೆಗಳ ನಡುವೆ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ನವನವೀನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಸರಾಕ್ಕೆ ಮತ್ತಷ್ಟು ಮೆರುಗು ನೀಡಲಾಯಿತು.
ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಆರಂಭವಾದ ದಸರಾ ಸಂಭ್ರಮ, ಅರಮನೆಯ ಅಂಗಳದಲ್ಲಿ ಜಂಬೂ ಸವಾರಿ, ನಗರದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ, ಕುಸ್ತಿ ಪಂದ್ಯಾವಳಿ, ಕರಾವಳಿಯ ಕಂಬಳ ಹಾಗೂ ಬನ್ನಿಮಂಟಪದ ಪಂಜಿನ ಕವಾಯತಿನವರೆಗೆ ವಿಸ್ತರಿಸಿತು. ದೇಶದ ವಿವಿಧ ಭಾಗಗಳ ಕಲಾವಿದರು, ಸೇನೆಯ ಬ್ಯಾಂಡ್ಗಳು, ಕನ್ನಡ ಚಿತ್ರರಂಗದ ತಾರೆಯರು, ಹೊರರಾಜ್ಯಗಳ ಸಾಂಸ್ಕೃತಿಕ ಸ್ತಬ್ಧಚಿತ್ರಗಳು ಹಾಗೂ ನೆರೆರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿ ಈ ಬಾರಿಯ ದಸರಾದ ವಿಶೇಷತೆಗಳನ್ನು ಹೆಚ್ಚಿಸಿತು.
ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ನಾಡಹಬ್ಬವನ್ನ ಉದ್ಘಾಟಿಸಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ‘ನಾಡಿನಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ, ಜನರ ಸುಖ-ಶಾಂತಿ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು’.
ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ‘ಮೈಸೂರು ದಸರಾ ಶಕ್ತಿ, ಅರಿವು, ಸಂಸ್ಕೃತಿ ಮತ್ತು ಸಮಾನತೆಯ ಸಂಗಮ’ ಎಂದು ಬಣ್ಣಿಸಿದ್ದರು. ‘ವಿಜಯನಗರದ ಅರಸರು ಆರಂಭಿಸಿದ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿ, ಕಲೆ ಮತ್ತು ಸಂಸ್ಕೃತಿಗೆ ವಿಶೇಷ ವೇದಿಕೆ ಕಲ್ಪಿಸಿದರು. ರಾಜಪ್ರಭುತ್ವದ ಕಾಲದಲ್ಲಿ ಅರಮನೆಯ ಅಂಗಳಕ್ಕೆ ಸೀಮಿತವಾಗಿದ್ದ ದಸರಾ ಇಂದು ಜನರ ಹಬ್ಬವಾಗಿ ಬೆಳೆದಿದೆ. ಮೈಸೂರು ರೇಷ್ಮೆ, ಶ್ರೀಗಂಧ, ಮೈಸೂರು ಪಾಕ್, ಸಂಗೀತ, ಚಿತ್ರಕಲೆ ಹಾಗೂ ಅರಮನೆಯ ಗತವೈಭವ ಜಗತ್ತಿನ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿವೆ. ಇಂತಹ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ದಸರಾ ಮಹೋತ್ಸವದ ಪ್ರಮುಖ ಉದ್ದೇಶವಾಗಿದೆ’ ಎಂದು ಹೇಳಿದ್ದರು.
ಇದನ್ನೂ ಓದಿ: ಜಂಬೂಸವಾರಿ ಯಶಸ್ವಿ: 18 ವರ್ಷ ಕಾದಿದ್ದಕ್ಕೆ ಸಿಕ್ತು ಫಲ, ಚಾಮುಂಡಿಯನ್ನು ಹೊತ್ತು ಮೆರೆಸಿದ ಪ್ರಶಾಂತ
ಈ ಬಾರಿಯ ದಸರಾ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ವೈವಿಧ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಕನ್ನಡ ನಾಡಿನ ಜನಪದ ಕಲಾಪ್ರಕಾರಗಳ ಜೊತೆಗೆ ಹೊರರಾಜ್ಯಗಳ ಸಾಂಸ್ಕೃತಿಕ ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳಿಗೂ ಅವಕಾಶ ಕಲ್ಪಿಸಲಾಯಿತು. ಒಂದೇ ರೀತಿಯ ಜನಪದ ವಾದ್ಯ ಮತ್ತು ನೃತ್ಯ ಪ್ರಕಾರಗಳ ಪುನರಾವರ್ತನೆಯನ್ನ ತಪ್ಪಿಸಿ, ವಿಭಿನ್ನ ಕಲಾಪ್ರಕಾರಗಳನ್ನು ಪರಿಚಯಿಸುವ ಪ್ರಯತ್ನ ನಡೆಯಿತು. ಡೊಳ್ಳು, ತಮಟೆ, ನಗಾರಿ, ವೀರಗಾಸೆ, ಕೋಲಾಟ ಸೇರಿದಂತೆ ನಾಡಿನ ಜನಪದ ಕಲಾಪ್ರಕಾರಗಳ ಜೊತೆಗೆ ಇತರ ರಾಜ್ಯಗಳ ಕಲಾವಿದರ ಪ್ರದರ್ಶನಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದವು.
ಈ ಬಾರಿ ಜಂಬೂಸವಾರಿಯಲ್ಲಿ ಕಾಣಿಸಿಕೊಂಡ ಮತ್ತೊಂದು ವಿಶೇಷವೆಂದರೆ ಮೂರು ಸೇನಾಪಡೆಗಳ ಬ್ಯಾಂಡ್ಗಳ ಪಾಲ್ಗೊಳ್ಳುವಿಕೆ. ದೇಶದ ಗಡಿಗಳನ್ನು ಕಾಯುವ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಬ್ಯಾಂಡ್ಗಳ ಸಂಗೀತ ಮೆರವಣಿಗೆಗೆ ಹೊಸ ಆಯಾಮ ನೀಡಿತು. ಸೇನೆಯ ಶಿಸ್ತು, ದೇಶಭಕ್ತಿಯ ಸಂಗೀತ ಹಾಗೂ ಯೋಧರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಜನರು ಉತ್ಸುಕರಾಗಿದ್ದರು. ನಾಡಿನ ಸಂಸ್ಕೃತಿಯ ಜೊತೆಗೆ ದೇಶದ ರಕ್ಷಣಾ ಪಡೆಗಳ ಶೌರ್ಯ ಮತ್ತು ದೇಶಭಕ್ತಿಯನ್ನು ಪ್ರತಿಬಿಂಬಿಸುವ ಈ ಪ್ರಯತ್ನ ದಸರಾಕ್ಕೆ ರಾಷ್ಟ್ರಮಟ್ಟದ ಮೆರುಗು ತಂದಿತು. ಮೂರು ಸೇನಾಪಡೆಗಳು ದಸರಾದಲ್ಲಿ ಭಾಗವಹಿಸಲು ಸಹಕರಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಧನ್ಯವಾದ ಸಲ್ಲಿಸಿದ್ದಾರೆ.
ಇದರ ಜೊತೆಗೆ ಕನ್ನಡ ಚಿತ್ರರಂಗದ ನಟ-ನಟಿಯರ ಮೆರವಣಿಗೆಯೂ ಜನರ ಗಮನ ಸೆಳೆಯಿತು. ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ಕಲಾವಿದರನ್ನು ನೋಡುತ್ತಿದ್ದ ಅಭಿಮಾನಿಗಳಿಗೆ ದಸರಾ ಮೆರವಣಿಗೆಯಲ್ಲಿ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಿತು. ಜನಪದ ಕಲಾವಿದರು, ವಿವಿಧ ರಾಜ್ಯಗಳ ಸಾಂಸ್ಕೃತಿಕ ತಂಡಗಳು, ಸೇನೆಯ ಬ್ಯಾಂಡ್ಗಳು ಮತ್ತು ಚಿತ್ರರಂಗದ ತಾರೆಯರ ಪಾಲ್ಗೊಳ್ಳುವಿಕೆ ಜಂಬೂ ಸವಾರಿಗೆ ವೈವಿಧ್ಯಮಯ ಸ್ವರೂಪ ನೀಡಿತು. ದಸರಾ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಸಾಂಸ್ಕೃತಿಕ ಮಹೋತ್ಸವ ಎಂಬುದನ್ನು ಈ ಕಾರ್ಯಕ್ರಮಗಳು ಮತ್ತೊಮ್ಮೆ ಸಾರಿದೆ.
ಈ ಬಾರಿಯ ದಸರಾ ಇತಿಹಾಸದಲ್ಲಿ ಗಮನ ಸೆಳೆದ ಮತ್ತೊಂದು ವಿಶೇಷವೆಂದರೆ ಕರಾವಳಿಯ ಕಂಬಳ ಸ್ಪರ್ಧೆ. ಕರಾವಳಿ ಕರ್ನಾಟಕದ ಮಣ್ಣಿನ ಸೊಗಡು, ಕೃಷಿ ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಬೆಸೆದುಕೊಂಡಿರುವ ಕಂಬಳವನ್ನು ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಆಯೋಜಿಸಲಾಯಿತು. ಸಿಎಂ ಡಿಕೆ ಶಿವಕುಮಾರ್ ಕಂಬಳ ಸ್ಪರ್ಧೆಗೆ ಚಾಲನೆ ನೀಡಿದರು. ತಾಯಿ ಚಾಮುಂಡೇಶ್ವರಿ ಹಾಗೂ ವೀರ ಗಂಗಾಧರ ಅಜ್ಜಯ್ಯನಿಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಸರಿನ ಅಂಗಳದಲ್ಲಿ ಜೋಡಿ ಕೋಣಗಳ ಓಟ, ಅವುಗಳನ್ನು ನಿಯಂತ್ರಿಸುವ ಓಟಗಾರರ ಚಾಕಚಕ್ಯತೆ ಹಾಗೂ ಪ್ರೇಕ್ಷಕರ ಸಂಭ್ರಮ ಕಂಬಳದ ಪ್ರಮುಖ ಆಕರ್ಷಣೆ. ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯನ್ನು ಮೈಸೂರಿನ ಜನರಿಗೆ ಪರಿಚಯಿಸುವ ಮೂಲಕ ಕರ್ನಾಟಕದ ವಿವಿಧ ಭಾಗಗಳ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ನಡೆಯಿತು. ಕರಾವಳಿಯ ಕಂಬಳಕ್ಕೆ ಮೈಸೂರಿನ ಸಾಂಸ್ಕೃತಿಕ ವೇದಿಕೆ ದೊರೆತಿದ್ದು, ಈ ಬಾರಿಯ ದಸರಾ ಕಾರ್ಯಕ್ರಮಗಳಲ್ಲಿನ ಪ್ರಮುಖ ಹೊಸತನಗಳಲ್ಲಿ ಒಂದಾಗಿದೆ.
ದಸರಾ ಎಂದರೆ ಕೇವಲ ಹಗಲಿನ ಮೆರವಣಿಗೆಯ ಸಂಭ್ರಮವಲ್ಲ. ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಅಷ್ಟೇ ಪ್ರಮುಖ. ಯುವ ದಸರಾ ಈ ಬಾರಿ ಯುವಜನರ ಗಮನ ಸೆಳೆಯಿತು. ಖ್ಯಾತ ಗಾಯಕ ಸಿದ್ ಶ್ರೀರಾಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಸಂಗೀತ ಪ್ರೇಮಿಗಳು ಸಾಕ್ಷಿಯಾದರು. ಜನಪ್ರಿಯ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಹಾಜರಾಗಿ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಿದರು. ಯುವಜನರ ಅಭಿರುಚಿಗೆ ತಕ್ಕಂತೆ ಸಂಗೀತ ಮತ್ತು ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಸರಾವನ್ನು ಹೊಸ ತಲೆಮಾರಿಗೆ ಮತ್ತಷ್ಟು ಹತ್ತಿರವಾಗಿಸುವ ಪ್ರಯತ್ನ ನಡೆಯಿತು.
ಮೈಸೂರು ಅರಮನೆಯ ಅಂಗಳದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳೂ ದಸರಾ ವೈಭವಕ್ಕೆ ಮೆರುಗು ನೀಡಿದವು. ಸಂಗೀತ, ಸಾಹಿತ್ಯ ಮತ್ತು ನೃತ್ಯ ಪ್ರದರ್ಶನಗಳ ಜೊತೆಗೆ ಹಿರಿಯ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಯಿತು. ಪ್ರೊ. ನಾಗಮಣಿ ಶ್ರೀನಾಥ್ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉರ್ದು ಕಾವ್ಯ ಸಂಜೆಯಂತಹ ಕಾರ್ಯಕ್ರಮಗಳು ಭಾಷೆ ಮತ್ತು ಸಾಹಿತ್ಯದ ಮೂಲಕ ಸಾಂಸ್ಕೃತಿಕ ಸಾಮರಸ್ಯದ ಸಂದೇಶ ಸಾರಿದವು. ಸಾಹಿತ್ಯ ಮನಸ್ಸುಗಳನ್ನು ಒಡೆಯುವುದಿಲ್ಲ, ಬದಲಿಗೆ ಬೆಸೆಯುತ್ತದೆ ಎಂಬ ಸಂದೇಶವೂ ಈ ಸಂದರ್ಭದಲ್ಲಿ ವ್ಯಕ್ತವಾಯಿತು. ನಾಡಿನ ಕಲಾವಿದರು ಮತ್ತು ಸಂಗೀತಗಾರರ ಪ್ರತಿಭೆಗೆ ದಸರಾ ವೇದಿಕೆಯಾಗಿರುವುದು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ಇನ್ನು ಕುಪ್ಪಣ್ಣ ಉದ್ಯಾನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವೂ ಜನರ ಆಕರ್ಷಣೆಯ ಕೇಂದ್ರವಾಯಿತು. ವಿವಿಧ ಬಗೆಯ ಹೂವುಗಳಿಂದ ರೂಪುಗೊಂಡ ಕಲಾಕೃತಿಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದವು. ಸಂವಿಧಾನದ ಪ್ರತಿಕೃತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ಹೂಗಳಿಂದ ನಿರ್ಮಿಸಲಾದ ವಿಧಾನಸೌಧದ ಕಲಾಕೃತಿ ಪ್ರದರ್ಶನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಯಿತು. ಪ್ರಕೃತಿಯ ಸೌಂದರ್ಯ, ಹೂವಿನ ಅಲಂಕಾರ ಹಾಗೂ ಸೃಜನಶೀಲ ಕಲಾಕೃತಿಗಳು ಪ್ರವಾಸಿಗರು ಮತ್ತು ಸಾರ್ವಜನಿಕರ ಗಮನ ಸೆಳೆದವು. ದಸರಾ ವಸ್ತುಪ್ರದರ್ಶನಕ್ಕೂ ಸಿಎಂ ಚಾಲನೆ ನೀಡಿದರು. ವಿವಿಧ ಮಳಿಗೆಗಳು, ವ್ಯಾಪಾರ ವಹಿವಾಟು ಮತ್ತು ಮನರಂಜನೆಯ ಅವಕಾಶಗಳೊಂದಿಗೆ ವಸ್ತುಪ್ರದರ್ಶನವು ಜನರ ದಸರಾ ಅನುಭವದ ಅವಿಭಾಜ್ಯ ಭಾಗವಾಯಿತು.
ಮತ್ತೊಂದೆಡೆ ದಸರಾ ಕುಸ್ತಿ ಪಂದ್ಯಾವಳಿ ನಡೆಯಿತು. ಕುಸ್ತಿ ಕಣಕ್ಕೆ ಪೂಜೆ ಸಲ್ಲಿಸಿದ ಸಿಎಂ, ಕುಸ್ತಿ ಪಟುಗಳ ಸೆಣಸಾಟವನ್ನು ವೀಕ್ಷಿಸಿದರು. ಹೀಗೆ ಫಲಪುಷ್ಪ ಪ್ರದರ್ಶನದಿಂದ ವಸ್ತುಪ್ರದರ್ಶನದವರೆಗೆ, ಕುಸ್ತಿ ಅಖಾಡದಿಂದ ಸಂಗೀತದ ವೇದಿಕೆಯವರೆಗೆ ದಸರಾ ನಗರವನ್ನೇ ಉತ್ಸವದ ತಾಣವನ್ನಾಗಿ ಪರಿವರ್ತಿಸಿತು.
ಮೈಸೂರು ದಸರಾ ಈ ಬಾರಿ ಕರ್ನಾಟಕದ ಗಡಿಗಳನ್ನು ದಾಟಿ ರಾಷ್ಟ್ರೀಯ ಗಮನ ಸೆಳೆದಿದ್ದಕ್ಕೂ ಮತ್ತೊಂದು ಕಾರಣವಿತ್ತು. ನೆರೆರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿ. ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜಂಬೂಸವಾರಿಯಲ್ಲಿ ಭಾಗವಹಿಸಿ ತಾಯಿ ಚಾಮುಂಡೇಶ್ವರಿಗೆ ಪುಷ್ಪನಮನ ಸಲ್ಲಿಸಿದರು. ಸಂಸದ ಹಾಗೂ ರಾಜಮನೆತನದ ಪ್ರತಿನಿಧಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿವಿಧ ರಾಜ್ಯಗಳ ಗಣ್ಯರ ಪಾಲ್ಗೊಳ್ಳುವಿಕೆ ದಸರಾವನ್ನು ಸಾಂಸ್ಕೃತಿಕ ಸಾಮರಸ್ಯದ ವೇದಿಕೆಯನ್ನಾಗಿ ರೂಪಿಸಿತು. ಕರ್ನಾಟಕ, ಕೇರಳ ಮತ್ತು ತೆಲಂಗಾಣದ ಜನರ ನಡುವೆ ಭಾಷೆ ಮತ್ತು ಸಂಸ್ಕೃತಿಯ ನಂಟು ಹಲವು ರೀತಿಯಲ್ಲಿ ಬೆಸೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ನೆರೆರಾಜ್ಯಗಳ ಮುಖ್ಯಮಂತ್ರಿಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ರಾಜ್ಯಗಳ ನಡುವಿನ ಸಾಂಸ್ಕೃತಿಕ ಸಂಬಂಧಕ್ಕೆ ಮಹತ್ವ ನೀಡಿತು.
ಹೊರರಾಜ್ಯಗಳ ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳ ಪಾಲ್ಗೊಳ್ಳುವಿಕೆ ಈ ಸಂದೇಶವನ್ನು ಮತ್ತಷ್ಟು ಬಲಪಡಿಸಿತು. ಮೈಸೂರು ದಸರಾ ಕೇವಲ ಮೈಸೂರಿನ ಉತ್ಸವವಲ್ಲ, ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮಹೋತ್ಸವ ಎಂಬುದಕ್ಕೆ ಈ ಕಾರ್ಯಕ್ರಮಗಳು ಸಾಕ್ಷಿಯಾಯಿತು.
ಈ ಬಾರಿಯ ದಸರಾ ಸಂಭ್ರಮದ ಮತ್ತೊಂದು ಪ್ರಮುಖ ಆಕರ್ಷಣೆ ಬನ್ನಿಮಂಟಪದ ಪಂಜಿನ ಕವಾಯತಿನ ಸಂದರ್ಭದಲ್ಲಿ ನಡೆದ ಡ್ರೋನ್ ಶೋ. ರಾತ್ರಿಯ ಕತ್ತಲಿನಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ ಡ್ರೋನ್ಗಳು ಪ್ರೇಕ್ಷಕರನ್ನು ಬೆರಗುಗೊಳಿಸಿದವು. ಆಕಾಶದಲ್ಲಿ ಮೂಡಿಬಂದ ವಿವಿಧ ಆಕೃತಿಗಳು ಮತ್ತು ಬೆಳಕಿನ ಸಂಯೋಜನೆ ತಂತ್ರಜ್ಞಾನ ಹಾಗೂ ಸೃಜನಶೀಲತೆಯ ಸಂಗಮವನ್ನು ತೋರಿಸಿದವು. ಡ್ರೋನ್ಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೃಹತ್ ಚಿತ್ತಾರ ಮೂಡಿಬಂದಾಗ ಜನರಿಂದ ಶಿಳ್ಳೆ ಮತ್ತು ಚಪ್ಪಾಳೆಗಳ ಸಂಭ್ರಮ ವ್ಯಕ್ತವಾಯಿತು. ಸ್ವತಃ ಮುಖ್ಯಮಂತ್ರಿಗಳೂ ಈ ಪ್ರದರ್ಶನವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
ದಸರಾ ಸಂದರ್ಭದಲ್ಲಿ ಮೈಸೂರಿನ ಪ್ರವಾಸೋದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳಿಗೂ ಹೊಸ ಚೈತನ್ಯ ದೊರೆಯಿತು. ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸಿ ಅರಮನೆ, ಚಾಮುಂಡಿ ಬೆಟ್ಟ ಹಾಗೂ ನಗರದ ಇತರ ಪ್ರವಾಸಿ ತಾಣಗಳನ್ನು ವೀಕ್ಷಿಸಿದರು. ದಸರಾ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಯುವಜನರು ಮೈಸೂರಿನ ವೈಭವವನ್ನು ಇನ್ನಷ್ಟು ಜನರಿಗೆ ಪರಿಚಯಿಸಿದರು. ಪ್ರವಾಸಿಗರ ಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ವಸತಿ ವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆಗೂ ಮಹತ್ವ ನೀಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ಭದ್ರತಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಂಡರು.
ಈ ಎಲ್ಲಾ ಕಾರ್ಯಕ್ರಮಗಳ ನಡುವೆ ದಸರಾ ನೀಡಿದ ಪ್ರಮುಖ ಸಂದೇಶವೆಂದರೆ ಪರಂಪರೆಯ ಉಳಿವು ಮತ್ತು ಹೊಸತನದ ಸ್ವೀಕಾರ. ವಿಜಯನಗರದ ಅರಸರು ಆರಂಭಿಸಿದ ಪರಂಪರೆ, ಮೈಸೂರು ಒಡೆಯರು ಬೆಳೆಸಿದ ಸಾಂಸ್ಕೃತಿಕ ವೈಭವ, ಪ್ರಜಾಪ್ರಭುತ್ವದ ಕಾಲದಲ್ಲಿ ಜನರ ಪಾಲ್ಗೊಳ್ಳುವಿಕೆಯಿಂದ ಮತ್ತಷ್ಟು ವಿಸ್ತಾರಗೊಂಡಿದೆ. ಇಂದು ದಸರಾ ಕೇವಲ ಅರಮನೆಯ ಉತ್ಸವವಲ್ಲ. ಕಲಾವಿದರಿಗೆ ವೇದಿಕೆ, ವ್ಯಾಪಾರಿಗಳಿಗೆ ಅವಕಾಶ, ಪ್ರವಾಸಿಗರಿಗೆ ಅನುಭವ, ಯುವಜನರಿಗೆ ಮನರಂಜನೆ ಹಾಗೂ ನಾಡಿನ ಜನರಿಗೆ ಹೆಮ್ಮೆಯ ಸಂಕೇತವಾಗಿದೆ.
ದಸರಾದ ನಿಜವಾದ ಯಶಸ್ಸು ಕೇವಲ ಕಾರ್ಯಕ್ರಮಗಳ ಸಂಖ್ಯೆಯಲ್ಲಿಲ್ಲ. ನಾಡಿನ ಪರಂಪರೆಯನ್ನು ಉಳಿಸುವುದು, ಕಲಾವಿದರನ್ನು ಗೌರವಿಸುವುದು, ವಿವಿಧ ಸಂಸ್ಕೃತಿಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಜನರಿಗೆ ಮರೆಯಲಾಗದ ಅನುಭವ ನೀಡುವುದರಲ್ಲಿದೆ. ಆ ದೃಷ್ಟಿಯಿಂದ ಮೈಸೂರು ದಸರಾ 2026 ಹಲವು ಹೊಸ ಪ್ರಯೋಗಗಳೊಂದಿಗೆ ಗಮನ ಸೆಳೆದಿದೆ.
ಇದನ್ನೂ ಓದಿ: ಮೈಸೂರು ದಸರಾ ಸಂಭ್ರಮ: ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜಂಬೂಸವಾರಿ ಕಣ್ತುಂಬಿಕೊಂಡ ಜನಸ್ತೋಮ
ಪರಂಪರೆಯ ವೈಭವ, ಆಧುನಿಕತೆಯ ಸ್ಪರ್ಶ, ಸಂಸ್ಕೃತಿಯ ಸಂಗಮ, ಸಾಮರಸ್ಯದ ಸಂದೇಶ ಮತ್ತು ಜನರ ಸಂಭ್ರಮ! ಹೀಗೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಮೊದಲ ದಸರಾ, ನವನವೀನ ಕಾರ್ಯಕ್ರಮಗಳ ಮೂಲಕ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅಂತಿಮವಾಗಿ ಮೈಸೂರು ದಸರಾ 2026 ಬರೀ ಉತ್ಸವವಲ್ಲ, ಕನ್ನಡಿಗರ ಹೆಮ್ಮೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬ, ನಾಡಿನ ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.