ಮೈಸೂರು ದಸರಾ 2026: ಕಳೆದ 6 ದಿನಗಳಲ್ಲಿ ವಲಸೆ ಕಾರ್ಮಿಕರ 30 ಮಕ್ಕಳ ರಕ್ಷಣೆ!
ಮೈಸೂರು ದಸರಾ ಮಹೋತ್ಸವದ ವೇಳೆಯಲ್ಲಿ ವಲಸೆ ಕುಟುಂಬಗಳ ಮಕ್ಕಳ ಮೇಲಿನ ಶೋಷಣೆ ಹಾಗೂ ನಿರ್ಲಕ್ಷ್ಯ ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿಶೇಷ ಕಾರ್ಯಾಚರಣೆಯಿಂದ ಕೇವಲ ಆರು ದಿನಗಳಲ್ಲಿ 30 ವಲಸೆ ಮಕ್ಕಳನ್ನು ರಕ್ಷಿಸಿ, ಆಶ್ರಯ ಕೇಂದ್ರಗಳಿಗೆ ಕಳುಹಿಸಲಾಗಿದೆ.

ಮುಖ್ಯಾಂಶಗಳು
- ಮೈಸೂರು ದಸರಾದಲ್ಲಿ ಕಳೆದ ಆರು ದಿನಗಳಲ್ಲಿ 30 ಮಕ್ಕಳ ರಕ್ಷಣೆ.
- ವಲಸೆ ಕುಟುಂಬಗಳ ಮಕ್ಕಳ ಶೋಷಣೆ ತಡೆಯಲು ವಿಶೇಷ ಕಾರ್ಯಾಚರಣೆ ತೀವ್ರ.
- ರಕ್ಷಿಸಲ್ಪಟ್ಟ ಮಕ್ಕಳಿಗೆ ಸುರಕ್ಷಿತ ಆಶ್ರಯ ಹಾಗೂ ಮೂಲಭೂತ ಸೌಕರ್ಯ ವ್ಯವಸ್ಥೆ.
ಮೈಸೂರು, ಅಕ್ಟೋಬರ್ 19: ಕಳೆದ ವರ್ಷದ ಮೈಸೂರು ದಸರಾ ಮಹೋತ್ಸವದ ವೇಳೆ ನಡೆದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದ ಪಾಠ ಕಲಿತಿರುವ ಜಿಲ್ಲಾಳಿತ ಹಾಗೂ ಪೊಲೀಸ್ ಇಲಾಖೆಯು ಈ ಬಾರಿ ಎಚ್ಚೆತ್ತುಕೊಂಡಿದೆ. ದಸರಾ ಉತ್ಸವದ ಸಂದರ್ಭದಲ್ಲಿ ನಗರಕ್ಕೆ ವಲಸೆ ಬರುವ ಕುಟುಂಬಗಳ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗಾಗಿ ವಿಶೇಷ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಕೇವಲ ಆರು ದಿನಗಳಲ್ಲಿ ಬಲವಂತದ ದುಡಿಮೆ ಹಾಗೂ ಇತರೆ ಸಂಕಷ್ಟಗಳಿಂದ 30 ಮಕ್ಕಳನ್ನು ರಕ್ಷಿಸಲಾಗಿದೆ.
ಕರ್ನಾಟಕ ಸೇರಿ ಹೊರರಾಜ್ಯಗಳಿಂದ ಬರುವ ಮಕ್ಕಳ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ
ದಸರಾ ಉತ್ಸವದ ಸಮಯದಲ್ಲಿ ಬಲೂನ್, ಆಟಿಕೆಗಳು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಲು ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ಬೀದರ್ ಮತ್ತು ವಿಜಯಪುರ ಸೇರಿದಂತೆ ರಾಜಸ್ಥಾನ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳಿಂದ ನೂರಾರು ವಲಸೆ ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಮೈಸೂರಿಗೆ ಆಗಮಿಸುತ್ತವೆ. ಇಂತಹ ಮಕ್ಕಳ ಮೇಲೆ ನಡೆಯಬಹುದಾದ ಶೋಷಣೆ, ದೌರ್ಜನ್ಯ ಹಾಗೂ ನಿರ್ಲಕ್ಷ್ಯವನ್ನು ತಡೆಯುವ ಉದ್ದೇಶದಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.
ರಕ್ಷಿಸಲಾದ ಮಕ್ಕಳ ಆರೈಕೆ
ರಕ್ಷಿಸಲಾದ ಮಕ್ಕಳನ್ನು ಸುರಕ್ಷಿತ ಆಶ್ರಯ ಕೇಂದ್ರಗಳಿಗೆ ದಾಖಲಿಸಿ, ಅವರ ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಮಕ್ಕಳ ರಕ್ಷಣೆಗಾಗಿ ಜಿಲ್ಲಾಡಳಿತ ಕೈಗೊಂಡಿರುವ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಉತ್ಸವ ಮುಗಿಯುವವರೆಗೆ ಈ ವಿಶೇಷ ನಿಗಾ ಹಾಗೂ ರಕ್ಷಣಾ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




