ಹಲವು ಮೊದಲುಗಳಿಗೆ ಸಾಕ್ಷಿಯಾದ ವಿಶ್ವವಿಖ್ಯಾತ ಮೈಸೂರು ದಸರಾ 2026: ಇಲ್ಲಿದೆ ಸಂಪೂರ್ಣ ಮಾಹಿತಿ
Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ 2026 ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಸಿಎಂ ಆದ ಬಳಿಕೆ ಡಿಕೆ ಶಿವಕುಮಾರ್ ಅವರಿಗೆ ಇದು ಪ್ರಥಮ ದಸರಾವಾಗಿದ್ದರೆ, ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರಿಗೂ ಕೂಡ ಇದು ಹೊಸತು. ಮತ್ತೊಂದೆಡೆ ಭದ್ರತೆ ಹಾಗೂ ಸಮಯದ ಅಭಾವದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಸಾಂಪ್ರದಾಯಿಕ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ.

ಮುಖ್ಯಾಂಶಗಳು
- ಹಲವು ಮೊದಲುಗಳಿಗೆ ಸಾಕ್ಷಿಯಾದ ವಿಶ್ವವಿಖ್ಯಾತ ಮೈಸೂರು ದಸರಾ 2026
- ಸಿಎಂ ಆದ ನಂತರ ಡಿಕೆಶಿ ಮತ್ತು ರಾಜ್ಯಪಾಲೆ ಡಾ. ಸುಧಾ ಯಾದವ್ಗೆ ಇದು ಮೊದಲ ದಸರಾ
- ಪ್ರಥಮಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತಿರುವ ಆನೆ ಪ್ರಶಾಂತ
ಮೈಸೂರು, ಅಕ್ಟೋಬರ್ 21: ವಿಶ್ವವಿಖ್ಯಾತ ಮೈಸೂರು ದಸರಾ 2026 ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಸಿಎಂ ಆದನಂತರ ಡಿಕೆ ಶಿವಕುಮಾರ್ ಮತ್ತು ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರಿಗೆ ಇದು ಮೊದಲ ದಸರಾವಾಗಿದ್ದರೆ, 18 ಬಾರಿ ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಪ್ರಶಾಂತ ಆನೆಗೆ ಪ್ರಥಮ ಬಾರಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಸಿಕ್ಕಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಯತೀಂದ್ರ ಸಿದ್ದರಾಮಯ್ಯನವರಿಗೂ ಇದು ಪ್ರಥಮ ದಸರಾ ಎನ್ನುವುದು ಕೂಡ ಇಲ್ಲಿ ಗಮನಾರ್ಹ.
ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜೂನ್ 3, 2026 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗಾಗಿ ಅವರ ನೇತೃತ್ವದ ಸರ್ಕಾರದಿಂದ ಮೊದಲ ಬಾರಿಗೆ ದಸರಾ ಕಾರ್ಯಕ್ರಮಗಳು ಸಂಪನ್ನಗೊಂಡಿವೆ. ಹಾಗೆಯೇ ಕರ್ನಾಟಕದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಕೂಡ ಅಕ್ಟೋಬರ್ 16, 2026ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಹೀಗಾಗಿ ಅಧಿಕಾರ ಸ್ವೀಕರಿಸಿದ ಕೆಲ ದಿನಗಳಲ್ಲಿಯೇ ಮೈಸೂರು ದಸರಾ ಕಣ್ತುಂಬಿಕೊಳ್ಳುವ ಅವಕಾಶ ಮೊದಲ ಬಾರಿಗೆ ಅವರಿಗೆ ದೊರೆತಿದೆ. ಸರ್ಕಾರದ ಹಲವು ಸಚಿವರಿಗಿಗೂ ಇದು ಮೊದಲ ದಸರಾವಾಗಿದೆ.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
ಸಾಂಪ್ರದಾಯಿಕ ಜಟ್ಟಿ ಕಾಳಗ ಇದೇ ಮೊದಲ ಬಾರಿಗೆ ರದ್ದು!
ಇತಿಹಾಸದಲ್ಲೇ ಮೊದಲ ಬಾರಿಗೆ ಸಾಂಪ್ರದಾಯಿಕ ಜಟ್ಟಿ ಕಾಳಗವನ್ನು ಈ ಬಾರಿ ರದ್ದುಗೊಳಿಸಲಾಗಿದೆ. ದಸರಾ ಆಚರಣೆಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಜಟ್ಟಿ ಕಾಳಗಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದರೂ, ಅಂತಿಮ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದೆ. ನೂಕುನುಗ್ಗಲು ಮತ್ತು ವಿಜಯದಶಮಿ ಮೆರವಣಿಗೆಯ ಮುಹೂರ್ತ ಮೀರುವ ಆತಂಕದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಜಟ್ಟಿ ಕಾಳಗವು ಕೇವಲ ಒಂದು ಸೆಣಸಾಟವಾಗಿರದೆ, ಯದುವಂಶದ ರಾಜನಿಷ್ಠೆ ಮತ್ತು ಶ್ರೇಯಸ್ಸನ್ನು ಬಯಸಿ ನಡೆಸುವ ಒಂದು ಸಾಂಕೇತಿಕ ಆಚರಣೆಯಾಗಿದೆ. ಹೀಗಿದ್ದರೂ ಕಾರ್ಯಕ್ರಮವನ್ನು ರದ್ದುಗೊಳಿಸಿರೋದು ಜಟ್ಟಿಗಳು ಮತ್ತು ಪ್ರೇಕ್ಷಕರ ಭಾರೀ ನಿರಾಸೆಗೆ ಕಾರಣವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:10 pm, Wed, 21 October 26
