ಆರೋಗ್ಯ ಕೇಂದ್ರಕ್ಕೆ ಕಟ್ಟಡವೇ ಇಲ್ಲ! ಹಾಲಿನ ಡೇರಿಯಲ್ಲೇ ಚಿಕಿತ್ಸೆ..ಇದು ಗ್ರಾಮ ಪಂಚಾಯತ್​ ರಾಜಕೀಯ

ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆಂದು, ಆರೋಗ್ಯ ಇಲಾಖೆ 30 ಲಕ್ಷ ರೂ.ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ.. ಆದರೆ ಪಂಚಾಯತ್​ನವರು ಹೊಸ ಕಟ್ಟಡಕ್ಕೆ ಜಾಗ ಕೊಡದೆ ಇರುವುದೇ ಈ ಸಮಸ್ಯೆಗೆ ಮುಖ್ಯ ಕಾರಣ.

ಆರೋಗ್ಯ ಕೇಂದ್ರಕ್ಕೆ ಕಟ್ಟಡವೇ ಇಲ್ಲ! ಹಾಲಿನ ಡೇರಿಯಲ್ಲೇ ಚಿಕಿತ್ಸೆ..ಇದು ಗ್ರಾಮ ಪಂಚಾಯತ್​ ರಾಜಕೀಯ
ಹಾಲಿನ ಡೇರಿಯಲ್ಲಿ ರೋಗಿಗಳ ತಪಾಸಣೆ ಮಾಡುತ್ತಿರುವ ವೈದ್ಯರು
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Jan 06, 2021 | 11:50 AM

ಬೀದರ್​: ಗ್ರಾಮೀಣ ಜನರಿಗೆ ಅನುಕೂಲವಾಗಲಿ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗಲಿ ಎಂಬ ಕಾರಣಕ್ಕೆ ಔರಾದ್ (ಎಸ್) ಗ್ರಾಮದಲ್ಲಿ 5 ವರ್ಷಗಳ ಹಿಂದೆ ಉಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿಗೆ ವೈದ್ಯ, ನರ್ಸ್​ ಸೇರಿ ಒಟ್ಟು ನಾಲ್ವರು ಸಿಬ್ಬಂದಿಯನ್ನು ನೇಮಕ ಮಾಡಿ, ತಿಂಗಳಿಗೆ ಲಕ್ಷಾಂತರ ರೂ. ಸಂಬಳವನ್ನೂ ಕೊಡಲಾಗುತ್ತಿದೆ.. ಆದರೆ ಆಸ್ಪತ್ರೆಗೆ ಸರಿಯಾದ ಕಟ್ಟಡವೂ ಇಲ್ಲ, ಮೂಲ ಸೌಕರ್ಯವೂ ಇಲ್ಲ..

ಆಸ್ಪತ್ರೆಗೆ ಒಂದು ಕಟ್ಟಡವಿಲ್ಲದ ಕಾರಣ ಹಾಲು ಉತ್ಪಾದಕರ ಸಹಕಾರಿ ಸಂಘದ ಪಡಸಾಲೆಯಲ್ಲಿ ಆಸ್ಪತ್ರೆ ನಡೆಸುವಂತಾಗಿದ್ದು, ಇದರಿಂದ ರೋಗಿಗಳಿಗೆ ತುಂಬ ಸಮಸ್ಯೆಯಾಗುತ್ತಿದೆ. ಅಷ್ಟೇ ಅಲ್ಲ, ಚಿಕಿತ್ಸೆ ನೀಡುವ ವೈದ್ಯರು, ನರ್ಸ್​ಗಳಿಗೂ ಅನನುಕೂಲವಾಗುತ್ತಿದೆ.

ಹಾಲು ಹಾಕಲು ಬರುವವರಿಗೂ ಕಷ್ಟ ಆಸ್ಪತ್ರೆಗೆ ನೇಮಕ ಮಾಡಲಾದ ವೈದ್ಯರಿಗೆ ಆರೋಗ್ಯ ಇಲಾಖೆ ಸರಿಯಾಗಿ ಸಂಬಳ ನೀಡುತ್ತಿದೆ. ಅದಕ್ಕೆ ತಕ್ಕಂತೆ ಅವರೂ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಯ ಕಟ್ಟಡ, ಮೂಲಸೌಕರ್ಯ ಇಲ್ಲದಿದ್ದರೂ, ಹಾಲು ಉತ್ಪಾದಕರ ಸಹಕಾರಿ ಸಂಘದ ಒಂದು ಸಣ್ಣ ಹಾಲ್​ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಆದರೆ ಮುಂಜಾನೆ ಮತ್ತು ಸಂಜೆ ಹೊತ್ತಲ್ಲಿ ರೈತರು ಹಾಲು ಹಾಕಲು ಇಲ್ಲಿಗೇ ಬರುವುದರಿಂದ ತುಂಬ ಅಡಚಣೆ ಉಂಟಾಗುತ್ತಿದೆ. ಗ್ರಾಮದ ಜನರು ಹಾಲು ಹಾಕಲು ಡೇರಿಗೆ ಬಂದ ಹೊತ್ತಲ್ಲಿ, ರೋಗಿಗಳು, ವೈದ್ಯರು ಸುಮ್ಮನೆ ಕುಳಿತುಕೊಳ್ಳಬೇಕು. ಅವರು ಎಲ್ಲರೂ ಹೋದ ನಂತರವೇ ಮತ್ತೆ ತಪಾಸಣೆ, ಚಿಕಿತ್ಸೆ ಶುರು ಮಾಡಬೇಕಾದಂತಹ ಪರಿಸ್ಥಿತಿ ಇದೆ. ಹಾಗೇ, ಹಾಲು ಹಾಕಲು ಬರುವ ರೈತರಿಗೂ ಕಷ್ಟವಾಗುತ್ತಿದೆ.

ಕಟ್ಟಡಕ್ಕೆ 30 ಲಕ್ಷ ರೂ.ಮಂಜೂರು ಔರಾದ್ (ಎಸ್) ಗ್ರಾಮ ಪಂಚಾಯತ್​ನಲ್ಲಿ 17 ಸದಸ್ಯರಿದ್ದಾರೆ. ಇದು ಜಿಲ್ಲಾ ಪಂಚಾಯಿತಿ ಕ್ಷೇತ್ರವೂ ಹೌದು. ಹೀಗಾಗಿ 2015ರಲ್ಲೇ ಇಲ್ಲಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿದೆ. ಈ ಆರೋಗ್ಯ ಕೇಂದ್ರಕ್ಕೆ ಔರಾದ್ (ಎಸ್), ಭೈರನಹಳ್ಳಿ ಗ್ರಾಮ ಮತ್ತು ಔರಾದ್ (ಎಸ್) ತಾಂಡಾ ಗ್ರಾಮದ ಜನರು ಚಿಕಿತ್ಸೆಗಾಗಿ ಬರುತ್ತಾರೆ.

ಆರೋಗ್ಯ ಕೇಂದ್ರಕ್ಕಾಗಿ ಸರ್ಕಾರದಿಂದ ವಿವಿಧ ಉಪಕರಣಗಳು, ಔಷಧಿಗಳನ್ನು ನೀಡಲಾಗಿದ್ದರೂ, ಅವುಗಳನ್ನೆಲ್ಲ ಸರಿಯಾಗಿ ಇಡಲು ಜಾಗವೂ ಇಲ್ಲ. ಇಲ್ಲಿ ಆಸ್ಪತ್ರೆ ಇದ್ದರೂ, ಗರ್ಭಿಣಿಯರು ಹೆರಿಗಾಗಿ ಬೀದರ್​ಗೇ ಹೋಗುವ ಪರಿಸ್ಥಿತಿ ಇದೆ. ಇನ್ನು ಮಕ್ಕಳಿಗೆ ಕೊಡುವ ಲಸಿಕೆಗಳ ಸಂರಕ್ಷಣೆಯ ಸ್ಥಳವೂ ಇಲ್ಲದಂತಾಗಿದೆ.

ಹಾಗೇ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆಂದು, ಆರೋಗ್ಯ ಇಲಾಖೆ 30 ಲಕ್ಷ ರೂ.ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ.. ಆದರೆ ಪಂಚಾಯತ್​ನವರು ಹೊಸ ಕಟ್ಟಡಕ್ಕೆ ಜಾಗ ಕೊಡದೆ ಇರುವುದೇ ಈ ಸಮಸ್ಯೆಗೆ ಮುಖ್ಯ ಕಾರಣ.

ಇನ್ನು ಜಿಲ್ಲೆಯಲ್ಲಿ ಅದೆಷ್ಟೋ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಟ್ಟಡಗಳಿದ್ದರೂ, ಅಲ್ಲಿ ವೈದ್ಯರ ಕೊರತೆ ಇದೆ. ಆದರೆ ಇಲ್ಲಿ ವೈದ್ಯರು, ಸಿಬ್ಬಂದಿಯ ಕೊರತೆ ಇಲ್ಲದಿದ್ದರೂ ಕಟ್ಟಡವೇ ಇಲ್ಲ ಎಂದು ಸ್ಥಳೀಯರು ಅಲವತ್ತುಕೊಳ್ಳುತ್ತಿದ್ದಾರೆ.

ಏನಂತಾರೆ ಗ್ರಾಮಸ್ಥರು? 5ವರ್ಷಗಳಿಂದಲೂ ಒಂದು ಚಿಕ್ಕ ಕೋಣೆಯಲ್ಲಿ ಆಸ್ಪತ್ರೆ ನಡೆಸಲಾಗುತ್ತಿದೆ. ಸಂಜೆ ಮತ್ತು ಮುಂಜಾನೆ ರೈತರು ಹಾಲು ಹಾಕಲು ಡೇರಿಗೆ ಬರುತ್ತಾರೆ. ಆ ಹೊತ್ತಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುವುದನ್ನು ಬಂದ್ ಮಾಡಲಾಗುತ್ತದೆ. ಆದಷ್ಟು ಬೇಗ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕಾಗಿ ಒಂದು ಜಾಗ ಕೊಟ್ಟು ರೋಗಿಗಳಿಗೆ, ವೈದ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥ ಸಂಗಾರೆಡ್ಡಿ ಔರಾದ್ (ಎಸ್) ಮನವಿ ಮಾಡಿದ್ದಾರೆ.

ತುಂಬಾ ಸಮಸ್ಯೆ ಆರೋಗ್ಯ ಇಲಾಖೆಯಿಂದ ಕಟ್ಟಡಕ್ಕಾಗಿ 30 ಲಕ್ಷ ರೂಪಾಯಿ ಮಂಜೂರಾಗಿದೆ. ಆದರೆ ಜಾಗವೇ ಇಲ್ಲ. 5ವರ್ಷಗಳಿಂದಲೂ ತೊಂದರೆ ಅನುಭವಿಸುತ್ತಿದ್ದೇವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ತುಂಬ ಅನುನುಕೂಲವಾಗುತ್ತಿದೆ ಎನ್ನುತ್ತಾರೆ ಉಪಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಶ್ರೀಮಂತ್​.