ಎರಡು ತಿಂಗಳಲ್ಲಿ 18 ಲಕ್ಷ ಕೆಜಿಗೂ ಹೆಚ್ಚು ಅಕ್ಕಿ ಸೀಜ್: ಕಳ್ಳಸಾಗಣೆ, ಅಕ್ರಮ ಸಂಗ್ರಹಣೆ ವಿರುದ್ಧ ಆಹಾರ ಇಲಾಖೆ ಕಠಿಣ ಕ್ರಮ

ರಾಜ್ಯದಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ವಿರುದ್ಧ ಆಹಾರ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಕಳೆದ ಎರಡು ತಿಂಗಳಲ್ಲಿ 18 ಲಕ್ಷ ಕೆಜಿಗೂ ಹೆಚ್ಚು ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಅಕ್ರಮ ಸಂಗ್ರಹಣೆ ಮಾಡಿ ದುಬಾರಿ ದರಕ್ಕೆ ಮಾರಾಟ ಮಾಡುವವರ ವಿರುದ್ಧವೂ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಎರಡು ತಿಂಗಳಲ್ಲಿ 18 ಲಕ್ಷ ಕೆಜಿಗೂ ಹೆಚ್ಚು ಅಕ್ಕಿ ಸೀಜ್: ಕಳ್ಳಸಾಗಣೆ, ಅಕ್ರಮ ಸಂಗ್ರಹಣೆ ವಿರುದ್ಧ ಆಹಾರ ಇಲಾಖೆ ಕಠಿಣ ಕ್ರಮ
ಸಾಂದರ್ಭಿಕ ಚಿತ್ರ
Edited By:

Updated on: Nov 04, 2026 | 8:05 AM

ಮುಖ್ಯಾಂಶಗಳು

  • ಎರಡು ತಿಂಗಳಲ್ಲಿ 18 ಲಕ್ಷ ಕೆಜಿ ಅಕ್ಕಿ ಸೀಜ್
  • 250ಕ್ಕೂ ಹೆಚ್ಚು ಟ್ರಕ್‌ಗಳ ವಿರುದ್ಧ ಕಾರ್ಯಾಚರಣೆ
  • ಅಕ್ಕಿ ಅಕ್ರಮ ಸಂಗ್ರಹದ ವಿರುದ್ಧ ಕ್ರಮದ ಎಚ್ಚರಿಕೆ

ಬೆಂಗಳೂರು, ನವೆಂಬರ್ 4: ರಾಜ್ಯದಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ಮತ್ತು ಅಕ್ರಮ ಅಕ್ಕಿ ಸಂಗ್ರಹಣೆ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಕಳೆದ ಎರಡು ತಿಂಗಳಲ್ಲಿ 18 ಲಕ್ಷ ಕೆಜಿಗೂ ಹೆಚ್ಚು ಅಕ್ಕಿಯನ್ನು ವಶಪಡಿಸಿಕೊಂಡಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಈ ಅವಧಿಯಲ್ಲಿ 250ಕ್ಕೂ ಹೆಚ್ಚು ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, 232ಕ್ಕೂ ಹೆಚ್ಚು ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ‘ಟಿವಿ9’ ಜತೆ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್, ಪಡಿತರ ಅಕ್ಕಿ ಕಳ್ಳಸಾಗಣೆ ಮಾಡುವವರ ಮೇಲೆ ಇಲಾಖೆ ನಿರಂತರ ನಿಗಾ ಇರಿಸಿದ್ದು, ಮುಂದೆಯೂ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ಕಿ ಸಂಗ್ರಹಿಸಿ ದುಬಾರಿ ದರಕ್ಕೆ ಮಾರಾಟ ಮಾಡಿದರೆ ದಾಳಿ

ರಾಜ್ಯದಲ್ಲಿ ಮಳೆಯ ಕೊರತೆ ಮತ್ತು ಬರದ ಪರಿಸ್ಥಿತಿಯಿಂದ ಅಕ್ಕಿ ಉತ್ಪಾದನೆ ಕಡಿಮೆಯಾಗಿರುವುದು ನಿಜ ಎಂದು ಸಚಿವರು ತಿಳಿಸಿದ್ದಾರೆ. ದೇಶದಾದ್ಯಂತ ಮಳೆಯ ಕೊರತೆ ಉಂಟಾಗಿದ್ದು, ಕರ್ನಾಟಕದಲ್ಲಿ ಸುಮಾರು ಶೇ 40ರಷ್ಟು ಮಳೆ ಕೊರತೆಯಾಗಿದೆ ಎಂದರು. ಅಕ್ಕಿ ಉತ್ಪಾದನೆ ಕಡಿಮೆಯಾದರೆ ಬೆಲೆ ಏರಿಕೆಯಾಗುವುದು ಸಹಜ. ಆದರೆ ಇದೇ ಪರಿಸ್ಥಿತಿಯನ್ನು ಬಳಸಿಕೊಂಡು ಕೆಲವರು ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಯತ್ನ ನಡೆಸುತ್ತಿರುವ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.

ಖಾಸಗಿ ಅಕ್ಕಿ ವ್ಯಾಪಾರಿಗಳು ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ದುಬಾರಿ ದರಕ್ಕೆ ಮಾರಾಟ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ವ್ಯಾಪಾರಿಗಳ ಮೇಲೂ ಹದ್ದಿನ ಕಣ್ಣು

ಪಡಿತರ ಅಕ್ಕಿ ಕಳ್ಳಸಾಗಣೆಯ ವಿರುದ್ಧ ಮಾತ್ರವಲ್ಲದೆ, ಸಾಮಾನ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಕ್ಕಿ ಸಂಗ್ರಹಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುವುದನ್ನು ಇಲಾಖೆ ಸಹಿಸುವುದಿಲ್ಲ. ಎಲ್ಲೆಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಲಾಗುತ್ತಿದೆ ಎಂಬುದರ ಮೇಲೆ ಅಧಿಕಾರಿಗಳು ನಿಗಾ ಇರಿಸಲಿದ್ದು, ಅಗತ್ಯವಿರುವ ಕಡೆ ದಾಳಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಅಕ್ಕಿ ಬೆಲೆ ಭಾರಿ ಏರಿಕೆ: ನಾಲ್ಕು ತಿಂಗಳಲ್ಲಿ ಶೇ 30 ರಷ್ಟು ಹೆಚ್ಚಳ, ಸೋನಾ ಮಸೂರಿ ₹20 ದುಬಾರಿ

ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಎಚ್ಚರಿಕೆಯಿಂದ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಬರದಿಂದ ಅಕ್ಕಿ ಉತ್ಪಾದನೆಯ ಮೇಲೆ ಉಂಟಾಗಿರುವ ಪರಿಣಾಮದ ಕುರಿತು ಕೇಂದ್ರ ಸರ್ಕಾರದೊಂದಿಗೂ ಸಂಪರ್ಕದಲ್ಲಿದ್ದು, ಸಾಧ್ಯವಿರುವ ನೆರವಿನ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
Loading...
Unable to load recommendations.
Follow Us