ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಸಾಧ್ಯವಾಗದೇ ಜನರ ಪರದಾಟ: ಕೇಂದ್ರಕ್ಕೆ ಸಚಿವ ರಿಜ್ವಾನ್ ಪತ್ರ
ಕರ್ನಾಟಕದಲ್ಲಿ ಹೊಸ ಗೃಹಬಳಕೆ ಎಲ್‌ಪಿಜಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ 36 ಸಾವಿರಕ್ಕೂ ಹೆಚ್ಚು ಗ್ರಾಹಕರು ಇನ್ನೂ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲೇ 11 ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಸಚಿವ ರಿಜ್ವಾನ್ ಅರ್ಷದ್ ಕೇಂದ್ರಕ್ಕೆ ಪತ್ರ ಬರೆದು, ಹೊಸ ಸಂಪರ್ಕದ ಅರ್ಜಿಗಳನ್ನು ತ್ವರಿತವಾಗಿ ಅನುಮೋದಿಸುವಂತೆ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು
- ರಾಜ್ಯದಲ್ಲಿ 36 ಸಾವಿರಕ್ಕೂ ಹೆಚ್ಚು ಎಲ್‌ಪಿಜಿ ಅರ್ಜಿಗಳು ಬಾಕಿ
- ಬೆಂಗಳೂರಿನಲ್ಲೇ 11 ಸಾವಿರಕ್ಕೂ ಹೆಚ್ಚು ಅರ್ಜಿ ಬಾಕಿ
- ಹೊಸ ಸಂಪರ್ಕಕ್ಕೆ ಕೇಂದ್ರದ ಅನುಮೋದನೆ ಕೋರಿ ಸಚಿವರ ಪತ್ರ
ಬೆಂಗಳೂರು, ಅಕ್ಟೋಬರ್ 20: ಇಸ್ರೇಲ್–ಇರಾನ್ ಸಂಘರ್ಷದ ಪರಿಣಾಮ ರಾಜ್ಯದಲ್ಲಿ ತಲೆದೋರಿದ್ದ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವದ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಬಗೆಹರಿದಂತೆ ಕಾಣಿಸುತ್ತಿಲ್ಲ. ಹೊಸ ಗೃಹಬಳಕೆ ಎಲ್‌ಪಿಜಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿರುವ 36 ಸಾವಿರಕ್ಕೂ ಹೆಚ್ಚು ಗ್ರಾಹಕರು ಇನ್ನೂ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಹೊಸ ಎಲ್‌ಪಿಜಿ ಸಂಪರ್ಕಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ತಕ್ಷಣ ಅನುಮೋದಿಸುವಂತೆ ಮನವಿ ಮಾಡಿದ್ದಾರೆ.
ಹೊಸ ಎಲ್‌ಪಿಜಿ ಸಂಪರ್ಕಕ್ಕಾಗಿ ಗ್ರಾಹಕರ ಪರದಾಟ
ಪಶ್ಚಿಮ ಏಷ್ಯಾದಲ್ಲಿ ನಡೆದ ಯುದ್ಧದ ಪರಿಣಾಮ ಇಂಧನ ಪೂರೈಕೆಯ ಮೇಲೆ ಒತ್ತಡ ಉಂಟಾಗಿ ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಎದುರಾಗಿತ್ತು. ಆದರೆ, ಸಂಘರ್ಷದ ತೀವ್ರತೆ ಕಡಿಮೆಯಾದ ಬಳಿಕವೂ ಹೊಸ ಗೃಹಬಳಕೆ ಎಲ್‌ಪಿಜಿ ಸಂಪರ್ಕಕ್ಕಾಗಿ ಕಾಯುತ್ತಿರುವ ಗ್ರಾಹಕರ ಸಮಸ್ಯೆ ಮುಂದುವರಿದಿದೆ.
ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ರಿಜ್ವಾನ್ ಅರ್ಷದ್ ಪತ್ರ
ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಳ, ನಗರೀಕರಣ, ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಹೊಸ ವಸತಿ ಪ್ರದೇಶಗಳು ನಿರ್ಮಾಣವಾಗುತ್ತಿರುವುದರಿಂದ ಎಲ್‌ಪಿಜಿ ಸಂಪರ್ಕದ ಬೇಡಿಕೆ ಹೆಚ್ಚಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಹೊಸ ಗೃಹಬಳಕೆ ಎಲ್‌ಪಿಜಿ ಸಂಪರ್ಕಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅನುಮೋದಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲೇ 11 ಸಾವಿರಕ್ಕೂ ಹೆಚ್ಚು ಗ್ರಾಹಕರ ಅರ್ಜಿ ವಿಲೇವಾರಿ ಬಾಕಿ
ರಾಜಧಾನಿ ಬೆಂಗಳೂರಿನಲ್ಲೇ 11 ಸಾವಿರಕ್ಕೂ ಹೆಚ್ಚು ಮಂದಿ ಹೊಸ ಎಲ್‌ಪಿಜಿ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದಾದ್ಯಂತ ಸಾವಿರಾರು ಅರ್ಜಿಗಳು ಬಾಕಿ ಉಳಿದಿರುವುದರಿಂದ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಹೊಸ ಸಂಪರ್ಕಕ್ಕಾಗಿ ಕಾಯುತ್ತಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ. ರಾಜ್ಯ ಸರ್ಕಾರದ ಮನವಿ ಮತ್ತು ಗ್ರಾಹಕರ ಬೇಡಿಕೆಗೆ ಸ್ಪಂದಿಸಿ ಬಾಕಿ ಅರ್ಜಿಗಳ ಅನುಮೋದನೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




