ಪ್ರಮುಖ ರಾಷ್ಟ್ರೀಯ ಹೆದ್ದಾರಿಯೊಂದು ತುಂಬಿ ತುಳುಕುತ್ತಿರುವ ಕೆರೆ ಕಟ್ಟೆಯ ಮೇಲೆ ಹಾದು ಹೋಗಿದೆ. ಇದೇ ಹೆದ್ದಾರಿಯಲ್ಲಿ ಹಗಲು ರಾತ್ರಿ ವಾಹನ ಸವಾರರು ಚಲಿಸುತ್ತಾರೆ. ಆದ್ರೆ ಕೆರೆಗೆ ತಡೆಗೋಡೆಯಾಗಲಿ, ಇಲ್ಲಾ ಗ್ರೀಲ್ ಅಳವಡಿಸದ ಕಾರಣ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ!!
ಇದು ರಾಷ್ಟ್ರೀಯ ಹೆದ್ದಾರಿ 234. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಿಂದ ತಮಿಳುನಾಡಿನ ತಿರುವಣ್ಣಮಲೈಗೆ ಸಂಪರ್ಕ ಕಲ್ಪಿಸುತ್ತೆ. ಇದೆ ಹೆದ್ದಾರಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾದು ಹೋಗಿದ್ದು, ಜಿಲ್ಲೆಯ ಶಿಡ್ಲಘಟ್ಟ ನಗರದ ಬಳಿ ಹಂಡಿಗನಾಳ ಗ್ರಾಮ ಹಾಗೂ ಶಿಡ್ಲಘಟ್ಟ ನಗರದ ಮಧ್ಯೆ ಇರುವ ಬೃಹತ್ ಅಮ್ಮನ ಕೆರೆಯ ಕಟ್ಟೆ ಮೇಲೆ ಹಾದು ಹೊಗ್ತಿದೆ. ಆದ್ರೆ ಈಗ ಕೆರೆ ತುಂಬಿ ತುಳುಕುತ್ತಿದ್ದು ಹತ್ತು-ಇಪ್ಪತ್ತು ಅಡಿ ನೀರು ನಿಂತಿದೆ. ಇದ್ರಿಂದ ವಾಹನ ಸವಾರರು ಸ್ವಲ್ಪ ಯಾಮಾರಿದ್ರೆ ನೇರವಾಗಿ ಕೆರೆಯ ಪಾಲಾಗುವ ಭೀತಿ ಎದುರಾಗಿದೆ.
ಮೊದಲೆ ಕೆರೆ ಕಟ್ಟೆ ಅಂಕುಡೊಂಕಾಗಿದೆ. ಅದಕ್ಕೆ ತಕ್ಕಂತೆ ಹೆದ್ದಾರಿಯೂ ಅಂಕುಡೊಂಕಾಗಿದೆ! ಕೆರೆ ಕಟ್ಟೆಯ ಮೇಲೆ ವಾಹನಗಳು ವೇಗವಾಗಿ ಚಲಿಸುತ್ತವೆ. ಆದ್ರೆ ಕೆರೆ ಕಟ್ಟೆಗೆ ಮುಂಜಾಗೃತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ, ಎಚ್.ಎನ್. ವ್ಯಾಲಿ ಯೋಜನೆ ಅಧಿಕಾರಿಗಳು, ಇಲ್ಲಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ, ಇದ್ರಿಂದ ವಾಹನ ಸವಾರರು ಅವಘಡ ನಡೆದು ಪ್ರಾಣ ಹಾನಿ ಆಗುವುದಕ್ಕೂ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಗುಜರಾತ್ ನಲ್ಲಿ ಮೊರ್ಬಿ ತೂಗು ಸೇತುವೆ ಕುಸಿದು ಬಿದ್ದು ನೂರಾರು ಜನ ಜಲಸಮಾಧಿಯಾಗಿರುವ ದುರ್ಘಟನೆ ಎದುರಿಗೇ ಇದೆ. ಇತ್ತ ಪ್ರಮುಖ ಹೆದ್ದಾರಿಯೊಂದು ತುಂಬಿದ ಕೆರೆ ಕಟ್ಟೆಯ ಮೇಲೆ ಇದ್ದು ವಾಹನಗಳು ಹಾಗೂ ಜನ ಕೆರೆಗೆ ಹಾರವಾಗುವುದಕ್ಕೂ ಮುನ್ನ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಣ್ಣು ತೆರೆಯಬೇಕಿದೆ ಎನ್ನುತ್ತಾರೆ ಜನ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)
Published On - 5:10 pm, Sat, 5 November 22