ರೈತರಿಗೆ ಗುಡ್ನ್ಯೂಸ್: ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿ
ರಾಯಚೂರು ಪ್ರಗತಿ ಪರಿಶೀಲನಾ ಸಭೆ ಹಿನ್ನೆಲೆ ಜಿಲ್ಲೆಗೆ ಆಗಮಿಸಿದ ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರು, ಒಂದು ವಾರದಲ್ಲಿ ರೈತರಿಗೆ ಬರಪರಿಹಾರದ ಮೊದಲ ಕಂತಿನ ಹಣ ಪಾವತಿಯಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ಒಟ್ಟು 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಭರ್ತಿ ಮಾಡಲಾಗುವುದು ಎಂದು ಹೇಳಿದರು.
ರಾಯಚೂರು, ಜ.16: ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿಯಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದರು. ಜಿಲ್ಲೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬರ ಪರಿಹಾರ, ಅತೀವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಎಷ್ಟೋ ಜನ ಬೆಳೆಯನ್ನೇ ಇಡದಿದ್ದರೂ ಅವರಿಗೂ ಪರಿಹಾರ ಸಿಗುತ್ತಿತ್ತು. ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ ಎಂದರು.
ಹಿಂದಿನ ಸರ್ಕಾರ ಇದ್ದಾಗ, ನಾನು ಕೃಷಿ ಸಚಿವನಿದ್ದಾಗಲೂ ನೋಡಿದ್ದೇನೆ. ಯಾರದ್ದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾಗಿತ್ತಿತ್ತು. ರೈತರ ಬೆಳೆಯೇ ಬೇರೆ ಪರಿಹಾರ ಬರುವುದೇ ಬೇರೆ ಬೆಳೆಗೆ. ಅಧಿಕಾರಿಗಳು ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲಾ ಸರಿಮಾಡಿ ಬೆಳೆಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗುತ್ತದೆ ಎಂದರು.
ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರುತ್ತದೆ. 12 ಲಕ್ಷ ಜನರಿಗೆ ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸುತ್ತೇವೆ. 25-30 ಲಕ್ಷ ಜನರಿಗೆ ಸಿಗುತ್ತದೆ ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ 2000 ರೂ. ಬರ ಪರಿಹಾರ ಬಿಡುಗಡೆ
ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದು, ಹಣ ಬಂದಿಲ್ಲ. ಹೀಗಾಗಿ ನಾವೇ ರೈತರಿಗೆ 2 ಸಾವಿರ ರೂಪಾಯಿವರೆಗೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ಮೊದಲ ಕಂತಿನ ಹಣ 800-900 ಕೋಟಿ ಆಗುತ್ತದೆ. 4663 ಕೋಟಿ ಹಣವನ್ನ ಕೇಂದ್ರ ಸರ್ಕಾರದ ಬಳಿ ಕೇಳಿದ್ದೇವೆ. ಬೇರೆ ಎಲ್ಲಾ ಸೇರಿ ಒಟ್ಟು 18,172 ಕೋಟಿ ರೂ. ಪರಿಹಾರ ಕೇಳಿದ್ದೇವೆ. ಎನ್‌ಡಿಆರ್‌ಎಫ್, ಎಸ್ಡಿಆರ್ಎಫ್ ನಿಯಮಗಳ ಪ್ರಕಾರ ನೀಡಿವ ಪರಿಹಾರ ರೈತರ ಖರ್ಚಿಗೆ ತಾಳೆಯಾಗುವುದಿಲ್ಲ. ನಿಯಮಗಳ ಪರಿಷ್ಕರಣೆಗೆ ಪ್ರಧಾನಮಂತ್ರಿ, ಗೃಹಸಚಿವರಿಗೆ ಮನವಿ ಮಾಡಿದ್ದೇವೆ ಎಂದರು.
ಮುಂದಿನ ನಾಲ್ಕೈದು ತಿಂಗಳು ಬರಗಾಲ ನಿರ್ವಹಣೆ ಮಾಡಲು ಇಲಾಖೆಯನ್ನ ಸನ್ನದ್ದು ಮಾಡಬೇಕಿದೆ. ಕಂದಾಯ ಇಲಾಖೆಯ ದಿನನಿತ್ಯದ ಕೆಲಸಗಳು ವಿಳಂಬವಾಗುತ್ತಿದೆ ಅನ್ನೋ ದೂರುಗಳಿವೆ. ಸರ್ವೆ ಇಲಾಖೆಯಲ್ಲಿ ತುಂಬಾ ನಿಧಾನ ಹಾಗೂ ತೊಂದರೆಗಳಾಗುತ್ತಿವೆ. ರಾಜ್ಯದ 31 ಜಿಲ್ಲೆಗಳ, 31 ತಾಲೂಕುಗಳಲ್ಲಿ ದಾಖಲೆಗಳನ್ನ ಡಿಜಿಟಲೈಸ್ ಮಾಡುತ್ತಿದ್ದೇವೆ. ಜನಗಳಿಗೆ ಸುಲಭವಾಗಿ ದಾಖಲೆಗಳು ಸಿಗಲು ಸುಧಾರಣೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಮುಂದಿನ ಆರು ತಿಂಗಳಲ್ಲಿ ಎಲ್ಲಾ ತಾಲೂಕುಗಳಿಗೆ ಡಿಜಿಟಲಿಕರಣ ವಿಸ್ತರಿಸುತ್ತೇವೆ. ದಾಖಲೆಗಳಿಗಾಗಿ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜನ ಆನ್‌ಲೈನ್‌ನಲ್ಲೇ ಎಲ್ಲಾ ದಾಖಲೆಗಳನ್ನ ಪಡೆಯುವಂತ ಶಾಶ್ವತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
1500 ಗ್ರಾಮಲೆಕ್ಕಾಧಿಕಾರಿ ಹುದ್ದೆ ನೇಮಕಾತಿ
ಎಲ್ಲಾ ಜಿಲ್ಲೆಗಳಿಗೂ ಒಟ್ಟು 1,500 ಗ್ರಾಮಲೆಕ್ಕಾಧಿಕಾರಿ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ಫೈನಲ್ ಕ್ಯಾಬಿನೆಟ್ ಒಪ್ಪಿಗೆ ಫೈಲ್ ಬರಬೇಕಿದೆ. ಫೆಬ್ರವರಿ ತಿಂಗಳಿಗೆ ಭರ್ತಿ ಪ್ರಕ್ರಿಯೆಗೆ ಚಾಲನೆ ಕೊಡುತ್ತೇವೆ. 357 ಸರ್ವೆಯರ್ ಹುದ್ದೆ ತುಂಬುತ್ತಿದ್ದೇವೆ. ಅಲ್ಲದೆ ಇನ್ನೂ 590 ಫೊಸ್ಟ್ ತುಂಬಲು ಇನ್ನೂ ಒಂದು ತಿಂಗಳಲ್ಲಿ ಅಪ್ರೂವಲ್ ಸಿಗುತ್ತದೆ. 750 ಜನ ಲೈಸನ್ಸ್ಡ್ ಸರ್ವಯರ್ಸ್ಗೆ ತರಬೇತಿ ಕೊಟ್ಟಿದ್ದೇವೆ, ಕಾರ್ಯಾರಂಭಿಸುತ್ತಾರೆ ಎಂದರು.
ಅಧಿಕಾರಗಳ ಮೇಲೆ ಗರಂ ಆದ ಕೃಷ್ಣ ಬೈರೇಗೌಡ
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಕೃಷ್ಣ ಬೈರೆಗೌಡ ಅವರು ಜಿಲ್ಲೆಯಲ್ಲಿ ಇ-ಫೈಲ್ ಸಿಸ್ಟಮ್ ಪ್ರಗತಿ ಕಾಣದ ಹಿನ್ನೆಲೆ ಅಧಿಕಾರಿಗಳ ಮೇಲೆ ಗರಂ ಆದರು. “ಇಷ್ಟು ದಿನ ಏನ್ಮಾಡ್ತಿದ್ರಿ, ನಿಮ್ಮ ಭಾಷೆಯಲ್ಲೇ ಹೇಳ್ಳಾ, ಏನು ಕತ್ತೆ ಕಾಯ್ತಿದ್ರಾ ಎಂದು ಆಕ್ರೋಶ ಹೊರಹಾಕಿದರು.
ಫಿಸಿಕಲ್ ಫೈಲ್ ಸ್ವೀಕರಿಸದಂತೆ ಹೇಳಿಲ್ವಾ? ಯಾಕೆ ಈ ಫೈಲ್ ಸಿಸ್ಟಮ್ ಪ್ರಗತಿ ಕಾಣ್ತಿಲ್ಲ? ಅಕ್ಕ ಪಕ್ಕದ ಜಿಲ್ಲೆಯಲ್ಲಿ ಎಲ್ಲಾ ಆಗ್ತಿದೆ. ನಿಮ್ಮ ಜೀವ ಫಿಸಿಕಲ್ ಫೈಲ್ನಲ್ಲೇ ಇದ್ದಂಗೆ ಇದೆ. ಫೈಲ್ ಇಟ್ಕೊಂಡು ಬೇಕಾದವರದ್ದು ಮೂವ್ ಮಾಡಿ ಬೇಡವಾಗಿರೋರ್ದು ಕಳೆದು ಹಾಕೋದಾ? ಜನ ಕಚೇರಿಗೆ ಅಲೆದು ಅಲೆದು ಸಾಯ್ಬೇಕಾ? ಇ ಫೈಲ್ ಸಿಸ್ಟಮ್ ಎಸಿ ಕಚೇರಿಯಿಂದ ಶುರುವಾಗಬೇಕಿತ್ತು. ನಿಮಗೆ ಮೈಂಡ್ ಇಲ್ಲಾ, ಮನಸ್ಸಿಲ್ಲಾ ಅಂದ್ರೆ ಏನ್ಮಾಡೋದು, ಒಟ್ನಲ್ಲಿ ಜನರ ಜುಟ್ಟು ನಿಮ್ಮ ಕೈಯಲ್ಲಿರಬೇಕಲ್ವಾ ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ