ತೆಂಗು, ಹೆಬ್ಬೇವು ಗಿಡಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಸಾಂಪ್ರದಾಯಿಕ ಬೆಳೆಗಳಬದಲು ಹೊಸರೀತಿಯ ಕೃಷಿಗೆ ಮುಂದಾಗಿದ್ದ ಸುಧೀಶ್ ತೋಟದಲ್ಲಿದ್ದ ತೆಂಗು, ಹೆಬ್ಬೇವು ಗಿಡಗಳನ್ನು ದುಷ್ಕರ್ಮಿಗಳು ಬೆಂಕಿಹಚ್ಚಿ ಸುಟ್ಟುಹಾಕಿದ್ದಾರೆ.

ಮಂಡ್ಯ: ಸಾಂಪ್ರದಾಯಿಕ ಬೆಳೆಗಳನ್ನ ಬೆಳೆಯುವುದು ಬೇಡ ಎಂದು ನಿರ್ಧರಿಸಿ ರೈತರೊಬ್ಬರು ತಮ್ಮ ಜಮೀನಿನ ತುಂಬೆಲ್ಲಾ ತೆಂಗಿನ ಗಿಡಗಳು, ಹಾಗೂ ಹೆಬ್ಬೇವು ಗಿಡಗಳನ್ನ ಹಾಕಿ ಬೆಳೆಸಲಾರಂಭಿಸಿದ್ದರು. ಗಿಡಗಳನ್ನು ಕಳೆದ ಮೂರು ವರ್ಷಗಳಿಂದಲೂ ಆರೈಕೆ ಮಾಡಿ ಮಗುವಿನಂತೆ ನೋಡಿಕೊಂಡಿದ್ದರು. ಬೆಳೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಗಿಡಗಳು ಸುಟ್ಟು ಭಸ್ಮವಾಗಿವೆ.
ಸುಧೀಶ್ ಎಂಬ ಯುವಕ ಎಲೆಕ್ಟ್ರಿಕಲ್ ಅಂಡ್ ಕಮ್ಯೂನಿಕೇಷನ್ ವಿಷಯದಲ್ಲಿ ಡಿಪ್ಲೊಮಾ ಮುಗಿಸಿದ ನಂತರ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ತನ್ನ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ನಂತರ ಸುಧೀಶ್ ವ್ಯವಸಾಯ ಮಾಡುವುದಕ್ಕೆ ಮುಂದಾದರು. ಎಲ್ಲರೂ ಮಾಡುವ ಸಾಂಪ್ರದಾಯಿಕ ಬೆಳೆಗಳನ್ನ ಬೆಳೆಯುವುದು ಬೇಡ ಎಂದು ನಿರ್ಧರಿಸಿದ ಯುವಕ ಸಧೀಶ್ ತೆಂಗಿನ ಗಿಡಗಳು, ಹಾಗೂ ಹೆಬ್ಬೇವು ಗಿಡಗಳನ್ನ ಜಮೀನಿನಲ್ಲಿ ಹಾಕಿದ್ದರು. ಆದರೆ ಬೆಳೆಸಲಾರಂಭಿಸಿದ ಗಿಡಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು 50ಕ್ಕೂ ಹೆಚ್ಚು ತೆಂಗಿನ ಗಿಡಗಳು ಹಾಗೂ ನೂರಾರು ಹೆಬ್ಬೇವಿನ ಮರಗಳು ಬೆಂಕಿಗೆ ಆಹುತಿಯಾಗಿವೆ. ತಂದೆ ಸಾವನ್ನಪ್ಪಿದ ಬಳಿಕ ಬೆಂಗಳೂರಿನ ತನ್ನ ಕೆಲಸಕ್ಕೆ ಗುಡ್ ಬೈ ಹೇಳಿ ಊರಿಗೆ ಬಂದು ಸೇರಿಕೊಂಡ ಸುಧೀಶ್ ತಂದೆ ಬಿಟ್ಟುಹೋಗಿದ್ದ 4 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಲಾರಂಭಿಸಿದ್ದರು. ಈ ವೇಳೆ ಎಲ್ಲರಂತೆ ಮಾಮೂಲು ವ್ಯವಸಾಯ ಮಾಡುವುದು ಬೇಡ ಇದೇ ಕ್ಷೇತ್ರದಲ್ಲಿ ಏನಾದರೂ ವಿಭಿನ್ನವಾಗಿ ಮಾಡೋಣ ಎಂದು ನಿರ್ಧರಿಸಿದರು. ಜಮೀನಿಗೆ ತೆಂಗು ಹಾಗೂ ಹೆಬ್ಬೇವಿನ ಗಿಡಗಳನ್ನ ನೆಟ್ಟು ಆರೈಕೆ ಮಾಡಲಾರಂಭಿಸಿದ್ದ ಈತನ ಶ್ರಮಕ್ಕೆ ತಕ್ಕಂತೆ ಗಿಡಗಳೂ ಚೆನ್ನಾಗಿಯೇ ಬೆಳೆಯಲಾರಂಭಿಸಿದ್ದವು. ಆದರೆ ಇದನ್ನ ಸಹಿಸದ ಯಾರೋ ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಹಚ್ಚಿದ್ದು ಸುಮಾರು 1 ಎಕರೆ ತೋಟ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಸುಟ್ಟು ಕರಕಲಾಗಿರುವ ತೆಂಗಿನ ಗಿಡಗಳು
ತಮ್ಮದೇ ಜಮೀನಿನಲ್ಲಿ ಸಾಂಪ್ರದಾಯಿಕ ಬೇಸಾಯ ಪದ್ಧತಿ ಬಿಟ್ಟು ವಿಭಿನ್ನವಾಗಿ ಮಾಡಲು ಮುಂದಾದ ಸುಧೀಶ್ ಆರಂಭದಲ್ಲಿ ಜಮೀನನ್ನ ಉಳುಮೆ ಮಾಡುವುದನ್ನ ನಿಲ್ಲಿಸಿದ್ದರು. ಅಲ್ಲದೇ ಜಮೀನಿನ ತುಂಬಾ ತೆಂಗಿನ ಗಿಡಗಳನ್ನ ನೆಟ್ಟಿದ್ದರು. ಜೊತೆಗೆ ಹೆಬ್ಬೇವು ಗಿಡಗಳನ್ನ ನೆಟ್ಟು ಪ್ರತಿಯೊಂದು ಗಿಡದ ಬಳಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಿ ಚೆನ್ನಾಗಿಯೇ ಆರೈಕೆ ಮಾಡುತ್ತಾ ಬೆಳೆಸುತ್ತಿದ್ದರು. ಆದರೆ ಕಿಡಿಗೇಡಿಗಳು ರಾತ್ರೋ ರಾತ್ರಿ ಜಮೀನಿಗೆ ಬೆಂಕಿ ಹಚ್ಚಿದ್ದು ಇದರಿಂದಾಗಿ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡಗಳು ಸುಟ್ಟು ಹೋಗಿರುವುದರಲ್ಲದೆ, ಹನಿ ನೀರಾವರಿಗೆ ಬಳಸಲಾಗಿದ್ದ ಪೈಪ್ ಸಹ ಸುಟ್ಟುಕರಕಲಾಗಿವೆ ಎಂದು ಸುಧೀಶ್ ಹೇಳಿದರು.
ಇದನ್ನೂ ಓದಿ: ಬಂಗಾರದಂಥ ಬೆಳೆಗೆ ಮಜ್ಜಿಗೆ ರೋಗದ ಕಾಟ: ಬೇಸತ್ತ ರೈತರಿಂದ ಮೆಣಸಿನಕಾಯಿ ಬೆಳೆ ನಾಶ..!
ಇದನ್ನೂ ಓದಿ: ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ: ನೆಲ ಕಚ್ಚಿದ ಬೆಳೆ ನೋಡಿ ಕಣ್ಣೀರಿಟ್ಟ ಅನ್ನದಾತರು