ಸಿಎಂ ಡಿಕೆ ಶಿವಕುಮಾರ್ ಮುಖ್ಯ ಸಲಹೆಗಾರರಾಗಿ ಸುನೀಲ್‌ ಕನುಗೋಳು ನೇಮಕ: ಯಾರಿವರು?

2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾಗಿದ್ದ ಚುನಾವಣಾ ತಂತ್ರಗಾರ ಸುನೀಲ್‌ ಕನುಗೋಳುಗೆ ಮಹತ್ವದ ಹುದ್ದೆ ಲಭಿಸಿದೆ. ಈ ಹಿಂದೆ ಸಿದ್ದರಾಮಯ್ಯನವರ ಮುಖ್ಯ ಸಲಹೆಗಾರಾಗಿದ್ದ ಸುನೀಲ್‌ ಕನುಗೋಳು ಅವರನ್ನು ಸಹ ಸಿಎಂ ಡಿಕೆ ಶಿವಕುಮಾರ್ ಅವರು ಸಹ ನೇಮಕ ಮಾಡಿಕೊಂಡಿದ್ದಾರೆ. ಹಾಗಾದ್ರೆ, ಯಾರು ಈ ಸುನೀಲ್‌ ಕನುಗೋಳು ಎನ್ನುವ ಡಿಟೇಲ್ಸ್ ಇಲ್ಲಿದೆ.

ಸಿಎಂ ಡಿಕೆ ಶಿವಕುಮಾರ್ ಮುಖ್ಯ ಸಲಹೆಗಾರರಾಗಿ ಸುನೀಲ್‌ ಕನುಗೋಳು ನೇಮಕ: ಯಾರಿವರು?
Dk Shivakumar And Sunil Kanugolu

Updated on: Jun 08, 2026 | 10:04 PM

ಬೆಂಗಳೂರು, (ಜೂನ್ 08): 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಸುನೀಲ್‌ ಕನುಗೋಳು (Poll strategist Sunil Kanugolu) ಅವರನ್ನು ಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಬಳ್ಳಾರಿ ಮೂಲದ ಈ ಸುನೀಲ್ ಕನುಗೋಳು ಹಿಂದೆ ಸಿದ್ದರಾಮಯ್ಯನವರ ಸಲಹೆಗಾರರಾಗಿದ್ದರು. ಇದೀಗ ಅವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಡಿಕೆ ಶಿವಕುಮಾರ್ ಅವರ ಸಲಹೆಗಾರರನ್ನಾಗಿ ನೇಮಕ ಮಾಡಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ
  • ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಸಲಹೆಗಾರರಾಗಿದ್ದ ಕನುಗೋಳು
  • ಈಗ ಡಿಕೆಶಿಗೂ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ
  • ಸುನೀಲ್ ಕನುಗೋಳುಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ನೇಮಕ

ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ಸುನೀಲ್‌ ಕನುಗೋಳು ನೇಮಕ ಮಾಡಲಾಗಿದ್ದು, ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಹಾಗೂ ಎಲ್ಲ ಸೌಕರ್ಯಗಳನ್ನು ಒದಗಿಸುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.

ಇದನ್ನೂ ಓದಿ: IAS, IPS ಅಧಿಕಾರಿಗಳ ವರ್ಗಾವಣೆ: ಮುನೀಶ್‌ ಮೌದ್ಗಿಲ್‌ಗೆ ಮಹತ್ವದ ಜವಾಬ್ದಾರಿ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಗೆಲ್ಲಲು ಸುನೀಲ್‌ ಕನುಗೋಳು ಅವರ ಚುನಾವಣಾ ತಂತ್ರಗಾರಿಕೆ ಬಹಳಷ್ಟು ಕೆಲಸ ಮಾಡಿದೆ. ಈಗಾಗಿ ಸರ್ಕಾರದ ಮಟ್ಟದಲ್ಲೂ ಅವರ ತಂತ್ರಗಾರಿಕೆಯನ್ನು ಬಳಸಿಕೊಳ್ಳಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಸುನೀಲ್‌ ಕನುಗೋಳು ಅವರನ್ನು ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಇದೀಗ ಡಿಕೆ ಶಿವಕುಮಾರ್ ಸಹ ಅದೇ ಮಾದರಿಯನ್ನು ಅನುಸರಿಸಿದ್ದಾರೆ.

ಯಾರು ಈ ಸುನೀಲ್‌ ಕನುಗೋಳು!

ಕರ್ನಾಟಕದ ಬಳ್ಳಾರಿ ಮೂಲದವರಾದ ಸುನೀಲ್ ಕನುಗೋಳು ಬೆಳೆದಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಬಳಿಕ ಚುನಾವಣಾ ತಂತ್ರಗಾರರಾಗಿ ಕೆಲಸ ಆರಂಭಿಸಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡಿದ್ದರು. ಅದಲ್ಲದೇ ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ತಂಡದಲ್ಲಿ ಪ್ರಮುಖ ಪಾತ್ರವನ್ನು ಸುನೀಲ್‌ ಕನುಗೋಳು ನಿರ್ವಹಿಸಿದ್ದರು.

ಇನ್ನು, 2014ರ ಲೋಕಸಭಾ ಚುನಾವಣೆ, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಸುನೀಲ್‌ ಕನುಗೋಳು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪರ ಕೆಲಸ ಮಾಡಿದ್ದರು. ಬಳಿಕ 2021ರಲ್ಲಿ ಡಿಎಂಕೆ ಪರ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿಯ ಬಿಲಿಯನ್ ಮೈಂಡ್ಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.

ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ಗೆ ಹತ್ತಿರವಾದ ಸುನೀಲ್‌, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಭಾರತ್ ಜೋಡೋ ಯಾತ್ರೆಯ ರೂಪುರೇಷೆಯನ್ನು ಸುನೀಲ್‌ ಕನುಗೋಳು ಸಿದ್ಧಪಡಿಸಿದ್ದು, ಅದು ಕರ್ನಾಟಕದಲ್ಲಿ ಈ ಯಾತ್ರೆ ಕಾಂಗ್ರೆಸ್‌ಗೆ ಭಾರೀ ಫಲ ಕೊಟ್ಟಿತ್ತು. ಅದಲ್ಲದೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಸುನೀಲ್ ಕನುಗೋಳು ಅವರ ತಂಡ ನಿರಂತರವಾಗಿ ಕೆಲಸ ಮಾಡಿತ್ತು.  ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲೂ ಕನುಗೋಳು  ಕೊಟ್ಟ ಸಲಹೆಗಳಂತೆ ಮತದಾರರಿಗೆ ಭರವಸೆಗಳನ್ನ ನೀಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಅಭೂತಪೂರ್ವಾಗಿ ಗೆಲ್ಲುವಲ್ಲಿ ಯಶಸ್ವಿ ಆಯ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us