Pen drive Case: ದೇವರಾಜೇಗೌಡ ನನ್ನನ್ನು ಭೇಟಿಯಾಗಿದ್ದು, ಡಿಕೆ ಶಿವಕುಮಾರ್ ಜತೆ ಪೋನ್ನಲ್ಲಿ ಮಾತಾಡಿದ್ದು ನಿಜ: ಶಿವರಾಮೇಗೌಡ
Prajwal Revanna Sexual Assault Case: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳಿವೆ ಎನ್ನಲಾಗಿರುವ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, ಮೇ 08: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳಿವೆ ಎನ್ನಲಾಗಿರುವ ಪೆನ್ಡ್ರೈವ್ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಪೆನ್ಡ್ರೈವ್ ಬಿಡುಗಡೆ ಹಿಂದೆ ಮಾಜಿ ಸಂಸದ ಶಿವರಾಮೇಗೌಡ (Shivarame Gowda) ಅವರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ನನಗೂ ಪೆನ್ಡ್ರೈವ್ಗೂ ಯಾವುದೇ ಸಂಬಂಧ ಇಲ್ಲ. ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ದೇವರಾಜೇಗೌಡ (Devarajegowda) ನನ್ನ ದುಂಬಾಲು ಬಿದ್ದೀದ್ದನು. ಆದರೂ ಕೂಡ ನನ್ನ ಹೆಸರು ಹೇಳಿದ್ದು ವಿಷಾದ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಆಫೀಸ್ನಲ್ಲಿದ್ದಾಗ ಹೊಳೆನರಸಿಪುರದ ಕೆಲವರು ಬಂದಿದ್ದರು. ಅವರು ದೇವರಾಜೇಗೌಡ ನಿಮ್ಮನ್ನು ಭೇಟಿ ಮಾಡಬೇಕು ಅಂತ ನನಗೆ ಹೇಳಿದರು. ಬಳಿಕ ಅವರು ದೇವರಾಜೇಗೌಡಗೆ ಫೋನ್ ಮಾಡಿಕೊಟ್ಟರು. ಆಗ ನಾನು “ಏನಪ್ಪ ಚೆನ್ನಾಗಿದ್ದೀಯಾ, ನಿನ್ನ ಆಸೆ ಈಡೇರಿತು. ವರ್ಷಾನುಗಟ್ಟಲೇ ಹೋರಾಟ ಮಾಡುತ್ತಿದ್ದೆ. ಎಲ್ಲವೂ ಆಚೆಗೆ ಬಂತು” ಅಂತ ಫೋನ್ನಲ್ಲಿ ಇಷ್ಟೇ ಮಾತನಾಡಿದ್ದೇನೆ ಎಂದು ಶಿವರಾಮೇಗೌಡ ಹೇಳಿದರು.
ಡಿಕೆ ಶಿವಕುಮಾರ್ ಮತ್ತು ನನ್ನ ಸಂಬಂಧ ರಾಜಕೀಯಕ್ಕಿಂತ ಮಿಗಿಲಾದ ಸಂಬಂಧ. ಖಾಸಗಿ ಹೊಟೇಲ್ನಲ್ಲಿ ನನ್ನನ್ನು ಭೇಟಿಯಾದನು. ಇಲ್ಲಿಯೂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಹಟ ಹಿಡಿದ. ಆಗ ನಾನು ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ, ಮಾತಾಡಿದೆ. ಬಳಿಕ ನಾನು ಮಾತನಾಡಿದ್ದ ಫೋನ್ ಅನ್ನೇ ದೇವರಾಜೇಗೌಡಗೆ ಕೊಟ್ಟೆ. ಆಗ ಡಿಕೆ ಶಿವಕುಮಾರ್ ಅವರು “ಹೇಗಿದ್ದೀಯಾ ದೇವರಾಜೇಗೌಡ, ಹೋರಾಟ ಹೇಗೆ ನಡೆಯುತ್ತಿದೆ” ಎಂದರು. ಬಳಿಕ ದೇವರಾಜೇಗೌಡ ಡಿಕೆ ಶಿವಕುಮಾರ್ ಅವರ ಜೊತೆ 1:30 ನಿಮಿಷ ಮಾತಾಡಿದ. ಆಗ ಡಿಕೆ ಶಿವಕುಮಾರ್ ಅವರು ನಿನ್ನ ಹತ್ತಿರ ಏನಿದೆ ಎಸ್ಐಟಿಗೆ ಕೊಡು ಅಂತ ದೇವರಾಜೇಗೌಡಗೆ ಹೇಳಿದರು, ಇಷ್ಟೇ ನಡೆದ ಸಂಭಾಷಣೆ ಎಂದು ಶಿವರಾಮೇಗೌಡ ತಿಳಿಸಿದರು.
ಇದನ್ನೂ ಓದಿ: ರೇವಣ್ಣ ವಿರುದ್ಧ ಕಿಡ್ನ್ಯಾಪ್ ಕೇಸ್ಗೆ ಬಿಗ್ ಟ್ವಿಸ್ಟ್: ಗೊಂದಲದ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ
ನನಗೂ ಹಾಗೂ ಕಾರ್ತಿಕ್ಗೌಡಗೂ ಪರಿಚಯವೇ ಇಲ್ಲ. ನನಗೆ ಗೊತ್ತಿರುವುದು ವಕೀಲ ದೇವರಾಜೇಗೌಡ ಅಷ್ಟೆ. ಇಷ್ಟೆಲ್ಲ ಆದಮೇಲೆ ಅವನ ಸಹವಾಸವೇ ಬೇಡಪ್ಪ. ಅವನನ್ನು ಪಕ್ಷದಿಂದ ಹೊರಹಾಕಬೇಕು. ಪೆನ್ಡ್ರೈವ್ ರುವಾರಿಗಳು ದೇವರಾಜೇಗೌಡ, ಕಾರ್ತಿಕ್ ಗೌಡ. ಇವರಿಬ್ಬರ ಬಗ್ಗೆ ಎಸ್ಐಟಿ ತನಿಖೆ ನಡೆಸಿ ಕ್ರಮಕೈಗೊಳ್ಳಲಿ ಎಂದು ಮಾಜಿ ಸಂಸದ ಶಿವರಾಮೇಗೌಡ ಆಗ್ರಹಿಸಿದರು.
ದೇವರಾಜೇಗೌಡ ಆರೋಪ
ಪೆನ್ಡ್ರೈವ್ ಪ್ರಕರಣದ ಹಿಂದಿನ ರೂವಾರಿ ಬೇರೆ ಯಾರೂ ಅಲ್ಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಪೆನ್ಡ್ರೈವ್ ಹಂಚಿಕೆ ಮಾಡೋ ಗೇಮ್ ಪ್ಲ್ಯಾನಿಂಗ್ ಸಿದ್ದರಾಮಯ್ಯ ಸರ್ಕಾರದ್ದು. ಕಾಂಗ್ರೆಸ್ ಸರ್ಕಾರ ನಿಜವಾದ ಆರೋಪಿಗಳನ್ನು ಬಚ್ಚಿಟ್ಟುಕೊಂಡಿದೆ. ಸಂತೃಸ್ತರಿಗೆ ಹಣ ಕೊಟ್ಟುಕರ್ಕೊಂಡು ಬಂದಿದ್ದಾರೆ. ಎಲ್ ಆರ್ ಶಿವರಾಮೇಗೌಡರನ್ನು ಮಧ್ಯವರ್ತಿಯಾಗಿ ಕಳುಹಿಸಲಾಗಿದೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ ಮಾಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Wed, 8 May 24