ಮೊದಲು ತಮ್ಮ ಮನೆಯಲ್ಲಿನ ಗೊಂದಲ ಸರಿಪಡಿಸಿಕೊಳ್ಳಲಿ: ಯಡಿಯೂರಪ್ಪಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಚುನಾವಣೆ ನಂತರ ಕಾಂಗ್ರೆಸ್ ಸರ್ವನಾಶವಾಗುತ್ತೆ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಕಲಬುರಗಿ ಜಿಲ್ಲೆಯ ಕಮಲಾಪುರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಡಿಯೂರಪ್ಪ ಮೊದಲು ತಮ್ಮ ಪಕ್ಷದ ಗೊಂದಲ ನೋಡಿಕೊಳ್ಳಲಿ. ಸ್ವಂತ ಶಿವಮೊಗ್ಗದಲ್ಲೇ ಬಿಎಸ್ವೈ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಕಲಬುರಗಿ, ಮಾರ್ಚ್ 31: ಯಡಿಯೂರಪ್ಪ ಮೊದಲು ತಮ್ಮ ಪಕ್ಷದ ಗೊಂದಲ ನೋಡಿಕೊಳ್ಳಲಿ. ಈಗ ಅವರ ಪಕ್ಷದ ಯಾರೂ ಯಡಿಯೂರಪ್ಪ ಮಾತನ್ನು ಕೇಳುತ್ತಿಲ್ಲ. ಸ್ವಂತ ಶಿವಮೊಗ್ಗದಲ್ಲೇ ಬಿಎಸ್ವೈ ಮಾತನ್ನು ಯಾರೂ ಕೇಳುತ್ತಿಲ್ಲ. ಮೊದಲು ತಮ್ಮ ಮನೆಯಲ್ಲಿನ ಗೊಂದಲ ಸರಿಪಡಿಸಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಕಮಲಾಪುರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ನಂತರ ಕಾಂಗ್ರೆಸ್ ಸರ್ವನಾಶವಾಗುತ್ತೆ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಮಗನ ನಾಯಕತ್ವ ಹೋಗುತ್ತೆಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ತಮ್ಮ ಮಗನ ನಾಯಕತ್ವದಲ್ಲಿ ಏನು ಆಗ್ತಿದೆ ಎಂದು ಮೊದಲು ಹೇಳಲಿ ಎಂದಿದ್ದಾರೆ.
ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಏ.2ರಂದು ರಾಜ್ಯದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರಚಾರ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರ ಪಾಲಿನ ಚುನಾವಣಾ ಚಾಣಕ್ಯ ಅಂದರೆ ಐಟಿ, ಇಡಿ. ಅದು ಬಿಟ್ಟು ಬಿಜೆಪಿಯಲ್ಲಿ ಇನ್ಯಾರು ಚುನಾವಣಾ ಚಾಣಕ್ಯ ಇದ್ದಾರೆ ಎಂದು ಪ್ರಶ್ನಿಸಿದರು. ಎನ್ಡಿಆರ್ಎಫ್ ಮೀಟಿಂಗ್ ಏಕೆ ಮಾಡಿಲ್ಲ ಎಂದು ಅಮಿತ್ ಶಾ ಹೇಳಲಿ. 35 ಸಾವಿರ ಕೋಟಿ ರೂ. ಪರಿಹಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ನಮ್ಮ ರಾಜ್ಯಕ್ಕೆ ಏಕೆ ದುಡ್ಡು ಕೊಟ್ಟಿಲ್ಲ ಎಂದು ಉತ್ತರ ಕೊಡಬೇಕು.
ಇದನ್ನೂ ಓದಿ: ಕಾಂಗ್ರೆಸ್ಗೆ ಐಟಿ ನೋಟಿಸ್ ಬಿಜೆಪಿಯವರ ತೆರಿಗೆ ಭಯೋತ್ಪಾದನೆ ಎಂದ ಪ್ರಿಯಾಂಕ್ ಖರ್ಗೆ
ರಾಜ್ಯಕ್ಕೆ ಬಿಜೆಪಿಯವರ ಕೊಡುಗೆ ಏನಿದೆ ಅನ್ನೋದು ಹೇಳಲಿ. ಅದು ಬಿಟ್ಟು ಚುನಾವಣೆಗೆ ಟೂರಿಸ್ಟ್ ಆಗಿ ಬರ್ತಿದ್ರೆ ಬಂದು ಹೋಗಲಿ. ನಿನ್ನೆ ಡಿ.ಕೆ.ಶಿವಕುಮಾರ್ಗೆ ಐಟಿ ಮತ್ತೊಂದು ಲವ್ ಲೆಟರ್ ಕೊಟ್ಟಿದೆ. ಮಂಜುನಾಥ್ರನ್ನು ಹರಕೆ ಕುರಿ ಮಾಡಲು ಮುಂದಾಗಿದ್ದು ಬಿಜೆಪಿ, JDS. ಅವರ ಕುಟುಂಬದವರೇ ಬೇರೆ ಚಿಹ್ನೆಯಲ್ಲಿ ನಿಂತರೆ ಹೇಗೆ ಬಲಿಷ್ಠ ಆಗ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ರೀತಿ ಭಾವನಾತ್ಮಕ ವಿಚಾರ ಇಟ್ಟುಕೊಂಡು ಮತ ಕೇಳುತ್ತಿಲ್ಲ. ನಿಮ್ಮ ಬದುಕು ಕಟ್ಟುವ ವಿಚಾರ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಮ್ಮ ಕೂಲಿ ಕೆಲಸಕ್ಕೆ ಮತ ಕೇಳಲು ಬಂದಿದ್ದೇವೆ. ನೀವು ಕೊಟ್ಟ ಮತದ ಆಶೀರ್ವಾದಿಂದ ನಾವು 5 ಗ್ಯಾರಂಟಿ ಕೊಟ್ಟಿದ್ದೇವೆ. ಯಾವುದೇ ಜಾತಿ, ಧರ್ಮ ನೋಡಿ ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ ಎಂದರು.
ಇದನ್ನೂ ಓದಿ: ನನ್ನನ್ನು ಎನ್ಕೌಂಟರ್ ಮಾಡುವ ಜೀವ ಬೆದರಿಕೆ ಪತ್ರ ಬಂದಿದೆ: ಪ್ರಿಯಾಂಕ್ ಖರ್ಗೆ
ಎಲ್ಲಾ ಪಕ್ಷದವರು ಗ್ಯಾರಂಟಿ ಯೋಜನೆಯ ಫಲಾನುಭವಿಗಳು. ಬಿಜೆಪಿ ಮಹಿಳಾ ಮೋರ್ಚಾದವರು ಸಹ ಶಕ್ತಿಯೋಜನೆ ಫಲಾನುಭವಿಗಳು. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ನಾವು 100 ತೆರಿಗೆ ಕಟ್ಟಿದ್ರೆ ನಮಗೆ ಕೇವಲ 13 ರೂ. ವಾಪಸ್ ಬರುತ್ತೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.