PSI ನೇಮಕಾತಿಯಲ್ಲಿ ಅಕ್ರಮ: ಹೆಚ್ಡಿಕೆ, ಯತ್ನಾಳ್ ಸೇರಿದಂತೆ ಹಲವರಿಗೆ ವೀರಪ್ಪ ಆಯೋಗದಿಂದ ಸಮನ್ಸ್
545 ಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದ್ದು, ಈ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಆಯೋಗ, ಶಾಸಕರು, ಹಾಗೂ ಮಾಜಿ ಸಿಎಂ, ಮಾಜಿ ಶಾಸಕರಿಗೆ ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರು, (ಡಿಸೆಂಬರ್ 26): 545 ಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ(PSI Scam Case) ಸತ್ಯಾಂಶ ತಿಳಿಯಲು ರಾಜ್ಯ ಸರ್ಕಾರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ವಿಚಾರಣಾ ಆಯೋಗ ರಚನೆ ಮಾಡಿದ್ದು, ಇದೀಗ ವೀರಪ್ಪ ನೇತೃತ್ವದ ಆಯೋಗ ಪ್ರಕರಣದ ತನಿಖೆ ಚುರುಕುಗೊಳಿಸಿದೆ. ಈ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ, ಬಸನಗೌಡ ಪಾಟೀಲ‌್ ಯತ್ನಾಳ್, ಧಡೇಸಗೂರು ಬಸವರಾಜ್, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಪ್ರಕರಣ ಸಂಬಂಧ ಸಾಕ್ಷ್ಯಗಳಿದ್ದರೆ ಹಾಜರುಪಡಿಸುವಂತೆ ತಿಳಿಸಲಾಗಿದೆ.
ಹೆಚ್.ಡಿ.ಕುಮಾರಸ್ವಾಮಿ, ಬಸನಗೌಡ ಪಾಟೀಲ‌್ ಯತ್ನಾಳ್, ಧಡೇಸಗೂರು ಬಸವರಾಜ್, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಇವರನ್ನು ವಿಚಾರಣೆ ನಡೆಸಬೇಕೆಂದು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ದೂರುದಾರರ ಮನವಿ ಹಿನ್ನೆಲೆ ನ್ಯಾ.ಬಿ.ವೀರಪ್ಪ ಆಯೋಗ ಮೇಲೆ ತಿಳಿಸಲಾದ ಎಲ್ಲರಿಗೂ ಸಮನ್ಸ್ ಜಾರಿ ಮಾಡಿದ್ದು, ಸಾಕ್ಷ್ಯಗಳಿದ್ದರೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.
ಪ್ರಕರಣ ಹಿನ್ನೆಲೆ
ಪಿಎಸ್ಐ 545 ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು 2021ರ ಜನವರಿ 21 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್ 3 ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ನೀಡಿತ್ತು. ಅಲ್ಲದೇ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ 52 ಅಭ್ಯರ್ಥಿಗಳನ್ನು ಒಳಗೊಂಡ ಇತರೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ನಂತರ ಆರೋಪಿತ 52 ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಪರೀಕ್ಷೆ ಬರೆದಿರುವು ದೃಢಪಟ್ಟಿರುವ ಹಿನ್ನೆಲೆ 1977ರ ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳ ಪ್ರಕಾರ ಪೊಲೀಸ್ ಇಲಾಖೆ ನಡೆಸುವ ಎಲ್ಲಾ ವೃಂದದ ಹುದ್ದೆಗಳ ನೇಮಕಾತಿಯಲ್ಲಿ ಭಾಗವಹಿಸಲು ಶಾಶ್ವತವಾಗಿ ನಿಷೇಧಿಸಲಾಗಿತ್ತು. ಇನ್ನು ನಾವು ಅಧಿಕಾರಕ್ಕೆ ಬಂದ ಕೂಡಲೆ ತನಿಖೆ ನಡೆಸುವುದಾಗಿ ಕಾಂಗ್ರೆಸ್ ಹೇಳಿತ್ತು. ಅದರಂತೆ ಇದೀಗ ತನಿಖೆಗೆ ನೀಡಿದೆ.
Published On - 5:53 pm, Tue, 26 December 23