ರಾಯಚೂರು ವಿದ್ಯಾರ್ಥಿಗಳ ಗಲಾಟೆ: ಶಾಲೆಗೆ ನೋಟಿಸ್ ನೀಡಿದ ಬಿಇಒ
ಹೊಸ ವರ್ಷದ ಮೊದಲ ದಿನ ಜನವರಿ 01 ರಂದು ರಾಯಚೂರು ನಗರದ ಜ್ಯೋತಿ ಕಾಲೋನಿಯಲ್ಲಿ ನಡೆದಿದೆ. 9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿತ್ತು. 7ನೇ ತರಗತಿ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು 9ನೇ ತರಗತಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲು ಮುಂದಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯ ಮುಖ್ಯ ಶಿಕ್ಷಕರಿಗೆ ಬಿಇಒ ನೋಟಿಸ್ ನೀಡಿದ್ದಾರೆ.

ರಾಯಚೂರು, ಜನವರಿ 02: ಶಾಲಾ ವಿದ್ಯಾರ್ಥಿಗಳ (Students) ಮಧ್ಯೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಓದುತ್ತಿರುವ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರಿಗೆ ರಾಯಚೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ನೋಟಿಸ್ ನೀಡಿದ್ದಾರೆ. ಈ ಘಟನೆ ನಡೆಯಲು ಕಾರಣವೇನು? ವಿದ್ಯಾರ್ಥಿಗಳು ಮಾರಕಾಸ್ತ್ರ ಉಪಯೋಗಿಸಿದ್ದಾರೆಯೇ? ಈ ಬಗ್ಗೆ 24 ಗಂಟೆಗಳ ಒಳಗಡೆ ಲಿಖಿತ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಮಧ್ಯೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ತಂಡ ಪ್ರಕರಣದ ತನಿಖೆ ನಡೆಸಲು ಮುಂದಾಗಿದೆ. ವಿದ್ಯಾರ್ಥಿಗಳು ಓದುತ್ತಿರುವ ಖಾಸಗಿ ಶಾಲೆಗೆ ಭೇಟಿ ನೀಡಿ, ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸದ್ಯ ಇಬ್ಬರು ವಿದ್ಯಾರ್ಥಿಗಳು ಬಾಲ ಮಂದಿರದಲ್ಲಿದ್ದಾರೆ.
ಏನಿದು ಪ್ರಕರಣ
9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ನಡುವೆ ಸೋಮವಾರ (ಜ.01) ರಂದು ಗಲಾಟೆ ನಡೆದಿತ್ತು. ಸೋಮವಾರ 9ನೇ ತರಗತಿ ವಿದ್ಯಾರ್ಥಿ ಶಾಲೆಗೆ ಬಂದಿದ್ದನು. ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿ ತಿನಿಸು ತರಲು ಶಾಲೆಯಿಂದ ಹೊರಗಡೆ ಬಂದಿದ್ದನು.
ಈ ವೇಳೆ 7ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ಬೈಕ್ ಮೇಲೆ ಬಂದು 9ನೇ ತರಗತಿಯ ವಿದ್ಯಾರ್ಥಿಯನ್ನ ಅಡ್ಡ ಹಾಕಿದ್ದರು. ಆಗ 9ನೇ ತರಗತಿಯ ವಿದ್ಯಾರ್ಥಿ ದಾರಿ ಬಿಡು ಎಂದಿದ್ದನು. ಅದಕ್ಕೆ 7ನೇ ತರಗತಿಯ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ನಮಗೆ ದಾರಿ ಬಿಡು ಎನ್ನುತ್ತೀಯಾ ಏ ಸಾಲೇ ಕೋ ಮಾರೋ ಎಂದು ಆತನಿಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಬಸ್ ಚಾಲಕ, ವಿದ್ಯಾರ್ಥಿನಿ ಆತ್ಮಹತ್ಯೆ; ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ಆಗ 9ನೇ ತರಗತಿ ವಿದ್ಯಾರ್ಥಿ ತಪ್ಪಿಸಿಕೊಂಡಿದ್ದು, ಬೆರಳಿಗೆ ಗಾಯವಾಗಿತ್ತು. ಇದನ್ನು ಕಂಡ ಸ್ಥಳಿಯರು ಬಾಲಕರನ್ನು ಬೆದರಿಸಿದ್ದರು. ಆಗ ಆರೋಪಿಗಳು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಚಾರ ತಿಳಿಯುತ್ತಿದ್ದಂತೆ ಹಲ್ಲೆಗೊಳಗಾದ ಬಾಲಕನ ತಂದೆ ಸ್ಥಳಕ್ಕೆ ದೌಡಾಯಿಸಿದ್ದರು. ಆಗ ಹಲ್ಲೆಗೊಳಗಾದ ಬಾಲಕ ತಂದೆಗೆ, ಎದೆ ನೋವುತ್ತಿದೆ ಎಂದು ಹೇಳಿದ್ದನು. ಕೂಡಲೆ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ