ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆ
ಶನಿವಾರ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಹಾಸನದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವಾಗ ನಾಪತ್ತೆ ಆಗಿರುವಂತಹ ಘಟನೆ ನಡೆದಿದೆ. ಭಾರಿ ಮಳೆಯಿಂದ ನದಿ ತುಂಬಿ ಹರಿಯುತ್ತಿರುವುದರಿಂದ ಹುಡುಕಾಟ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಸದ್ಯ ಮಂತ್ರಾಲಯ ಮಠದ ಆಡಳಿತ ಮಂಡಳಿ ಕೂಡ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ.

ರಾಯಚೂರು, ಜುಲೈ 13: ಮಂತ್ರಾಲಯಕ್ಕೆ (Mantralaya) ಬಂದಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ವೇಳೆ ನಾಪತ್ತೆ (Missing) ಆಗಿರುವಂತಹ ಘಟನೆ ನಡೆದಿದೆ. ಅಜಿತ್(19), ಸಚಿನ್(20) ಮತ್ತು ಪ್ರಮೋದ್(20) ನಾಪತ್ತೆಯಾದವರು. ಮೂವರು ಯುವಕರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದ ನಿವಾಸಿಗಳಾಗಿದ್ದು, ಡಿಗ್ರಿ ಓದುತ್ತಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭಾರಿ ಮಳೆಯಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಕಾರ್ಯಚರಣೆಗೆ ಅಡಚಣೆ ಉಂಟಾಗಿದ್ದು, ಬೆಳಗ್ಗೆ 10 ಗಂಟೆ ಬಳಿಕ ಮಂತ್ರಾಲಯ ಪೊಲೀಸರು, ಶ್ರೀಮಠದ ಸಿಬ್ಬಂದಿ ಮತ್ತೆ ಪತ್ತೆ ಕಾರ್ಯ ಆರಂಭಿಸಲಿದ್ದಾರೆ.
ಇದನ್ನೂ ಓದಿ: ರಾಯಚೂರು: ಫೋಟೊಶೂಟ್ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶನಿವಾರದಂದು ಯುವಕರ ತಂಡ ಮಂತ್ರಾಲಯಕ್ಕೆ ಆಗಮಿಸಿತ್ತು. ಈ ವೇಳೆ ಸಂಜೆ ನದಿಗೆ ಸ್ನಾನಕ್ಕೆಂದು ಹೋಗಿದ್ದಾಗ ಮೂವರು ಕಣ್ಮರೆ ಆಗಿದ್ದಾರೆ. ಕೆಲಹೊತ್ತು ನದಿ ಸುತ್ತ ಹುಡುಕಾಡಲಾಗಿದೆ. ಎಷ್ಟೇ ಹುಡುಕಿದರೂ ಸಿಗದ ಹಿನ್ನೆಲೆ ಉಳಿದ ಸ್ನೇಹಿತರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಮಂತ್ರಾಲಯ ಮಠದ ಆಡಳಿತ ಮಂಡಳಿ ಕೂಡ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ.
ನದಿಯಲ್ಲಿ ಮುಳುಗಿ 15 ವರ್ಷದ ಬಾಲಕ ಸಾವು
ಸುವರ್ಣಾವತಿ ನದಿಯಲ್ಲಿ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ತಾಲೂಕು ಹೆಬ್ಬಸೂರು ಬಳಿ ಸುವರ್ಣಾವತಿ ನದಿಯಲ್ಲಿ ನಡೆದಿದೆ. ಜೀವನ್ (15) ಮೃತ ಬಾಲಕ. ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಬಾಲಕನ ಮೃತ ದೇಹ ಮೇಲೆತ್ತಿದ್ದಾರೆ. ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಏಕಾಏಕಿ ಮನೆಯಿಂದ ಮಹಿಳೆ ನಾಪತ್ತೆ: ಸೇತುವೆ ಬಳಿ ಚಪ್ಪಲಿ, ಸ್ಕೂಟಿ ಪತ್ತೆ
ಇನ್ನು ಇತ್ತೀಚೆಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಸೇತುವೆ ಬಳಿ ಓರ್ವ ಮಹಿಳೆಯ ಚಪ್ಪಲಿ ಹಾಗೂ ಸ್ಕೂಟಿ ಪತ್ತೆ ಆಗಿತ್ತು. ಹೀಗಾಗಿ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಕುಂದಾಪುರ ವಿಠ್ಠಲವಾಡಿ ನಿವಾಸಿ ಹೀನಾ ಕೌಶರ್ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ.
ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ಮನೆಯವರು ಊರು ತುಂಬಾ ಹುಡುಕಾಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಹುಡುಕಾಟ ನಡೆಸುವ ವೇಳೆ ಹೀನಾ ಕೌಶರ್ ಸ್ಕೂಟಿ ಮತ್ತು ಚಪ್ಪಲಿ ಕುಂದಾಪುರ ಕೋಡಿ ಸೇತುವೆ ಮೇಲೆ ಪತ್ತೆಯಾಗಿತ್ತು.
ಇದನ್ನೂ ಓದಿ: ರಾಯರ ಭಕ್ತರಿಗೂ ತಪ್ಪಲಿಲ್ಲ ವಂಚಕರ ಕಾಟ: ಆನ್ಲೈನ್ ಬುಕ್ಕಿಂಗ್ ಹೆಸರಲ್ಲಿ ಸಾವಿರಾರು ರೂ ವಂಚನೆ
ಹೀನಾ ಕೌಶರ್ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ ಅನ್ನೊ ಆಂತಕ ಆಕೆಯ ಮನೆಯವರಲ್ಲಿ ಮೂಡಿತ್ತು. ಕುಂದಾಪುರ ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಕೋಡಿ ಸೇತುವೆ ಬಳಿಯಲ್ಲಿ ದೋಣಿಗಳನ್ನು ಬಳಸಿ ಹುಡುಕಾಡಿದ್ದರು. ಆದರೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಇದು ಸಾಕಷ್ಟು ಅನುಮಾಗಳಿಗೆ ಕಾರಣ ಮಾಡಿಕೊಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Sun, 13 July 25







