ಬೆಂಗಳೂರು-ಮೈಸೂರು ಹೈವೇನಲ್ಲಿ ನಾಳೆಯಿಂದ ಟೋಲ್​ ಸಂಗ್ರಹಕ್ಕೆ ನಿರ್ಧಾರ

Bengaluru-Mysuru highway: ಬೆಂಗಳೂರು-ಮೈಸೂರು ಹೈವೇಯಲ್ಲಿ ನಾಳೆಯಿಂದ ಮೊದಲ ಹಂತದ (ಮಾ. 14) ಟೋಲ್​ ಸಂಗ್ರಹಕ್ಕೆ ಎನ್‌ಹೆಚ್‌ಎಐನಿಂದ ತೀರ್ಮಾನಿಸಲಾಗಿದೆ. ಅಲ್ಲಿಗೆ ಹೈವೇನಲ್ಲಿ ಸಂಚರಿಸುವ ಸವಾರರಿಗೆ ನಾಳೆಯಿಂದಲೇ ಜೇಬಿಗೆ ಕತ್ತರಿ ಬೀಳಲಿದೆ.

ಬೆಂಗಳೂರು-ಮೈಸೂರು ಹೈವೇನಲ್ಲಿ ನಾಳೆಯಿಂದ ಟೋಲ್​ ಸಂಗ್ರಹಕ್ಕೆ ನಿರ್ಧಾರ
ಬೆಂಗಳೂರು-ಮೈಸೂರು ಹೈವೇ (ಸಂಗ್ರಹ ಚಿತ್ರ)Image Credit source: news9live.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 13, 2023 | 8:48 PM

ರಾಮನಗರ: ಬೆಂಗಳೂರು-ಮೈಸೂರು ಹೈವೇಯಲ್ಲಿ (Bengaluru-Mysuru highway) ನಾಳೆಯಿಂದ ಮೊದಲ ಹಂತದ (ಮಾ. 14) ಟೋಲ್ (Toll Collection)  ಸಂಗ್ರಹಕ್ಕೆ ಎನ್‌ಹೆಚ್‌ಎಐನಿಂದ ತೀರ್ಮಾನಿಸಲಾಗಿದೆ. ಅಲ್ಲಿಗೆ ಹೈವೇನಲ್ಲಿ ಸಂಚರಿಸುವ ಸವಾರರಿಗೆ ನಾಳೆಯಿಂದಲೇ ಜೇಬಿಗೆ ಕತ್ತರಿ ಬೀಳಲಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಎನ್‌ಹೆಚ್‌ಎಐ ಟೋಲ್ ಸಂಗ್ರಹಿಸಲಿದ್ದು, ಸುಮಾರು 55 ಕಿಲೋಮೀಟರ್ ಹೈವೇಗೆ ಟೋಲ್ ಸಂಗ್ರಹಕ್ಕೆ ನಿರ್ಧರಿಸಲಾಗಿದೆ. ಇನ್ನು ಟೋಲ್ ಸಂಗ್ರಹಕ್ಕೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ಹಿನ್ನೆಲೆ ಟೋಲ್ ಪ್ಲಾಜಾಗಳಲ್ಲಿ ಸೂಕ್ತ ಪೊಲೀಸ್​ ಭದ್ರತೆ ಒದಗಿಸುವಂತೆ ರಾಮನಗರ ಡಿಸಿ ಮತ್ತು ಎಸ್‌ಪಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್​ ಅವರು ಮನವಿ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ, ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ, ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ, ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ನಾಳೆ ಬೆಳೆಗ್ಗೆಯಿಂದಲೇ ಟೋಲ್ ಸಂಗ್ರಹ ವಿರೋಧಿಸಿ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಧರಣಿಗೆ ಕರೆ ಹಿನ್ನೆಲೆ ಸವಾರರಿಗೆ ನಾಳೆ ಪ್ರತಿಭಟನೆಯ ಬಿಸಿ ತಟ್ಟಲಿದೆ.

ಇದನ್ನೂ ಓದಿ: ನಾಳೆಯಿಂದ ಬೆಂಗಳೂರು ಮೈಸೂರು ಹೈವೇಯಲ್ಲಿ ಟೋಲ್​ ಸಂಗ್ರಹ ಸಾಧ್ಯತೆ

ನಾಳೆಯಿಂದ ಬೆಂಗಳೂರು-ಮೈಸೂರು ಹೈವೇಯಲ್ಲಿ ಟೋಲ್ ಸಂಗ್ರಹಿಸಲಾಗುವುದು ಎಂದು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಟೋಲ್ ಸಂಗ್ರಹದ ಬಗ್ಗೆ ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಟಿವಿ9ಗೆ ಯೋಜನಾ ನಿರ್ದೇಶಕ ಶ್ರೀಧರ್​ ಮಾಹಿತಿ ನೀಡಿದ್ದರು. ಗೊಂದಲದಲ್ಲಿರುವ ಅಧಿಕಾರಿಗಳು ಏನು ಮಾಡಬೇಕು ಎಂಬುದು ಗೊತ್ತಿಲ್ಲ ಎಂದು ಹೇಳಿದ್ದರು.

8 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ಟೋಲ್ ವಸೂಲಿ

55 ಕಿಲೋಮೀಟರ್​​ಗೆ 155 ರೂ. ಟೋಲ್ ನಿಗದಿಯಾಗಿದೆ. ಮತ್ತುಳಿದ 55 ಕಿಲೋಮೀಟರ್​ಗೆ 155 ರೂ. ನಿಗದಿಪಡಿಸಲಾಗಿದೆ. ಅಲ್ಲಿಗೆ ಒಟ್ಟು 300 ರೂ. ಟೋಲ್ ಪಾವತಿಸಬೇಕು. ಒಂದು ದಿವಸಕ್ಕೆ 5 ಕೋಟಿ ರೂ. ಸಂಗ್ರಹವಾಗಲಿದೆ. ಅಲ್ಲಿಗೆ ವರ್ಷಕ್ಕೆ 2,444 ಕೋಟಿ ರೂ. ಸಂಗ್ರಹವಾದಂತಾಗಲಿದೆ. 10 ವರ್ಷ ಟೋಲ್ ಸಂಗ್ರಹಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲಿಗೆ 10 ವರ್ಷದಲ್ಲಿ 20,440 ಕೋಟಿ ರೂ. ಸಂಗ್ರಹವಾಗಲಿದೆ. ರಸ್ತೆ ಮಾಡಲು 12 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಅಲ್ಲಿಗೆ 8 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ಟೋಲ್ ವಸೂಲಿಯಾದಂತಾಗಲಿದೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಟೋಲ್​ ದರ ಹೀಗಿದೆ

ಬೆಂಗಳೂರಿನಿಂದ ನಿಡಘಟ್ಟವರೆಗಿನ 56-ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಳಸುವ ವಾಹನಗಳ ಟೋಲ್ ದರಗಳ ಮಾಹಿತಿಯನ್ನು NHAI ಅಧಿಕಾರಿಗಳು ತಿಳಿಸಿದ್ದಾರೆ. ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 135 ರೂ. ಪಾವತಿಸಬೇಕಾಗುತ್ತದೆ. ಬಸ್‌ಗಳು 460 ರೂ. ಮತ್ತು ಭಾರೀ ಮೋಟಾರು ವಾಹನಗಳು 750-900 ರೂ.ಗಳ ನಡುವೆ ಪಾವತಿಸಬೇಕಾಗಬಹುದು ಎಂದು NHAI ಅಧಿಕಾರಿಗಳು ತಿಳಿಸಿದ್ದರು. ಮೇಲಧಿಕಾರಿಗಳಿಂದ ಅನುಮೋದನೆ ಪಡೆದು ಉದ್ಘಾಟನೆಗೂ ಮುನ್ನ ಟೋಲ್ ದರದ ಬಗ್ಗೆ ಅಧಿಕೃತ ಸೂಚನೆ ಹೊರಡಿಸಲಾಗುವುದು ಎಂದು NHAI ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದನ್ನೂ ಓದಿ: Bengaluru-Mysuru Expressway: ಇಂದಿನಿಂದ ಟೋಲ್​ ಸಂಗ್ರಹ ಆರಂಭ; ಇಲ್ಲಿದೆ ಟೋಲ್​ ದರ ಪಟ್ಟಿ

ಎಕ್ಸ್​​ಪ್ರೆಸ್ ವೇ ಗೆ 8,408 ಕೋಟಿ ರೂ. ವೆಚ್ಚ

ಬೆಂಗಳೂರಿನಿಂದ ನಿಡಘಟ್ಟ ಹಾಗೂ ನಿಡಘಟ್ಟದಿಂದ ಮೈಸೂರನ್ನು ಸಂಪರ್ಕಿಸುವ 117 ಕಿಲೋಮೀಟರ್ ಉದ್ದದ ಬೆಂಗಳೂರು – ಮೈಸೂರು ಎಕ್ಸ್​​ಪ್ರೆಸ್ ವೇ, ಎನ್​​ಎಚ್ 275 ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಸುಮಾರು 8,408 ಕೋಟಿ ರೂ. ವೆಚ್ಚದಲ್ಲಿ ಈ ಹೆದ್ದಾರಿ ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ ನಿತಿನ್ ಗಡ್ಕರಿ ಇತ್ತೀಚೆಗೆ ಮಾಹಿತಿ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:48 pm, Mon, 13 March 23