ರಾಮನಗರದಲ್ಲಿ ಖೋಟಾನೋಟು ಜಾಲ ಪತ್ತೆ: ಕಿಂಗ್‌ಪಿನ್ ಸೇರಿ ಮತ್ತೆ ಮೂವರ ಬಂಧನ
ಇತ್ತೀಚೆಗೆ ರಾಮನಗರದಲ್ಲಿ ಖೋಟಾ ನೋಟು ತಯಾರಿಕಾ ಜಾಲವೊಂದು ಪತ್ತೆ ಆಗಿತ್ತು. ಈ ಪ್ರಕರಣ ಸಾಕಷ್ಟು ಚರ್ಚೆ ಮತ್ತು ಆತಂಕ್ಕೆ ಕಾರಣವಾಗಿತ್ತು. ಈಗಾಗಲೇ 7 ಆರೋಪಿಳನ್ನು ಬಂಧಿಸಿರುವ ಪೊಲೀಸರು ಇದೀಗ ಕಿಂಗ್‌ಪಿನ್ ಸೇರಿದಂತೆ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರ, ಸೆಪ್ಟೆಂಬರ್ 03: ರೇಷ್ಮೇನಗರಿ ರಾಮನಗರದ ಶಾಂತಿಲಾಲ್ ಲೇಔಟ್ ನಿರ್ಮಾಣ ಹಂತದ ಮನೆಯೊಂದರಲ್ಲಿ ಇತ್ತೀಚೆಗೆ ಪತ್ತೆ ಆಗಿದ್ದ ನಕಲಿ ನೋಟು ತಯಾರಿಕೆ ದಂಧೆಗೆ ಸಂಬಂಧಿಸಿದಂತೆ ಕಿಂಗ್‌ಪಿನ್ ಸೇರಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಐಜೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ ಇದೀಗ ಹತ್ತಕ್ಕೆ ಏರಿಕೆ ಆಗಿದೆ.
ಖಚಿತ ಮಾಹಿತಿ ಮೇರೆಗೆ ಕಿಂಗ್‌ಪಿನ್ ಬಂಧನ
ಬಂಧಿತರನ್ನು ಚಾಮರಾಜನಗರ ಮೂಲದ ಅಶ್ರಫ್ ಅಲಿ (35) ಹಾಗೂ ಕನಕಪುರ ಮೂಲದ ಮಂಜು (37) ಮತ್ತು ನಾಗರಾಜ (48) ಎಂದು ಗುರುತಿಸಲಾಗಿದೆ. ಈ ಪೈಕಿ ಅಶ್ರಫ್ ಅಲಿ ಖೋಟಾನೋಟು ದಂಧೆಯ ಪ್ರಮುಖ ಕಿಂಗ್‌ಪಿನ್ ಎನ್ನಲಾಗಿದೆ. ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಐಜೂರು ಪೊಲೀಸರ ತಂಡ, ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಆಗಸ್ಟ್ 31ರ ಕಾರ್ಯಾಚರಣೆ ವೇಳೆ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದರು. ಇದೀಗ ಕಿಂಗ್‌ಪಿನ್ ಸೇರಿದಂತೆ ಮತ್ತೆ ಮೂವರನ್ನು ಹೆಡೆಮುರಿ ಕಟ್ಟಿದ್ದಾರೆ. ಈ ಜಾಲದ ಹಿಂದೆ ಇನ್ನಾರ ಕೈವಾಡವಿದೆ, ಇಲ್ಲಿ ತಯಾರಾದ ನಕಲಿ ನೋಟುಗಳು ಮಾರುಕಟ್ಟೆಗೆ ಹೇಗೆ ಸರಬರಾಜಾಗುತ್ತಿದ್ದವು ಎಂಬ ಆಯಾಮಗಳಲ್ಲಿ ಐಜೂರು ಠಾಣೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಶಾಂತಿಲಾಲ್ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ಮನೆಯಲ್ಲಿ ನಡೆಯುತ್ತಿದ್ದ 200 ಮತ್ತು 500 ರೂ ಮುಖಬೆಲೆಯ ನಕಲಿ ನೋಟು ತಯಾರಿಸುವ ಜಾಲವನ್ನು ರಾಮನಗರದ ಐಜೂರು ಠಾಣೆ ಪೊಲೀಸರು ಭೇದಿಸಿ 7 ಜನ ಆರೋಪಿಗಳನ್ನ ಬಂಧಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ 26.6 ಕೋಟಿ ಡ್ರಗ್ಸ್, ನಕಲಿ ನೋಟು ಪ್ರಿಂಟಿಂಗ್ ಜಾಲ ಭೇದಿಸಿದ ಪೊಲೀಸರು
ಅಂದ ಹಾಗೆ ಮನೆ ಮಾಲೀಕನಾದ ಮಾಗಡಿ ತಾಲ್ಲೂಕಿನ ಗಟ್ಟಿಪುರದ ಸಂತೋಷ್, ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯ ಸಂಪತ್, ರಾಮನಗರದ ಐಜೂರಿನ ರಾಜೇಶ್, ಕನಕಪುರದ ಡಿ.ಕೆ. ಲೇಔಟ್‌ನ ರೇಣುಕರಾಜ, ಕಲ್ಲಹಳ್ಳಿ ಗೇಟ್‌ನ ಶಿವರಾಜ, ಹೊಸಕೋಟೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಗೋವಿಂದರಾಜ್, ಪಾಂಡವಪುರ ಮೂಲದ ಸತೀಶ್ ಬಂಧಿತರು. ಆರೋಪಿಗಳು ನಕಲಿ ನೋಟು ತಯಾರಿಸಲು ಬಳಸುತ್ತಿದ್ದ ಪೇಪರ್, ಕೆಮಿಕಲ್, ಬಟ್ಟೆ, ಗಾಜಿನ ಪಟ್ಟಿ, ಮೇಜು ಹಾಗೂ ಇತರ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:57 pm, Thu, 3 September 26




