ಬಾಂಬ್ ಬ್ಲಾಸ್ಟ್ ಬಳಿಕ ರಾಮೇಶ್ವರಂ ಕೆಫೆ ರೀಓಪನ್, ಭಾರತೀಯರ ಆತ್ಮಸ್ಥೈರ್ಯವನ್ನು ಈ ಘಟನೆ ಕುಗ್ಗಿಸಿಲ್ಲ ಎಂದ ಮಾಲೀಕರು
ಬಾಂಬ್ ದಾಳಿ ನಡೆಸಿದ ಆರೋಪಿ ಪತ್ತೆಗೆ ರಾಜ್ಯ ಪೊಲೀಸರು, ಎನ್‌ಐಎ ತಲಾಶ್ ನಡೆಸಿದೆ. ಇದರ ನಡುವೆಯೇ ಬಾಂಬ್ ಸ್ಫೋಟದಿಂದ ತತ್ತರಿಸಿದ್ದ ರಾಮೇಶ್ವರಂ ಕೆಫೆ ಇಂದಿನಿಂದ ರೀ ಓಪನ್ ಆಗಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮೇಶ್ವರಂ ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್, ಈ ಘಟನೆಯಿಂದ ಭಾರತೀಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 08: ನಗರದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ (Rameshwaram Cafe) ಬಗೆದಷ್ಟು ಆಳ-ಅಗಲಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಈಗಾಗಲೇ ಬಳ್ಳಾರಿಯಲ್ಲಿ ಎನ್ಐಎ ಅಧಿಕಾರಿಗಳ ತಂಡ ಬೀಡುಬಿಟ್ಟು ಬಾಂಬರ್‌ನ ಚಲನವಲನ ಪತ್ತೆ ಹಚ್ಚುತ್ತಿದೆ. ಇವೆಲ್ಲದರ ಮಧ್ಯೆ ಇಂದು ನಗರದ ಕುಂದಲಹಳ್ಳಿ ಬಳಿಯಿರುವ ರಾಮೇಶ್ವರಂ ಕೆಫೆ ಪುನಾರಂಭವಾಗಿದೆ. ಈ ವಿಚಾರವಾಗಿ ರಾಮೇಶ್ವರಂ ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಭಾರತೀಯರ ಆತ್ಮಸ್ಥೈರ್ಯವನ್ನು ಈ ಘಟನೆ ಕುಗ್ಗಿಸಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಇಂದು ರಾಮೇಶ್ವರಂ ಕೆಫೆ ಪುನರ್ ಆರಂಭವಾಗುತ್ತಿರುವುದು ಇದಕ್ಕೆ ಸಾಕ್ಷಿ. ಇದು ನಿಜವಾದ ಭಾರತೀಯರ ಶಕ್ತಿ ಎಂದು ಹೇಳಿದ್ದಾರೆ.
ಭಾರತೀಯರು ಯಾರು ಇಂತಹ ಕೃತ್ಯ ಎಸಗುವುದಿಲ್ಲ
ನಮ್ಮ ಭಾರತೀಯರು ಯಾರು ಇಂತಹ ಕೃತ್ಯ ಎಸಗುವುದಿಲ್ಲ. 2012 ರಿಂದ ನಮ್ಮ ಜರ್ನಿ ತಳ್ಳುವ ಗಾಡಿಯಿಂದ ಆರಂಭವಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಇಲ್ಲಿ ಬಂದಿದ್ದೇವೆ, ನಮ್ಮ ಕುಟುಂಬದವರಂತೆ ನಮ್ಮ ಜೊತೆಗಿದ್ದೀರಾ. ನಮ್ಮ ಆತ್ಮ ಸಂತೃಪ್ತಿಗಾಗಿ ಕೆಲಸ ಮಾಡುತ್ತಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಆಹಾರದ ಮೂಲಕ ಇಡೀ ಪ್ರಪಂಚಕ್ಕೆ ತೋರಿಸುವುದು. ನಾವು ನಂಬರ್ ಗೇಮ್ಗೆ ಒಗ್ಗಿಕೊಂಡಿಲ್ಲ. ಪೊಲೀಸರಿಗೆ, ಸ್ಥಳೀಯರಿಗೆ, ಮಾಧ್ಯಮದವರಿಗೆ ಧನ್ಯವಾದ. ಸ್ಥಳೀಯರು ನಮಗೆ ಮುಂದೆ ಬಂದು ಸಮಾಧಾನ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಾಂಬರ್ ಓಡಾಟದ ಮತ್ತೆರಡು ವಿಡಿಯೋ ರಿಲೀಸ್ ಮಾಡಿದ ಎನ್ಐಎ
ಈ ಕೃತ್ಯದಿಂದ ಹೋಟೆಲ್ ಉದ್ಯಮಕ್ಕೆ ಸಾಕಷ್ಟು ಕ್ರಮ ವಹಿಸಲಿದೆ. ಹೆಚ್ಚಿನ ಸಿಸಿ ಕ್ಯಾಮರಾ, ಮೆಟಲ್ ಡಿಟೆಕ್ಟರ್ ಇರಲಿದೆ. ನಿವೃತ್ತ ಆರ್ಮಿ ಅಧಿಕಾರಿಗಳನ್ನು ನಾವು ಭದ್ರತೆ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದೇವೆ. 1500 ಸಿಬ್ಬಂದಿಯೂ ಸೆಕ್ಯುರಿಟಿ ಗಾರ್ಡ್ಗಳಾಗಿ ತಯಾರು ಮಾಡಿದ್ದೇವೆ. ಸ್ಪೋಟದ ಬಳಿಕ ಗಾಯಾಳುಗಳನ್ನು ಮೊದಲಿಗೆ ಆಸ್ಪತ್ರೆಗೆ ದಾಖಲಿಸಿದವರು ನಮ್ಮ ಸಿಬ್ಬಂದಿ. ಕಿವಿಯ ಬಳಿ ಕಟ್ ಆದ ನಮ್ಮ ಸಿಬ್ಬಂದಿ ಗಾಯವಾಸಿಯಾದ ಬಳಿಕ ಮತ್ತೆ ಕೆಲಸಕ್ಕೆ ಬರುತ್ತೇನೆ ಎಂದಿದ್ದಾರೆ. ಎನ್ಐಎ ಅಧಿಕಾರಿಗಳು ತನಿಖೆ ಮಾಡುತ್ತಿದೆ. ಯಾರೇ ಕೃತ್ಯ ಮಾಡಿದ್ದರು ನಮ್ಮ ಮುಂದೆ ಅವರನ್ನು ನಿಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಹೋಟೆಲ್ ಮಾಲೀಕರು ಯಾರು ಇಂತ ಕೃತ್ಯವೆಸಗಲ್ಲ
ಗಾಯಾಳು ಸಂತ್ರಸ್ಥರೊಂದಿಗೆ ನಾವಿದ್ದೇವೆ. ನನ್ನ ಪತಿ ಅವರೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಓರ್ವ ಗಾಯಾಳು ಹೊರತುಪಡಿಸಿ ಎಲ್ಲರೂ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಓರ್ವ ಗಾಯಾಳು ನಾರ್ಮಲ್ ವಾರ್ಡ್ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಖಂಡಿತ ಬ್ಯುಸಿನೆಸ್ ದ್ವೇಷದಿಂದ ಮಾಡಿಲ್ಲ. ಎನ್ಐಎ ಅಧಿಕಾರಿಗಳು ಪ್ರಕರಣ ಭೇದಿಸಲಿದ್ದಾರೆ. ನಮ್ಮಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದಕ್ಕೆ ಈ ಘಟನೆ ನಡೀತಾ ಗೊತ್ತಿಲ್ಲ. ನಮ್ಮ ಹೋಟೆಲ್ ಮಾಲೀಕರು ಯಾರು ಇಂತ ಕೃತ್ಯವೆಸಗಲ್ಲ ಎಂದಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಬೆನ್ನತ್ತಿದ ಎನ್ಐಎಗೆ ಸಿಕ್ತು ‘ಸ್ಫೋಟಕ’ ಮಾಹಿತಿ
ಚೈನ್ನೈ, ಮುಂಬೈ, ಪುಣೆ, ಸಿಂಗಾಪುರ, ಯುಎಸ್ಎ ದುಬೈನಲ್ಲಿ ನಮ್ಮ ದಿ ರಾಮೇಶ್ವರಂ ಕೆಫೆ ಮುಂದಿನ ದಿನಗಳಲ್ಲಿ ಪ್ರಾರಂಭ ಆಗಲಿದೆ. ಭಾರತೀಯ ಊಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುದು, ಪಸರಿಸುವುದು ನಮ್ಮ ಆದ್ಯತೆ. ದಕ್ಷಿಣ ಭಾರತದ ತಿಸಿಸುಗಳು ಔಷಧೀಯ ಗುಣಹೊಂದಿದೆ. ಜಾಗತಿಕವಾಗಿ ನಮ್ಮ ಆಹಾರಗಳನ್ನು ಪರಿಚಯಿಸುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ನಿರ್ವಹಿಸಲಿದ್ದೇವೆ ಎಂದು ಹೇಳಿದ್ದಾರೆ.
ಅಬ್ದುಲ್ ಕಲಾಂ ನಮಗೆ ಮಾದರಿ. ಅವರ ಅನುಯಾಯಿಯಾಗಿ ಅವರ ಹುಟ್ಟೂರಿನ ಹೆಸರು ರಾಮೇಶ್ವರಂ ಅದೇ ಹೆಸರನ್ನು ನಮ್ಮ ಕೆಫೆಗೆ ಇಟ್ಟಿದ್ದೇವೆ. ನಾವು ಸಾಮಾನ್ಯ ಜನರು. ನಮಗೆ ಭದ್ರತೆ ಹೆಚ್ಚಿಗೆ ಬೇಕು ಅನ್ನಿಸಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.