ಕಾನೂನಿಗೆ ವಿರುದ್ಧವಾಗಿ ಚಲನಚಿತ್ರ ನಿರ್ದೇಶಕರ ಸಂಘದ ಚಟುವಟಿಕೆಗಳು ನಡೆದವು: ಸಂಘದ ಆಡಳಿತಾಧಿಕಾರಿ ರೂಪಾ ಅಯ್ಯರ್ ಆರೋಪ

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಗೊಂದಲವೇರ್ಪಟ್ಟ ಹಿನ್ನೆಲೆಯಲ್ಲಿ ಸಂಘದ ಆಡಳಿತಾಧಿಕಾರಿ ರೂಪಾ ಅಯ್ಯರ್ ಕೆಲ ಹಿರಿಯ ನಿರ್ದೇಶಕರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಂಘದ ಚಟುವಟಿಕೆಗಳ ಕುರಿತು ಆರೋಪಿಸಿರುವ ರೂಪಾ, ಗೀತರಚನೆಕಾರ ನಾಗೇಂದ್ರ ಪ್ರಸಾದ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ತಿಳಿಸಿದ್ದಾರೆ.

ಕಾನೂನಿಗೆ ವಿರುದ್ಧವಾಗಿ ಚಲನಚಿತ್ರ ನಿರ್ದೇಶಕರ ಸಂಘದ ಚಟುವಟಿಕೆಗಳು ನಡೆದವು: ಸಂಘದ ಆಡಳಿತಾಧಿಕಾರಿ ರೂಪಾ ಅಯ್ಯರ್ ಆರೋಪ
ರೂಪಾ ಅಯ್ಯರ್ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on: Jul 09, 2021 | 5:57 PM

ಬೆಂಗಳೂರು: ಆಡಳಿತಾಧಿಕಾರಿಯಾಗಿದ್ದರೂ ಸಹ ನನ್ನನ್ನು ಕೇಳದೇ ಎಫ್.ಡಿ ಹಣವನ್ನು ವಿತ್ ಡ್ರಾ ಮಾಡಲಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಸರ್ವ ಸದಸ್ಯರ ಸಭೆ ಕೂಡ ಆಗಿರಲಿಲ್ಲ. ನಮಗೆ ವಿಚಾರ ಕೂಡ ಗೊತ್ತಿರಲಿಲ್ಲ. ಅವರೂ ತಿಳಿಸಲಿಲ್ಲ ಎಂದು ನಿರ್ದೇಶಕರ ಸಂಘದ ಆಡಳಿತಾಧಿಕಾರಿ ರೂಪಾ ಅಯ್ಯರ್ ಆರೋಪಿಸಿದ್ದಾರೆ. ದುಡ್ಡು ತೆಗೆದುಕೊಳ್ಳುವಾಗ ಅವರಿಗೆ ಸಮಯವಿತ್ತು; ಆದರೆ ನಮಗೆ ತಿಳಿಸುವುದಕ್ಕೆ ಅವರಲ್ಲಿ ಸಮಯವಿರಲಿಲ್ಲ. ಕಾನೂನಿನ ವಿರುದ್ಧವಾಗಿ ನಿರ್ದೇಶಕರ ಸಂಘದ ಚಟುವಟಿಕೆಗಳು ನಡೆದವು ಎಂದು ರೂಪಾ ಅಯ್ಯರ್ ಆಪಾದನೆ ಮಾಡಿದ್ದಾರೆ.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಗೊಂದಲವಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲು ಸಂಘದ ಆಡಳಿತಾಧಿಕಾರಿ ರೂಪಾ ಅಯ್ಯರ್ ಅವರು ಸುದ್ದಿಗೋಷ್ಠಿಯನ್ನು ನಡೆಸಿದರು. ಹಲವು ಹಿರಿಯ ನಿರ್ದೇಶಕರ ಸಮ್ಮುಖದಲ್ಲಿ ರೂಪಾ ಅಯ್ಯರ್ ಸುದ್ದಿಗೋಷ್ಠಿ ನಡೆಸಿದ್ದು ಅವರೆಲ್ಲರೂ ರೂಪಾ ಅವರ ಬೆಂಬಲಕ್ಕೆ ನೀಡಿದ್ದಾರೆ. ನಿರ್ದೇಶಕರಾದ ಭಗವಾನ್ ,ರಾಜೇಂದ್ರ ಸಿಂಗ್ ಬಾಬು, ಕೊಡ್ಲು ರಾಮಕೃಷ್ಣ, ಕೃಷ್ಣೆ ಗೌಡ, ಜೋ ಸೈಮನ್ ಸೇರಿದಂತೆ ಹಲವು ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ನಿರ್ದೇಶಕರ ಸಂಘಕ್ಕೆ ರೂಪಾ ಅಯ್ಯರ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಇತ್ತೀಚೆಗೆ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಅವರು ಆಡಳಿತಾಧಿಕಾರಿ ರೂಪಾ ಅಯ್ಯರ್ ಅವರ ವಿರುದ್ಧ ಆರೋಪ ಮಾಡಿದ್ದರು. ಪ್ರತಿಯಾಗಿ ಟೇಶಿ ವೆಂಕಟೇಶ್ ಅವರು ಹಲವು ಅಕ್ರಮಗಳನ್ನು ನಡೆಸಿದ್ದಾರೆ ಎಂದು ಕೆಲವು ನಿರ್ದೇಶಕರಾದಿಯಾಗಿ ಹಲವರು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ಹೇಳಿಕೆಗೆ ರೂಪಾ ಅಯ್ಯರ್ ತಿರುಗೇಟು:

ರೂಪಾ ಅಯ್ಯರ್ ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದ ಗೀತ ರಚನೆಕಾರ, ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರ ಹೇಳಿಕೆಗೆ ರೂಪಾ ಅಯ್ಯರ್ ತಿರುಗೇಟು ನೀಡಿದ್ದಾರೆ. ನಾನ್ಯಾಕೆ ಕ್ಷಮೆ ಕೇಳಲಿ? ಅವರ ವಿರುದ್ಧ 1 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ರೂಪಾ ತಿಳಿಸಿದ್ದಾರೆ.

ಇದನ್ನೂ ಓದಿ: ರೂಪಾ ಅಯ್ಯರ್​ Vs​ ಟೇಶಿ ವೆಂಕಟೇಶ್​; ನಿರ್ದೇಶಕರ ಸಂಘದಲ್ಲಿ ವಿವಾದಗಳು ಒಂದಲ್ಲಾ ಎರಡಲ್ಲಾ

ಇದನ್ನೂ ಓದಿ: ಚಲನಚಿತ್ರ, ಕಿರುತೆರೆ ರಂಗದವರಿಗೆ ಗುಡ್​ ನ್ಯೂಸ್​: ವಿಶೇಷ ಪ್ಯಾಕೇಜ್​ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

(Roopa Iyer Press Meet on Directors association controversy in Bengaluru)