ರೈತರ ಜಮೀನಿನಲ್ಲಿ ಅರಳಿದೆ ಲಕ್ಕೂರು ಗುಲಾಬಿ: ಕೆಂಪು ರೋಜಾಗೆ ಫೆಬ್ರವರಿಯಲ್ಲಿ ಹೆಚ್ಚಿದ ಬೇಡಿಕೆ
ಗುಲಾಬಿ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಗೆ ಈ ಗುಲಾಬಿ ರಫ್ತಾಗುತ್ತದೆ. ಅಷ್ಟೇ ಏಕೆ ಅದರ ಮಾರುಕಟ್ಟೆ ಬೆಲೆಯೇ ಬೇರೆ. ಆದರೆ ಇಲ್ಲಿ ರೈತರಿಗೆ ಸಿಗುವ ಬೆಲೆಯೇ ಬೇರೆ.
ಕೋಲಾರ: ಆ ಹೂವಿಗೆ ವರ್ಷಪೂರ್ತಿ ವಿಶ್ವದೆಲ್ಲೆಡೆಯೂ ಎಲ್ಲಿಲ್ಲದ ಬೇಡಿಕೆ, ಅಷ್ಟೇ ಅಲ್ಲ ಒಮ್ಮೆಲೆ ಅದೆಷ್ಟೋ ಜನರ ಹೃದಯದ ಭಾರವನ್ನು ಇಳಿಸುವ ಶಕ್ತಿ ಆ ಹೂವಿಗಿದೆ, ಹಾಗೆ ಆ ಹೂವು ಬೆಳೆದ ರೈತರ ಬದುಕನ್ನು ಹೂವಾಗಿಸುವ ಮನಸ್ಸು ಆ ಹೂವಿಗಿದೆ, ಅಷ್ಟಕ್ಕೂ ಆ ಹೂವು ಯಾವುದು ಅಂತೀರಾ ಇಲ್ಲಿದೆ ನೋಡಿ.. ಮುಳ್ಳಿನ ನಡುವೆ ಬೆಳೆದರೂ ಮೃದುವಾಗಿ ಮುದ್ದಾಗಿರುವ ಹೂವು ಎಂದರೆ ಅದು ಗುಲಾಬಿ ಹೂವು ಅದರಲ್ಲೂ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಗುಲಾಬಿ ಅಂದರೆ ಅದು ಬಹಳ ಫೇಮಸ್. ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಅಂದರೆ ಹೂವು ಮತ್ತು ತರಕಾರಿ ಬೆಳೆಯುವುದಕ್ಕೆ ಪ್ರಸಿದ್ಧಿ, ಅದರಲ್ಲೂ ಮಾಲೂರಿನ ಲಕ್ಕೂರು ಹೋಬಳಿ ರೈತರಂತೂ ಗುಲಾಬಿ ಹೂವು ಬೆಳೆಯುದರಲ್ಲಿ ಫೇಮಸ್.
ಲಕ್ಕೂರು ಸುತ್ತಮುತ್ತ ನೂರಾರು ಎಕೆರೆ ಪ್ರದೇಶದಲ್ಲಿ ರೈತರು ಗುಲಾಬಿ ಬೆಳೆಯುತ್ತಾರೆ, ಇಲ್ಲಿ ಬೆಳೆಯುವ ಹೂವುಗಳನ್ನು ಆಂಧ್ರ ಪ್ರದೇಶ, ತಮಿಳುನಾಡು, ಕೇರಳದ ವಿವಿಧ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ. ಅದರಲ್ಲೂ ಡಚ್ ತಳಿಯ ವಿವಿಧ ಬಣ್ಣಗಳ ಗುಲಾಬಿ ಹೂಗಳನ್ನು ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕಳೆದ 25 ವರ್ಷಗಳಿಂದ ಈ ಪ್ರದೇಶದಲ್ಲಿ ಹೆಚ್ಚಾಗಿ ಗುಲಾಬಿ ಹೂ ಬೆಳೆಯುತ್ತಿದ್ದು, ನೀರಿನ ಸಮಸ್ಯೆ ಎನ್ನುವುದನ್ನು ಹೊರತು ಪಡಿಸಿದರೆ ಗುಲಾಬಿ ಹೂವು ರೈತರ ಕೈ ಬಿಟ್ಟಿಲ್ಲ.
ಬರದ ನಾಡಲ್ಲಿ ಗುಲಾಬಿ ಬೆಳೆಯುವುದು ಅಷ್ಟು ಸುಲಭವಲ್ಲ: ಗುಲಾಬಿ ಹೂವು ಬೆಳೆಯುವುದು ಅಷ್ಟೊಂದು ಸುಲಭವಲ್ಲ, ಅದರಲ್ಲೂ ಕೋಲಾರದಂತಹ ಬಯಲು ಸೀಮೆ ಜಿಲ್ಲೆಯಲ್ಲಿ ಗುಲಾಬಿ ಬೆಳೆಯುವುದು ಎಂದರೆ ಅದೊಂದು ಸಾಧನೆ ಎಂದರೆ ತಪ್ಪಾಗುವುದಿಲ್ಲ. ಒಂದು ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆಯುವುದಕ್ಕೆ ತಿಂಗಳಿಗೆ 15 ಸಾವಿರ ರೂಪಾಯಿ ಖರ್ಚು ಬರುತ್ತದೆ. ಇನ್ನು ಬೋರ್ವೆಲ್ಗಳಿಂದ ನೀರು ಹಾಯಿಸಿ ಗಿಡಗಳನ್ನು ಆರೈಕೆ ಮಾಡುವುದು ಅಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ, ಇಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆ ಇರುವುದಿಲ್ಲ, ಹೋಗಿ ಬರುವ ಕರೆಂಟ್ ನಡುವೆ ನೀರು ಹಾಯಿಸಿ ಗಿಡಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು.
ಫೆಬ್ರವರಿಯಲ್ಲಿ ಮಾತ್ರ ಗಗನಕ್ಕೇರುತ್ತೆ ಬೆಲೆ ! ಗುಲಾಬಿ ಹೂವು ಎಂದರೆ ಫೆಬ್ರವರಿ ತಿಂಗಳಲ್ಲಿ ಎಲ್ಲಿಲ್ಲದ ಬೇಡಿಕೆ ಪ್ರೇಮಿಗಳ ದಿನಕ್ಕೆ ಇದೊಂದು ರೀತಿಯ ಪ್ರೇಮ ಸಂದೇಶ ರವಾನಿಸುವ ಸಾಧನವಿದ್ದಂತೆ ಹಾಗಾಗಿ ಈ ತಿಂಗಳಲ್ಲಿ ಗುಲಾಬಿ ಹೂವಿಗೆ ಅದರಲ್ಲೂ, ತಾಜ್ಮಹಲ್ ತಳಿಯ ಕೆಂಪು ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ. ಈ ಹೂವಿಗೆ ವಿಶ್ವದಾದ್ಯಂತ ಬೇಡಿಕೆ ಇರುತ್ತದೆ. ಈ ಕಾರಣಕ್ಕಾಗಿಯೇ ಒಂದು ಹೂವಿಗೆ 5 ರಿಂದ 10 ರೂಪಾಯಿವರೆಗೆ ಮಾರಾಟವಾಗುತ್ತದೆ. ಇನ್ನು ಪಾಲಿಹೌಸ್ಗಳಲ್ಲಿ ಬೆಳೆದ ಗುಲಾಬಿ ಹೂವಿಗಂತು ಇನ್ನು ಹೆಚ್ಚಿನ ಬೇಡಿಕೆ ಇರುತ್ತದೆ. ಜೊತೆಗೆ ಈ ಹೂವು ಬೇರೆ ದೇಶಗಳಿಗೆ ರಫ್ತಾಗುತ್ತದೆ. ಉಳಿದಂತೆ ಮಾಮೂಲಿ ಗುಲಾಬಿ ಹೂವುಗಳು ದೇವಸ್ಥಾನಗಳು ಹಾಗೂ ಡೆಕೋರೇಷನ್ಗಾಗಿ ರವಾನೆಯಾಗುತ್ತವೆ. ಇದಕ್ಕೆ ಅಷ್ಟೇನೂ ಬೆಲೆ ಸಿಗುವುದಿಲ್ಲ. ಆದರೂ ಹೂವು ಬೆಳೆಯುವ ರೈತರಿಗೇನು ನಷ್ಟವಾಗುವುದಿಲ್ಲ. ಕಾರಣ ಇದರ ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ.
ಗುಲಾಬಿ ಹೂವನ್ನು ಬಿಡದ ದಳ್ಳಾಳಿ ಕಾಟ: ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಗೆ ಈ ಗುಲಾಬಿ ರಫ್ತಾಗುತ್ತದೆ. ಅಷ್ಟೇ ಏಕೆ ಅದರ ಮಾರುಕಟ್ಟೆ ಬೆಲೆಯೇ ಬೇರೆ. ಆದರೆ ಇಲ್ಲಿ ರೈತರಿಗೆ ಸಿಗುವ ಬೆಲೆಯೇ ಬೇರೆ. ಒಂದು ಗುಲಾಬಿ ಹೂವು ಮಾರುಕಟ್ಟೆಯಲ್ಲಿ 10ರಿಂದ 20 ರೂಪಾಯಿಗೆ ಮಾರಾಟವಾದರೆ ಅದೇ ಹೂವನ್ನು ರೈತರ ಬಳಿ ಕೇವಲ ಐದು ರೂಪಾಯಿಗೆ ಖರೀದಿ ಮಾಡಿರುತ್ತಾರೆ. ಇಲ್ಲಿ ರೈತರಿಗಿಂತ ಹೆಚ್ಚಾಗಿ ದಲ್ಲಾಳಿಗಳೇ ದುಪ್ಪಟ್ಟು ಹಣ ಪಡೆಯುತ್ತಾರೆ.
ಕೊರೊನಾ ನಂತರ ಫೆಬ್ರವರಿಯಲ್ಲಿ ಚೇತರಿಕೆ ಕಂಡ ಗುಲಾಬಿ ಹೂವು! ಕಳೆದ 10 ತಿಂಗಳಿಂದ ಕೊರೊನಾ ಕಾರಣದಿಂದ ಎಲ್ಲೂ ಹಬ್ಬ ಹರಿದಿನಗಳು, ಸಭೆ ಸಮಾರಂಭಗಳು, ದೇವಸ್ಥಾನಗಳಲ್ಲಿ ಪೂಜೆ, ಜಾತ್ರೆಗಳು ನಡೆಯದ ಹಿನ್ನೆಲೆಯಲ್ಲಿ ಹೂವಿಗೆ ಬೆಲೆ ಇಲ್ಲದೆ ಹೂವು ಬೆಳೆಗಾರರು ಬದುಕುವುದೇ ಕಷ್ಟ ಎನ್ನುವಂತಾಗಿತ್ತು. ಯಾವುದೇ ಲಾಭ ಇಲ್ಲದೆ ಹೂವಿನ ಗಿಡಗಳನ್ನು ನಿರ್ವಹಣೆ ಮಾಡಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿತ್ತು. ಇದರಿಂದ ನಷ್ಟಕ್ಕೊಳಗಾಗಿದ್ದ ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು, ಆದರೆ ಇತ್ತೀಚೆಗೆ ಅದರಲ್ಲೂ ಫೆಬ್ರವರಿ ತಿಂಗಳಲ್ಲಿ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು ಹೂವಿನ ಮಾರುಕಟ್ಟೆ ಸುಧಾರಣೆ ಕಂಡಿದೆ.
ಒಟ್ಟಾರೆ ಗುಲಾಬಿ ಹೂವನ್ನು ನಂಬಿದ ರೈತರಿಗೆ ಹೂವು ಎಂದೂ ಕೈ ಬಿಟ್ಟಿಲ್ಲ. ಸಣ್ಣಪುಟ್ಟ ಸಮಸ್ಯೆಗಳು ಬಂದರೂ ಎಂದಿಗೂ ಹೂ ಬೆಳೆದ ರೈತರನ್ನು ಮುಳ್ಳಿನ ಮೇಲೆ ತಳ್ಳದ ಗುಲಾಬಿ ಇಂದಿಗೂ ರೈತರ ಪಾಲಿಗೆ ಒಳ್ಳೆಯ ಆದಾಯದ ಮೂಲವಾಗಿ ರೈತರ ಕೈ ಹಿಡಿಯುತ್ತಾ ಬಂದಿದೆ ಎನ್ನುವುದು ಸಂತೋಷದ ವಿಷಯ.
ಇದನ್ನೂ ಓದಿ: Rose Day ಒಂದೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್ ಡೇ ಪ್ರೇಮಿಗಳಿಗಷ್ಟೇ ಸೀಮಿತವಲ್ಲ !