ದೆಹಲಿಯಲ್ಲಿ ಮಸಲತ್ತು: ದೇವೇಗೌಡ, ಕುಮಾರಸ್ವಾಮಿ ಬೆನ್ನಲ್ಲೇ ಇನ್ನಿಬ್ಬರು ನಾಯಕರ ಭೇಟಿಗೆ ಮುಂದಾದ ಸತೀಶ್
ಸಚಿವ ರಾಜಣ್ಣಗೆ ಹನಿಟ್ರ್ಯಾಪ್ ಯತ್ನ ವಿಚಾರದಲ್ಲಿ ಗರಂ ಆಗಿರುವ ಸಚಿವ ಸತೀಶ್ ಜಾರಕಿಹೊಳಿ ದೆಹಲಿ ನಾಯಕರಿಗೆ ದೂರು ನೀಡಲು ಹೋಗಿದ್ದಾರೆ. ಆದರೆ, ಇದೇ ಹೊತ್ತಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಜೊತೆಗಿನ ಭೇಟಿ ಭಾರಿ ಊಹಾಪೋಹಗಳಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಇನ್ನಿಬ್ಬರು ಉನ್ನತ ನಾಯಕರ ಭೇಟಿಗೆ ಸತೀಶ್ ಮುಂದಾಗಿದ್ದಾರೆ ಎನ್ನಲಾಗಿದೆ.

ನವದೆಹಲಿ, ಮಾರ್ಚ್ 27: ಶತ್ರುವಿನ ಶತ್ರು ಮಿತ್ರ ಎಂಬುದು ಎದುರಾಳಿಗಳನ್ನು ಹಣಿಯಲು ಬಳಸುವ ರಾಜಕೀಯ ರಣತಂತ್ರ. ಈಗ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅದೇ ತಂತ್ರ ಹೆಣೆದಿದ್ದಾರಾ ಎಂಬ ಅನುಮಾನ ಸೃಷ್ಟಿಯಾಗಿದೆ. ಯಾಕೆಂದರೆ, ಹನಿಟ್ರ್ಯಾಪ್ (Honeytrap) ಪ್ರಕರಣ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ, ಹೈಕಮಾಂಡ್ಗೆ ದೂರು ನೀಡುತ್ತೇನೆ ಎಂದು ದೆಹಲಿಗೆ ತೆರಳಿದ್ದ ಸತೀಶ್ ಜಾರಕಿಹೊಳಿ, ಎದುರಾಳಿ ಪಕ್ಷದ ನಾಯಕನ ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy), ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಇನ್ನಿಬ್ಬರು ನಾಯಕರ ಭೇಟಿಗೆ ಮುಂದಾಗಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಈಗ ಕೇಂದ್ರ ಸಚಿವರು. ಮತ್ತೊಂದೆಡೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ. ಇವರಿಬ್ಬರ ಭೇಟಿಯೇ ಈಗ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ದೆಹಲಿಯಲ್ಲಿ ಕುಮಾರಸ್ವಾಮಿ ಜತೆ ಡಿನ್ನರ್ ಮೀಟಿಂಗ್ ಮಾಡಿದ್ದಾರೆ, ದೇವೇಗೌಡರ ಜತೆಗೂ ಗುಪ್ತ ಸಭೆ ನಡೆಸಿದ್ದಾರೆ. ಈ ಭೇಟಿಯ ಅಜೆಂಡಾ ಏನು? ಈ ಭೇಟಿಯ ಬಳಿಕ ರಾಜಕೀಯದ ಯಾವ ದಾಳ ಉರುಳುತ್ತೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಬೆಂಗಳೂರಿಗೆ ಬಂದಮೇಲೆ ಎಲ್ಲವನ್ನೂ ಹೇಳುತ್ತೇನೆ ಎಂದು ಸತೀಶ್ ಹೇಳಿದ್ದು, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಗರಂ ಆಗೇ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕಾಂಗ್ರೆಸ್ ವಕ್ತಾರ. ಅವರದ್ದು ಯಾವ ರೀತಿಯ ಭೇಟಿ ಎಂದು ಅವರನ್ನೇ ಕೇಳಿ ಎಂಬುದಾಗಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ಹನಿಟ್ರ್ಯಾಪ್ ಮಾಡಲು ಬಂದ ಯುವತಿ ಯಾರು? ಚಹರೆ ಬಿಚ್ಚಿಟ್ಟ ರಾಜಣ್ಣ
ಏತನ್ಮಧ್ಯೆ, ಸಚಿವ ಮಹದೇವಪ್ಪ, ‘‘ಗುಡಿಸಲಿಗೆ ಬೆಂಕಿ ಹಚ್ಚಬೇಡಿ’’ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಬೆನ್ನಲ್ಲೇ ಖರ್ಗೆ ಭೇಟಿಯಾದ ಸಾಹುಕಾರ್!
ಕುಮಾರಸ್ವಾಮಿ ಭೇಟಿ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡಿದ್ದಾರೆ. ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಮತ್ತಿಬ್ಬರು ದೊಡ್ಡ ನಾಯಕರನ್ನು ಭೇಟಿ ಮಾಡಬೇಕು ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಮಧ್ಯೆ ಅಸಮಾಧಾನವೂ ಇದೆ. ಹೀಗಾಗಿ, ದಳಪತಿಗಳ ಜತೆ ಭೇಟಿ ಡಿಕೆ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ಯತ್ನ ಇರಬಹುದಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.