ಭ್ರಷ್ಟಾಚಾರ ವಿಚಾರದಲ್ಲಿ ಕಾಂಗ್ರೆಸ್ ಅಪ್ಪಟ ಚಿನ್ನ ಅಲ್ಲ: ಎಚ್ಡಿ ಕುಮಾರಸ್ವಾಮಿ ಆರೋಪ
ಗುತ್ತಿಗೆದಾರರ ಬಳಿ ಸರ್ಕಾರ ಕಮಿಷನ್ ಪಡೆಯುತ್ತಿರುವ ಕುರಿತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಪ್ರತಿಕ್ರಿಯಿಸಿದರು.
ಶಿವಮೊಗ್ಗ: ಗುತ್ತಿಗೆದಾರರ ಬಳಿ ಸರ್ಕಾರ ಕಮಿಷನ್ ಪಡೆಯುತ್ತಿರುವ ಕುರಿತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಪ್ರತಿಕ್ರಿಯಿಸಿದರು. ಗುತ್ತಿಗೆದಾರರ ಬಳಿ ಹಲವರು ಪರ್ಸೆಂಟೇಟ್ ಪಡೆಯುತ್ತಿದ್ದಾರೆ. ಕಾಮಗಾರಿಗಳಿಗೆ ಮಂಜೂರಾಗುವ ಶೇ 65ರಷ್ಟು ಅನುದಾನ ಮಧ್ಯವರ್ತಿಗಳ ಪಾಲಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಗುತ್ತಿಗೆದಾರರು ಯಾಕೆ ಕೆಲಸ ಮಾಡಬೇಕು? ಯಾಕೆ ಅವರಿವರ ಮನೆಬಾಗಿಲಿಗೆ ಹೋಗಿ ದುಂಬಾಲು ಬೀಳಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಈ ವ್ಯವಹಾರ ನಡೆದಿದೆ. ಕಾಂಗ್ರೆಸ್ನವರು ಅಪ್ಪಟ ಚಿನ್ನ ಏನಲ್ಲ. ಈ ಹಿಂದೆಯೂ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೆ. ಆಗ ಸಿದ್ದರಾಮಯ್ಯ ಅವರ 80 ಶಾಸಕರು ಮನೆಯಲ್ಲಿ ಮಲಗಿದ್ದರು. ಅವರಿಗೆಲ್ಲಾ ಈಗ ಪರ್ಸೆಂಟೇಜ್ ವಿರುದ್ಧ ಹೋರಾಟ ನೆನಪಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪಿಎಸ್ಐ ಅಕ್ರಮ ಪರೀಕ್ಷೆ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಈಶ್ವರಪ್ಪ ಅವರ ಬಂಧನದ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ಈಶ್ವರಪ್ಪ ಏನೂ ನನಗೆ ನೆಂಟರಲ್ಲ. ಅವರು ರಾಜೀನಾಮೆ ನೀಡಬೇಕೆಂದು ನಅನೇ ಒತ್ತಾಯಿಸಿದ್ದೆ. ನಾನು ಬಿಜೆಪಿ ಪರವಾಗಿ ಇರುವವನಲ್ಲ. ಸತ್ಯಾಸತ್ಯತೆ ಹೊರಗೆ ಬರುವ ದೃಷ್ಟಿಯಿಂದ ಈಶ್ವರಪ್ಪ ಅವರ ರಾಜೀನಾಮೆ ಅಗತ್ಯವಿತ್ತು. ಈಗ ಅವರ ಬಂಧನ ಅಗತ್ಯವಿಲ್ಲ. ಹಗರಣಗಳ ನೇಮಕಾತಿ ಸಂಸ್ಕೃತಿಗೆ ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದರು. ಕರ್ನಾಟಕದಲ್ಲಿಯೂ ಬುಲ್ಡೋಜರ್ ರಾಜಕಾರಣ ಆರಂಭಿಸುವ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಜನರು ಬೇಗ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ಲರೆ ಅಮಾಯಕರು ಬಲಿಪಶು ಆಗುತ್ತಾರೆ ಎಂದು ಹೇಳಿದರು.
ಪ್ರಚೋದನಕಾರಿ ವಾಟ್ಸ್ಯಾಪ್ ಸ್ಟೇಟಸ್ನಿಂದ ಗಲಭೆ ಉಂಟಾದ ಪ್ರಕರಣದ ತನಿಖೆಯನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಹುಬ್ಬಳ್ಳಿ ಗಲಭೆ ವಿಚಾರವಾಗಿ ಕಠಿಣ ಕ್ರಮಕ್ಕೆ ಸಲಹೆ ನೀಡಿದ್ದೆ. ರಾಜ್ಯದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಒಂದು ವರ್ಷ ಇದೇ ರೀತಿಯ ಪ್ರಕರಣಗಳು ನಡೆಯುತ್ತವೆ ಎಂದು ಮೊದಲೇ ಹೇಳಿದ್ದೆ. ರಾಜ್ಯದಲ್ಲಿ ಬೆಂಕಿ ಹಚ್ಚಲು ಬಿಜೆಪಿ ಹೊರಟಿದೆ. ಕಾಣದ ಕೈಗಳು ಹೇಳಿದಂತೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಅದಕ್ಕೆ ಕಾಂಗ್ರೆಸ್ನ ಒಂದು ಗುಂಪು ಸಾಥ್ ಕೊಟ್ಟಿದೆ. ಕಳೆದ 2 ತಿಂಗಳಿಂದ ಗಲಭೆ, ಗಲಾಟೆ ತಡೆಯಲು ಸರ್ಕಾರ ವಿಫಲವಾಗಿದೆ. ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಮೊದಲು ಬಂಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದರೆ ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಮೊದಲು ಬಂಧಿಸಬೇಕು. ಹಿಂದುತ್ವದ ಪರವಾಗಿ ಉಗ್ರ ಹೇಳಿಕೆಗಳನ್ನು ನೀಡುತ್ತಿರುವವರೇನೂ ಹಿಂದೂ ಧರ್ಮದ ಗುತ್ತಿಗೆ ಹಿಡಿದಿದ್ದಾರೆಯೇ ಎಂದು ಪ್ರಶ್ನಿಸಿದರು.
ದ್ವಿತೀಯ ಪಿಯು ಮಕ್ಕಳಿಗೆ ಶುಭ ಹಾರೈಸಿದ ಎಚ್ಡಿಕೆ
ರಾಜ್ಯದಲ್ಲಿ ಇಂದಿನಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಭ ಹಾರೈಸಿದರು. ಪಿಯುಸಿ ಪರೀಕ್ಷೆ ಶೈಕ್ಷಣಿಕ ಜೀವನದ ಮಹತ್ವದ ಘಟ್ಟ. ಮುಂದಿನ ಬದುಕಿಗೆ ದಿಕ್ಸೂಚಿ. ಭಯ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಉಜ್ವಲ ಭವಿಷ್ಯ ನಿಮ್ಮದಾಗಲಿ. ಉತ್ತೀರ್ಣರಾಗಿ ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುವುದೇ ಗುರಿಯಾಗಲಿ. ಆ ಗೆಲುವು ನಿಮ್ಮ ಪೋಷಕರ ಕಣ್ಣಲ್ಲಿ ಆನಂದಬಾಷ್ಪಕ್ಕೆ ಕಾರಣವಾಗಲಿ. ನನ್ನ ಪ್ರಕಾರ ಬದುಕಿಗಿಂತ ದೊಡ್ಡದು ಬೇರಾವುದೂ ಇಲ್ಲ. ಪರೀಕ್ಷೆ ಕಡೆಗಣಿಸಿ ಜೀವನದುದ್ದಕ್ಕೂ ಬವಣೆಗೆ ಸಿಲುಕಿಕೊಳ್ಳಬೇಡಿ. ನಮ್ಮ ನಂಬಿಕೆ ನಮಲ್ಲೇ ಇರಲಿ, ನಿಮ್ಮ ಗುರಿ ದಿಗಂತದಷ್ಟು ವಿಶಾಲವಿರಲಿ. ನೆನಪಿರಲಿ ಈ ಒಂದು ಪರೀಕ್ಷೆ ನಿಮ್ಮ ಬದುಕಿನ ಪಥವನ್ನೇ ಬದಲಿಸುತ್ತದೆ ಎಂದು ಟ್ವೀಟ್ ಮೂಲಕ ಶುಭ ಕೋರಿದರು.
ಇದನ್ನೂ ಓದಿ: ಮಾಧ್ಯಮಗಳು ಸಮಾಜಕ್ಕೆ ಉತ್ತರದಾಯಿ ಆಗಬೇಕು: ಎಚ್ಡಿ ಕುಮಾರಸ್ವಾಮಿ ಒತ್ತಾಯ
ಇದನ್ನೂ ಓದಿ: ಎಸಿಬಿ ದಾಳಿಯಿಂದ ಏನು ಪ್ರಯೋಜನ ಎಂದ ಜೆಡಿಎಸ್ ನಾಯಕ ಎಚ್ಡಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಡಕ್ ಉತ್ತರ